ಲಾಕ್ ಡೌನ್ ಮುಗಿಯುವ ತನಕ ಬೀಡಿ ಕಾರ್ಮಿಕರಿಗೆ ಕೆಲಸ ನೀಡುವ ಬದಲು ತಾತ್ಕಾಲಿಕ ಪರಿಹಾರ ನೀಡಬೇಕು. ಉದಾಹರಣೆಗೆ ಕೇರಳ ಸರಕಾರ ಸುಮಾರು 2 ಕೋಟಿ ಪ್ಯಾಕೇಜ್ ಮೀಸಲಿಟ್ಟು ಈಗಾಗಲೇ ಕ್ಷೇಮ ನಿಧಿ ಮಂಡಳಿಯಿಂದ ಪ್ರತೀ ಬೀಡಿ ಕಾರ್ಮಿಕರ ಬ್ಯಾಂಕ್ ಖಾತೆಗೆ ರೂ.3000 ಪಾವತಿಸಿದೆ. ಇದೇ ಮಾದರಿಯಲ್ಲಿ ಕರ್ನಾಟಕ ರಾಜ್ಯ ಸರಕಾರ ಕೂಡಾ ಜಾರಿಗೆ ತರಬೇಕು ಎಂದು ಎಐಟಿಯುಸಿ ಮುಖಂಡ ಸುರೇಶ್ ಕುಮಾರ್ ಬಂಟ್ವಾಳ್ ಒತ್ತಾಯಿಸಿದ್ದಾರೆ.
ಕೊರೋನಾ ಮಹಾಮಾರಿ ಹರಡುತ್ತಿರುವ ಅಪಾಯದ ಪರಿಸ್ಥಿತಿಯ ಈ ಸಂದರ್ಭದಲ್ಲಿ ಅಸಂಘಟಿತ ಕ್ಷೇತ್ರದಲ್ಲಿ ದುಡಿಯುತ್ತಿರುವ ದ.ಕ ಮತ್ತು ಉಡುಪಿ ಉಭಯ ಜಿಲ್ಲೆಗಳ ಸರಿಸುಮಾರು 2 ಲಕ್ಷದ 11 ಸಾವಿರ ಬೀಡಿ ಕಾರ್ಮಿಕರು ಕಳೆದ ಒಂದು ತಿಂಗಳಿಂದೀಚೆಗೆ ಕಷ್ಟದಿಂದ ಜೀವನ ಸಾಗಿಸುತ್ತಿದ್ದಾರೆ. ಕಳೆದ 22 ರಂದು ಆರಂಭವಾದ ಲಾಕ್ ಡೌನ್ ಬಳಿಕ ಎಲ್ಲಾ ಬೀಡಿ ಕಂಪೆನಿಗಳು ಮುಚ್ಚಿತ್ತು. ಇದರ ಪರಿಣಾಮ ತಿಂಗಳುಗಳ ಕಾಲ ಕೂಲಿ, ಕೆಲಸವಿಲ್ಲದೇ ಬದುಕು ದುಸ್ಥರವಾಗಿರುವುದಂತೂ ನಿಜ. ರಾಜ್ಯ ಸರಕಾರ ಅಸಂಘಟಿತ ವಲಯದ ಕೆಲವೊಂದು ವಿಭಾಗದ ಕಾರ್ಮಿಕರಿಗೆ ಪರಿಹಾರ ಘೋಷಿಸಿದ್ದರೂ ಬಹಳ ಕಡಿಮೆ ಕೂಲಿಯಲ್ಲಿ ಬದುಕುವ ಬೀಡಿ ಕಾರ್ಮಿಕರನ್ನು ಕಡೆಗಣಿಸಿರುವುದು ದುರಂತ ಎಂದವರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ಜಿಲ್ಲಾ ನಿಯೋಗ ಎಪ್ರಿಲ್ 17 ರಂದು ಮಾನ್ಯ ಜಿಲ್ಲಾಧಿಕಾರಿಯನ್ನು ಮುಖತಃ ಭೇಟಿಯಾಗಿ ಬೀಡಿ ಕಾರ್ಮಿಕರ ವಾಸ್ತವ ಸ್ಥಿತಿಯನ್ನು ಗಮನಕ್ಕೆ ತಂದು ಮನವರಿಕೆ ಮಾಡಲಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಪರಿಣಾಮ ಜಿಲ್ಲಾಧಿಕಾರಿ ಕಚೇರಿಯಲ್ಲಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಉಪಸ್ಥಿತಿಯಲ್ಲಿ ಎಪ್ರಿಲ್ 18 ರಂದು ಮಾಲೀಕರು ಮತ್ತು ಕಾರ್ಮಿಕ ಸಂಘಟನೆಗಳನ್ನೊಳಗೊಂಡ ಸಭೆಯನ್ನು ಕರೆಯಲಾಗಿತ್ತು. ಸಹಾಯ ಕಾರ್ಮಿಕ ಆಯುಕ್ತರ ಆಹ್ವಾನದ ಮೇರೆಗೆ ನಡೆದ ಈ ಸಭೆಗೆ ಎಐಟಿಯುಸಿ ಕಾರ್ಮಿಕ ಸಂಘಟನೆಗೆ ಆಹ್ವಾನ ಇರಲಿಲ್ಲ. ಹೀಗಾಗಿ ನಮ್ಮ ಅನುಪಸ್ಥಿತಿಯಲ್ಲಿ ನಡೆದ ಈ ಸಭೆಯಲ್ಲಿ ಎಪ್ರಿಲ್ 20 ರಿಂದ ಶೇ.50 ರಷ್ಟು ಬೀಡಿ ಕೆಲಸ ಹಾಗೂ ಮೇ ತಿಂಗಳಲ್ಲಿ ಬೋನಸ್, ನೀಡುವ ಬಗ್ಗೆ ತೀರ್ಮಾನಿಸಲಾಗಿತ್ತು. ಒಂದು ವೇಳೆ ಈ ಸಭೆಗೆ ಎಐಟಿಯುಸಿ ಗೆ ಆಹ್ವಾನವಿರುತ್ತಿದ್ದರೆ ಕೊರೋನಾ ಹರಡುತ್ತಿರುವ ಈ ಸಂದರ್ಭ ಅಸಂಘಟಿತ ವಲಯದ ಮಹಿಳಾ ಬೀಡಿ ಕಾರ್ಮಿಕರನ್ನು ಒಟ್ಟಾಗಿ ಬ್ರಾಂಚಿಗೆ ಕರೆಸಿ ಸಾಮೂಹಿಕವಾಗಿ ಕೆಲಸ ನೀಡುವ ಕ್ರಮಗಳ ಈ ತೀರ್ಮಾನವನ್ನು ನಾವು ಸುತಾರಾಂ ಒಪ್ಪುತ್ತಿರಲಿಲ್ಲ, ಬದಲಾಗಿ ಕೊರೋನಾ ಮುಗಿಯುವವರೆಗೆ ಕೇರಳ ಮಾದರಿಯಲ್ಲಿ ಬೀಡಿ ಕಾರ್ಮಿಕರಿಗೆ ಧನಸಹಾಯಕ್ಕೆ ವಿನಂತಿಸುತ್ತಿದ್ದೆವು ಎಂದು ಅವರು ಹೇಳಿದ್ದಾರೆ.
ಲಾಕ್ ಡೌನ್ ಸಂದರ್ಭ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂಬ ನಿಯಮವಿದ್ದರೂ ಬೀಡಿ ಕಂಪನಿಗಳಲ್ಲಿ ನಿಯಮ ಪಾಲಿಸಲು ಕಷ್ಟ. ಶೇಕಡಾ 80 ಕ್ಕಿಂತಲೂ ಹೆಚ್ಚಿನ ಕಾರ್ಮಿಕರು ಸುಮಾರು 45 ವರ್ಷ ಪ್ರಾಯ ದಾಟಿದವರೇ, ಕಾರಣ ಪ್ರಾಯಸ್ಥರು ಕಡ್ಡಾಯವಾಗಿ ಮನೆಯಲ್ಲೇ ಉಳಿಯಬೇಕೆಂಬ ವಿಶ್ವ ಆರೋಗ್ಯ ಸಂಸ್ಥೆಯ ನಿಯಮವನ್ನು ಪಾಲಿಸಲೇಬೇಕಾಗಿದೆ. ಈ ಹಿನ್ನೆಲೆಯಲ್ಲಿ ಲಾಕ್ ಡೌನ್ ಮುಗಿಯುವ ತನಕ ಕಾರ್ಮಿಕರಿಗೆ ಕೆಲಸ ನೀಡುವ ಬದಲು ತಾತ್ಕಾಲಿಕ ಪರಿಹಾರ ನೀಡಬೇಕು. ಉದಾಹರಣೆಗೆ ಕೇರಳ ಸರಕಾರ ಸುಮಾರು 2 ಕೋಟಿ ಪ್ಯಾಕೇಜ್ ಮೀಸಲಿಟ್ಟು ಈಗಾಗಲೇ ಕ್ಷೇಮ ನಿಧಿ ಮಂಡಳಿಯಿಂದ ಪ್ರತೀ ಬೀಡಿ ಕಾರ್ಮಿಕರ ಬ್ಯಾಂಕ್ ಖಾತೆಗೆ ರೂ.3000 ಪಾವತಿಸಿದೆ. ಇದೇ ಮಾದರಿಯಲ್ಲಿ ಕರ್ನಾಟಕ ರಾಜ್ಯ ಸರಕಾರ ಕೂಡಾ ಜಾರಿಗೆ ತಂದರೆ ಖಂಡಿತವಾಗಿಯೂ ಯಾವುದೇ ಸಮಸ್ಯೆಯಿಲ್ಲದೇ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಕೊರೋನಾ ಸೋಂಕು ಹರಡುವುದನ್ನು ತಡೆಗಟ್ಟಬಹುದು. ಈ ಮುಖೇನ ಬೀಡಿ ಕಾರ್ಮಿಕರಿಗೆ ಸ್ವಲ್ಪ ಮಟ್ಟಿಗಾದರೂ ಬದುಕಲು ಅವಕಾಶ ಕಲ್ಪಿಸಿದಂತೆ ಆಗಬಹುದು ಎಂದು ಮುಖಂಡ ಸುರೇಶ್ ಕುಮಾರ್ ಬಂಟ್ವಾಳ್ ತಿಳಿಸಿದ್ದಾರೆ.