ಬೆಳ್ತಂಗಡಿ: ಬಂಟ್ವಾಳ ತಾಲೂಕಿನ ಮಧ್ವ ಎಂಬಲ್ಲಿ ಜನರು ಕೊರೋನ ನಿಗ್ರಹಿಸಲು ಪ್ರತಿ ಗುರುವಾರ ಉಪವಾಸ ಕೈಗೊಂಡಿದ್ದಾರೆ. ಇಲ್ಲಿನ ಮಧ್ವ ಯಕ್ಷಕೂಟ ಸಂಘ ಈ ಹೊಸ ಪ್ರಯತ್ನದಲ್ಲಿ ತೊಡಗಿಕೊಂಡಿದೆ. ಈ ಸಂಘದ ಸದಸ್ಯರು ಆರಂಭಿಸಿದ ಈ ಉಪವಾಸ ಕಾರ್ಯಕ್ರಮವನ್ನು ಈಗ ಮಧ್ವದ ಜನರೂ ಒಬ್ಬೊಬ್ಬರಾಗಿ ಪಾಲಿಸುತ್ತಿದ್ದಾರೆ. ಕೊರೋನ ಮುಕ್ತವಾಗುವವರೆಗೆ ಉಪವಾಸದ ಸಂಕಲ್ಪ ತೊಟ್ಟಿದ್ದಾರೆ.
ವೈದ್ಯರು, ಆಶಾ ಕಾರ್ಯಕರ್ತೆಯರು, ಪೊಲೀಸರು ಕೊರೋನ ವಿರುದ್ಧ ಅವರಿತವಾಗಿ ಶ್ರಮಿಸುತ್ತಿದ್ದು, ಅವರು ಆರೋಗ್ಯವಂತಾರಗಿರುವಂತೆ ಹಾಗೂ ಕೊರೋನ ನಿಗ್ರಹವಾಗಿಲಿ ಎಂದು ಪ್ರತಿ ಗುರುವಾರ ಉಪವಾಸ ಕುಳಿತು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.
ಇಲ್ಲಿನ ಜನರು ಸ್ವಯಂ ಪ್ರೇರಿತರಾಗಿ ಎರಡು ವಾರಗಳಿಂದ ಈ ಕಾರ್ಯ ಮಾಡುತ್ತಿದ್ದಾರೆ. ಗುರುವಾರದಂದು ಬೆಳಗ್ಗೆ ಮಧ್ಯಾಹ್ನ ಉಪವಾಸವಿದ್ದು, ಕೊರೋನ ಉಪಶಮನಕ್ಕೆ ದೇವರಲ್ಲಿ ಪ್ರಾರ್ಥಿಸಿ ರಾತ್ರಿ ಹೊತ್ತು ಫಲಾಹಾರ ಸೇವೆನೆ ಮಾಡುತ್ತಾರೆ.
ಯಕ್ಷ ಕೂಟ ಸಂಘ ಸೇರಿದಂತೆ ಮಧ್ವ ಪ್ರದೇಶದಲ್ಲಿ ಸುಮಾರು 40ಕ್ಕೂ ಹೆಚ್ಚು ಜನರು ಉಪವಾಸ ಕುಳಿತುಕೊಳ್ಳುವ ಮೂಲಕ ವಿನೂತನವಾಗಿ ಕೊರೋನ ವಿರುದ್ಧ ಹೋರಾಡುತ್ತಿದ್ದಾರೆ. ಉಪವಾಸದಿಂದ ಪೊಲೀಸರಿಗೆ, ಆಶಾ ಕಾರ್ಯಕರ್ತೆಯರಿಗೆ, ವ್ಶೆದ್ಯರಿಗೆ ನೈತಿಕ ಬೆಂಬಲ ಒದಗಿಸುವುದು ತಮ್ಮ ಉದ್ದೇಶ ಎಂದು ಅವರು ತಿಳಿಸುತ್ತಾರೆ.
ಉಪವಾಸಕ್ಕೆ ಪೇಜಾವರ ಶ್ರೀಗಳೇ ಪ್ರೇರಣೆ
ಪೇಜಾವರದ ಹಿರಿಯ ಯತಿ ವಿಶ್ವೇಶತೀರ್ಥ ಶ್ರೀಗಳು ಕೃಷ್ಣೈಕ್ಯರಾಗುವ ಕೆಲವು ದಿನಗಳ ಹಿಂದ ಮಧ್ವ ಪ್ರದೇಶಕ್ಕೆ ಭೇಟಿ ನೀಡಿದ್ದರು. ಇಲ್ಲಿನ ಜನರಿಗೆ ಆಶೀರ್ವಚನ ನೀಡಿದ್ದರು. ಅವರ ಮಾತುಗಳೇ ಈ ಉಪವಾಸಕ್ಕೆ ಪ್ರೇರಣೆ. ಅವರಿಂದು ಬದುಕಿರುತ್ತಿದ್ದರೆ ಖಂಡಿತವಾಗಿಯೂ ಉಪವಾಸ ಕುಳಿತುಕೊಳ್ಳುತ್ತಿದ್ದರು ಎಂದು ಜನರು ಅಭಿಪ್ರಾಯ ವ್ಯಕ್ತ ಪಡಿಸುತ್ತಾರೆ.
ಕಾವಲಪಡೂರು ಗ್ರಾಪಂ ಸದಸ್ಯ ಆನಂದ ಪೂಜಾರಿ ಊರಿನ ಪ್ರಮುಖರಾದ ಚಂದ್ರಹಾಸ್ ಶೆಟ್ಟಿ, ರಮೇಶ್ ನಾಯ್ಕ, ಜಿಲ್ಲಮಟ್ಟದ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಗೋಪಾಲಕೃಷ್ಣ ಬಂಗೇರ, ನಾರಾಯಣ ಶೆಟ್ಟಿ ಮಧ್ವ, ಸತೀಶ್ ಶೆಟ್ಟಿ, ಬೇಬಿ ಕುಂದರ್ ಮಧ್ವ ಮೊದಲಾದ ಈ ಕಾರ್ಯದಲ್ಲಿ ಜೊತೆಗೂಡಿದ್ದಾರೆ.
ಪೇಜಾವರ ಶ್ರೀಗಳ ಮಾರ್ಗದರ್ಶನದಂತೆ ನಡೆಯುತ್ತೇವೆ
ಕೃಷ್ಣೈಕ್ಯರಾದ ಪೇಜಾವರ ಹಿರಿಯ ಯತಿಗಳು ಇಲ್ಲಿಗೆ ಬಂದು ಜನರಿಗೆ ಮಾರ್ಗದರ್ಶನ ಮಾಡಿರುತ್ತಾರೆ. ಇಲ್ಲನ ಮಧ್ವ ಕಟ್ಟೆಯನ್ನು ಕಂಡು ಯತಿಗಳು ಸಂತೋಷಗೊಂಡಿದ್ದರು. ಮಧ್ವವನ್ನು ಅಭಿವೃದ್ಧಿ ಪಡಿಸಬೇಕು ಎಂಬುದು ಅವರ ಕನಸಾಗಿತ್ತು. ಅವರು ತೋರಿಸಿದ ಪಥದಲ್ಲಿ ನಾವು ಮುನ್ನಡೆಯುತ್ತೇವೆ. ಭಾರತದಿಂದ ಕೊರೋನ ಸಂಪೂರ್ಣವಾಗಿ ತೊಲಗುವವರೆಗೂ ಪ್ರತಿ ಗುರುವಾರ ಉಪವಾಸ ಮಾಡಬೇಕೆಂದು ನಿರ್ಧರಿಸಿದ್ದೇವೆ. ಇಲ್ಲಿನ ಜನತೆಯೂ ಸಹಕರಿಸುತ್ತಿದ್ದಾರೆ. ಸ್ವಯಂಪ್ರೇರಿತರಾಗಿ ಮುಂದೆ ಬರುತ್ತಿದ್ದಾರೆ ಎನ್ನುತ್ತಾರೆ ಯಕ್ಷಕೂಟ ಸಂಚಾಲಕ ಭಾಸ್ಕರ ಶೆಟ್ಟಿ ಮಧ್ವ