ಪರಿಜ್ಞಾನ ಇದ್ದ ಚುನಾಯಿತ ಪ್ರತಿನಿಧಿಗಳು ಶವ ಸಂಸ್ಕಾರದ ಬಗ್ಗೆ ನಡೆಸಿಕೊಂಡ ರೀತಿ ಸರಿಯಲ್ಲ. ವಿಶೇಷ ಸಂದರ್ಭಗಳಲ್ಲಿ ಯಾವ ಆಸ್ಪತ್ರೆಯಲ್ಲಿ ಸಾವು ಸಂಭವಿಸುತ್ತದೆಯೋ ಆ ಆಸ್ಪತ್ರೆಯ ಹತ್ತಿರದಲ್ಲಿರುವ ಚಿತಾಗಾರದಲ್ಲೇ ಶವ ಸಂಸ್ಕಾರ ನಡೆಸಬೇಕು. ಅದರಲ್ಲೂ ವಿದ್ಯುತ್ ಚಿತಾಗಾರ ಇದ್ದರೆ ಅದಕ್ಕೆ ಆದ್ಯತೆ ನೀಡಬೇಕು. ಚುನಾಯಿತ ಪ್ರತಿನಿಧಿಗಳ ಪ್ರಭಾವಕ್ಕೆ ಮಣಿದು ಪಾರ್ಥಿವ ಶರೀರಕ್ಕೆ ಅವಮಾನ ಮಾಡುವುದು ಸರಿಯಲ್ಲ ಎಂದು ಮಾಜಿ ಸಚಿವ ಬಿ ರಮಾನಾಥ ರೈ ತೀವ್ರ ಖೇದ ವ್ಯಕ್ತಪಡಿಸಿದ್ದಾರೆ.
ವಿಶೇಷ ಸಂದರ್ಭಗಳಲ್ಲಾದರೂ ಪಾರ್ಥಿವ ಶರೀರದ ಸಂಸ್ಕಾರ ಎಲ್ಲೆಲ್ಲೋ ದಾರಿಯಲ್ಲಿ ಮಾಡಲಿಕ್ಕೆ ಬರುವುದಿಲ್ಲ. ಅಥವಾ ಯಾರೋ ಖಾಸಗಿ ಜಾಗ ನೀಡಿಯೂ ಮಾಡಲಿಕ್ಕಾಗುವುದಿಲ್ಲ. ಅದಕ್ಕೆ ಅದರದ್ದೇ ಆದ ರೀತಿ-ನಿಯಮ, ಕಾನೂನುಗಳಿರುತ್ತವೆ. ಈ ಎಲ್ಲಾ ನಿಯಮಗಳನ್ನು ಜಾರಿಗೆ ತರುವಂತದ್ದು ಜಿಲ್ಲಾಡಳಿತ. ಇದಕ್ಕೆ ಯಾರದೆ ಕಟ್ಟಪ್ಪಣೆ ಬೇಕಾಗಿಲ್ಲ. ಜಿಲ್ಲಾಡಳಿತಕ್ಕೆ ಕಾನೂನಿನ ತಿಳಿವಳಿಕೆ ಇರುತ್ತದೆ. ಅದಕ್ಕೆ ಯಾವುದೇ ವ್ಯಕ್ತಿಗಳು ಮಧ್ಯಪ್ರವೇಶ ಮಾಡುವ ಅಗತ್ಯವಿರುವುದಿಲ್ಲ. ಸಾಮಾನ್ಯ ಜನರಿಗೆ ಈ ಬಗ್ಗೆ ತಿಳುವಳಿಕೆ ಇರುವುದಿಲ್ಲ. ಅಂದ ಮಾತ್ರಕ್ಕೆ ಜನಪ್ರತಿನಿಧಿಗಳೂ ಸಾಮಾನ್ಯ ಜ್ಞಾನ ಇಲ್ಲದಂತೆ ವರ್ತಿಸುವುದು ಸರಿಯಲ್ಲ. ಪಾರ್ಥಿವ ಶರೀರಕ್ಕೆ ಅದರದ್ದೇ ಆದ ಗೌರವ ಇರುತ್ತದೆ. ಅದನ್ನು ಗೌರವಿಸುವುದು ಮಾನವ ಲಕ್ಷಣ. ಅದು ಬಿಟ್ಟು ಎಲ್ಲವೂ ಗೊಂದಲಮಯ ಆದ ನಂತರ ಖಾಸಗಿ ಜಾಗ ಬೇಕಾದರೂ ನೀಡುತ್ತೇನೆ ಎನ್ನುವ ಮೂಲಕ ಗೊಂದಲಕ್ಕೆ ತೇಪೆ ಹಚ್ಚಿದರೆ ಮಣ್ಣುಪಾಲಾದ ಗೌರವ ಮರಳಿ ಬರುವುದಿಲ್ಲ ಎಂದು ರಮಾನಾಥ ರೈ ಪ್ರಕಟಣೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಕಾಂಗ್ರೆಸ್ ನಿಯೋಗ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಚರ್ಚಿಸಲಾಗಿದೆ. ಆಗಿರುವ ಪ್ರಮಾದವನ್ನು ಜಿಲ್ಲಾಧಿಕಾರಿಗಳು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಅಚಾತುರ್ಯಗಳು ನಡೆಯಬಾರದು ಎಂಬ ಮನವಿಯನ್ನು ಡೀಸಿಗೆ ಮಾಡಲಾಗಿದೆ. ಈ ಬಗ್ಗೆ ಜಾಗರೂಕತೆ ವಹಿಸುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದರು. ನಿಯೋಗದಲ್ಲಿ ಶಾಸಕರಾದ ಯು ಟಿ ಖಾದರ್, ಐವನ್ ಡಿ’ಸೊಜ, ಜೆ ಆರ್ ಲೋಬೋ, ಮೊಯಿದಿನ್ ಬಾವಾ, ಮಿಥುನ್ ರೈ ಮೊದಲಾದವರು ಜೊತೆಗಿದ್ದರು ಎಂದು ರೈ ಮಾಹಿತಿ ನೀಡಿದರು.