ಕೊರೊನಾಕ್ಕೆ ಸಂಬಂಧಿಸಿ ರಾಜ್ಯದಲ್ಲಿ 15 ಹೊಸ ಪ್ರಕರಣಗಳು ವರದಿಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಒಂದು ಪ್ರಕರಣವೂ ಸೇರಿದಂತೆ ಬೆಂಗಳೂರು ಮತ್ತು ಬೆಳಗಾವಿಯ ತಲಾ 6, ಮಂಡ್ಯ ಮತ್ತು ಚಿಕ್ಕಬಳ್ಳಾಪುರದ ತಲಾ 1 ಪ್ರಕರಣಗಳಿವೆ.
ಬಂಟ್ವಾಳದ 33 ವರ್ಷದ ಮಹಿಳೆಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು, ಮತ್ತೆ ಬಂಟ್ವಾಳದವರಿಗಷ್ಟೇ ಅಲ್ಲ, ಜಿಲ್ಲೆಯ ಜನರು ಆತಂಕದಲ್ಲಿದ್ದಾರೆ.
ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಬಂಟ್ವಾಳದ ಕಸಬಾ ನಿವಾಸಿ (ರೋಗಿ ಸಂಖ್ಯೆ 409) ಚಿಕಿತ್ಸೆ ಪಡೆಯುತ್ತಿದ್ದು, ಐಸಿಯುನಲ್ಲಿದ್ದಾರೆ. ಅವರಿಗೆ ವೆಂಟಿಲೇಟರ್ ಅಳವಡಿಸಲಾಗಿದ್ದು, ಅಲ್ಲಿಯೇ ಚಿಕಿತ್ಸೆ ಮುಂದುವರಿಸಲಾಗುತ್ತಿದೆ. ಈ ಮಹಿಳೆಯ ನಿಕಟ ಸಂಪರ್ಕದಲ್ಲಿರುವ 33 ವರ್ಷದ ಮಹಿಳೆಗೆ ಸೋಂಕು ಶನಿವಾರ ದೃಢಪಟ್ಟಿದೆ
ಬಂಟ್ವಾಳ ಪೇಟೆಯ 4, ಒಟ್ಟು 6 ಮಂದಿಗೆ ಸೋಂಕು: ಬಂಟ್ವಾಳ ಪೇಟೆಯ ಕಸಬಾ ಗ್ರಾಮದ ಒಟ್ಟು 4 ಮಂದಿಗೆ ಸೋಂಕು ತಗಲಿದಂತಾಗಿದ್ದು, ಇವರ ಪೈಕಿ 2 ಮಂದಿ ಮೃತರಾಗಿದ್ದಾರೆ. ಉಳಿದಂತೆ ಸಜೀಪನಡು ಮತ್ತು ತುಂಬೆ ಗ್ರಾಮದವರು ಗುಣಮುಖರಾಗಿದ್ದಾರೆ. ಕಳೆದ ಭಾನುವಾರವೇ ಇಂದು ಪಾಸಿಟಿವ್ ಆದ ಮಹಿಳೆಗೆ ಮಂಗಳೂರಿನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.
ಬಂಟ್ವಾಳದ ಹಿಸ್ಟರಿ ಹೀಗಿದೆ: ಎ.19ರಂದು ಬಂಟ್ವಾಳ ಕಸಬಾದ ಸುಮಾರು 50 ವರ್ಷದ ಮಹಿಳೆಯೊಬ್ಬರು ಮೃತಪಟ್ಟಿದ್ದು, ಅವರಿಗೆ ಕೊರೊನಾ ಇರುವುದೂ ದೃಢಪಟ್ಟಿತ್ತು. ಏ.23ರಂದು ಅದೇ ಮನೆಯ ಮಹಿಳೆ (ಮೃತ ಮಹಿಳೆಯ ಅತ್ತೆ) ಮೃತಪಟ್ಟಿದ್ದರು. ಈ ಮನೆಯವರ ನೆರೆಮನೆಯ 67 ವರ್ಷದ ಮಹಿಳೆಗೂ ಸೋಂಕು ತಗಲಿದ್ದು, ಅವರನ್ನು ವೆನ್ಲಾಕ್ ಗೆ ದಾಖಲಿಸಲಾಗಿತ್ತು. ಇದೀಗ ಈ ಮಹಿಳೆಯ ನಿಕಟ ಸಂಪರ್ಕದಲ್ಲಿರುವ ಮಹಿಳೆಗೆ ಸೋಂಕು ತಗಲಿದೆ.