ಕೊರೊನೋ ಸೋಂಕಿತ ಮಹಿಳೆಯ ಅಂತ್ಯಸಂಸ್ಕಾರವನ್ನು ನಡೆಸಿದ ಬಿ.ಸಿ.ರೋಡಿನ ಕೈಕುಂಜೆಯಲ್ಲಿರುವ ಸಾರ್ವಜನಿಕ ಹಿಂದು ರುದ್ರಭೂಮಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಸ್ಥಳೀಯರೊಂದಿಗೆ ಮಾತನಾಡಿದ ಅವರು, ಮೃತದೇಹದ ಅಂತ್ಯಸಂಸ್ಕಾರವು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿರುವ ಮಾರ್ಗಸೂಚಿಗಳ ಪ್ರಕಾರವೇ ನಡೆದಿದ್ದು, ಆತಂಕ ಬೇಡ. ಇದರಿಂದ ಯಾರಿಗೂ ತೊಂದರೆ ಇಲ್ಲ, ಜನಸಾಮಾನ್ಯರು ತಪ್ಪು ಕಲ್ಪನೆಗೀಡಾಗುವುದು ಬೇಡ ಎಂದರು. ಈ ಸಂದರ್ಭ ಮಾತನಾಡಿದ ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು, ಮೃತದೇಹ ದಹನವಾದ ಬಳಿಕ ದೇಹದ ಬೂದಿಯಿಂದ ಯಾವುದೇ ವೈರಾಣು ಹರಡುವಿಕೆ ಆಗುವುದಿಲ್ಲ. ಆದ್ದರಿಂದ ಸ್ಮಶಾನದ ಸುತ್ತಮುತ್ತಲಿನವರು ಆತಂಕಿತರಾಗುವುದು ಬೇಡ ಎಂದರು.
ಕೈಕುಂಜೆ ಸ್ಮಶಾನ ಅಭಿವೃದ್ಧಿ:
ಬಿ.ಸಿ.ರೋಡಿನ ಕೈಕುಂಜೆಯಲ್ಲಿರುವ ಹಿಂದು ರುದ್ರಭೂಮಿಯ ಸಮರ್ಪಕ ನಿರ್ವಹಣೆಗೆ ಬೇಕಾದ ಎಲ್ಲ ಪ್ರಕ್ರಿಯೆಗಳಿಗೆ ಚಾಲನೆ ನೀಡಲಾಗುವುದು. ಊರಿಗೊಂದು ಸ್ಮಶಾನ ಅತಿ ಅವಶ್ಯವಾಗಿದ್ದು, ಇಲ್ಲಿಗೆ ಬೇಕಾದ ಮೂಲಸೌಕರ್ಯವನ್ನು ಒದಗಿಸಲಾಗುವುದು. ಅವಕಾಶವಿದ್ದಲ್ಲಿ ವಿದ್ಯುತ್ ಚಿತಾಗಾರವನ್ನೂ ನಿರ್ಮಿಸುವ ಕುರಿತು ಚಿಂತಿಸಲಾಗುವುದು ಎಂದು ಈ ಸಂದರ್ಭ ಶಾಸಕ ಹೇಳಿದರು.
ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್. ಮಾತನಾಡಿ, ಶಿಷ್ಟಾಚಾರದ ಪ್ರಕಾರ ತಾಲೂಕಾಡಳಿತ ಪೊಲೀಸ್, ಆರೋಗ್ಯ, ಪುರಸಭೆಯ ಸಹಕಾರದೊಂದಿಗೆ ಅಂತ್ಯಸಂಸ್ಕಾರ ಪ್ರಕ್ರಿಯೆಯನ್ನು ನಡೆಸಿದೆ. ಈ ಸಂದರ್ಭ ಸ್ಥಳೀಯರಿಗೆ ಮಾಹಿತಿ ನೀಡುವ ಕೆಲಸವನ್ನು ಮಾಡಲಾಗಿದೆ. ಯಾರೂ ಭೀತಿಗೊಳಗಾಗುವ ಅವಶ್ಯವಿಲ್ಲ ಎಂದರು.
ಇದೇ ಸಂದರ್ಭ ಬಂಟ್ವಾಳ ಅಗ್ನಿಶಾಮಕದಳ ಇಲಾಖೆಯ ಸಹಕಾರದೊಂದಿಗೆ ಪುರಸಭೆ ವತಿಯಿಂದ ಕ್ರಿಮಿನಾಶಕ ರಾಸಾಯನಿಕ ಸಿಂಪಡಣಾ ಕಾರ್ಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯಿತು. ಬೆಳಿಗ್ಗೆ ಸ್ಥಳಕ್ಕೆ ಪುರಸಭೆ ಅಧಿಕಾರಿಗಳು ಪೌರಕಾರ್ಮಿಕರ ಜತೆ ತೆರಳಿ ಸ್ಯಾನಿಟೈಸರ್ ಸಿಂಪಡಿಸಿದ್ದು ಮಧ್ಯಾಹ್ನದ ವೇಳೆಗೆ ಪರಿಸರದಲ್ಲಿ ಕ್ರಿಮಿನಾಶಕ ದ್ರಾವಣ ಸಿಂಪಡಿಸಲಾಯಿತು. ಈ ಸಂಧರ್ಭದಲ್ಲಿ ಸ್ಥಳದಲ್ಲಿ ಸೇರಿದ್ದ ಸ್ಥಳೀಯರು ಪರಿಸರವನ್ನು ಪರಿಶೀಲಿಸಿದ್ದು ಅಧಿಕಾರಿಗಳು ಸೂಕ್ತ ಮಾಹಿತಿ ನೀಡಿದರು.
ತಹಸೀಲ್ದಾರ್ ರಶ್ಮಿ ಎಸ್.ಆರ್, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು, ಬುಡಾ ಅಧ್ಯಕ್ಷ ದೇವದಾಸ ಶೆಟ್ಟಿ, ಕಂದಾಯ ನಿರೀಕ್ಷಕರಾದ ನವೀನ್ ಬೆಂಜನಪದವು, ರಾಮ ಕಾಟಿಪಳ್ಳ, ದಿವಾಕರ್ ಮುಗಳಿಯ, ಪ್ರಮುಖರಾದ ಪುರುಷೋತ್ತಮ ಶೆಟ್ಟಿ ವಾಮದಪದವು, ಪವನ್ ಕುಮಾರ್ ಶೆಟ್ಟಿ, ಮನೋಜ್ ಇದ್ದರು.