ಗುರುವಾರ ಕೊರೋನಾ ಸೋಂಕಿನಿಂದ ಮೃತಪಟ್ಟ ಹಿರಿಯ ಮಹಿಳೆಯ ಮೃತದೇಹದ ಅಂತ್ಯಕ್ರಿಯೆ ನಡೆಸುವಲ್ಲಿ ಗೊಂದಲ ಸೃಷ್ಠಿಸಿದ್ದು ವಿಷಾದನೀಯವಾಗಿದೆ ಎಂದು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ತಿಳಿಸಿದ್ದಾರೆ.
ಅಂತ್ಯಕ್ರಿಯೆ ನಡೆಸಲು ತಡೆಯೊಡ್ಡಿ ಶವವನ್ನು ಅಲ್ಲಿಂದಿಲ್ಲಿಗೆ ಅಲೆದಾಡಿಸುವಂತೆ ಮಾಡುವ ಕೃತ್ಯವು ಅಮಾನವೀಯವಾಗಿದೆ. ಮೃತದೇಹವನ್ನು ಗೌರವಯುತವಾಗಿ ಶವ ಸಂಸ್ಕಾರ ನಡೆಸುವ ಸಂಸ್ಕೃತಿಗೆ ವಿರುದ್ಧವಾಗಿ ಮೃತದೇಹಕ್ಕೆ ಅಗೌರವ ತೋರುವುದು ಯಾರೇ ವ್ಯಕ್ತಿಗೂ ಶೋಭೆಯಲ್ಲ. ಮುಂದಿನ ದಿನಗಳಲ್ಲಿ ಜಿಲ್ಲಾ ಆಡಳಿತವು ಕೋರೊನಾ ವೈರಸ್ ನಿಂದ ಮರಣ ಹೊಂದಿದ ವರನ್ನು ಯಾವ ಜಾಗದಲ್ಲಿ ಮತ್ತು ಯಾವ ರೀತಿಯಾಗಿ ಅಂತ್ಯಕ್ರಿಯೆ ನೆರವೇರಿಸಬೇಕು ಎಂಬುದರ ಬಗ್ಗೆ ಸ್ಪಷ್ಟವಾಗಿ ತೀರ್ಮಾನಿಸಬೇಕು. ಯಾಕೆಂದರೆ ಬಂಟ್ವಾಳದ ನಿವಾಸಿಯಾಗಿರುವ ಮಹಿಳೆಗೆ ಬಂಟ್ವಾಳದಲ್ಲೇ ಇರುವ ಸ್ಮಶಾನದಲ್ಲೂ ಅಂತ್ಯಕ್ರಿಯೆಗೆ ಅವಕಾಶ ಸಿಗದಿರುವುದು ಅಘಾತಕಾರಿ ವಿಚಾರವೇ ಆಗಿದೆ. ಟಾಸ್ಕ್ ಫೋರ್ಸ್ ನಲ್ಲಿ ಇರುವ ಜನಪ್ರತಿನಿಧಿಗಳು ಸಮಿತಿಗೆ ಸೀಮಿತವಾಗದೆ ಜನರ ಕಷ್ಟಗಳಿಗೆ ಸ್ಪಂದಿಸುವ ಮೂಲಕ, ಮೃತದೇಹದ ಗೌರವಯುತ ಸಂಸ್ಕಾರಕ್ಕೆ ಅವಕಾಶ ಮಾಡಿಕೊಡುವ ಮೂಲಕ ಮಾನವೀಯತೆಯನ್ನು ಮೆರೆಯಬೇಕಾಗಿದೆ ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.