ಬಂಟ್ವಾಳಕ್ಕೆ ಇದೊಂದು ಆಘಾತಕಾರಿ ಸುದ್ದಿ. ಕೋವಿಡ್ ಗೆ ಬಂಟ್ವಾಳದ ಮತ್ತೋರ್ವ ಮಹಿಳೆ ಬಲಿಯಾಗಿದ್ದಾರೆ. ಈಗಾಗಲೇ ಭಾನುವಾರ ಬಂಟ್ವಾಳ ಪೇಟೆ ನಿವಾಸಿ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಬಂಟ್ವಾಳದ 75 ವರ್ಷದ ಮಹಿಳೆ ಅಧಿಕ ರಕ್ತದೊತ್ತಡ, ಹಾಗೂ ಸ್ಟ್ರೋಕ್ ಹಿನ್ನೆಲೆಯಲ್ಲಿ ಮಾರ್ಚ್ 18ರಂದು ಮಂಗಳೂರಿನ ಫಸ್ಟ್ ನ್ಯೂರೊ ಸ್ಪೆಶಾಲಿಟಿಗೆ ದಾಖಲಾಗಿದ್ದು, ಕಳೆದ ಎರಡು ದಿನಗಳಿಂದ ಜ್ವರ, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಕಾರಣ, (ಏ.22ರಂದು) ವೆನ್ಲಾಕ್ ಗೆ ದಾಖಲಾಗಿದ್ದರು. ಈ ಸಂದರ್ಭ ಇವರ ಗಂಟಲು ದ್ರವ ಮಾದರಿ ಪರೀಕ್ಷಾ ವರದಿಯಿಂದ ಕೋವಿಡ್ 19 ಸೋಂಕು ಕಂಡುಬಂತು. ಏ.23ರಂದು ಚಿಕಿತ್ಸೆಗೆ ಸ್ಪಂದಿಸದೆ ಅವರು ಮರಣ ಹೊಂದಿರುತ್ತಾರೆ ಎಂದು ಜಿಲ್ಲಾಧಿಕಾರಿ ಸಿಂಧು ರೂಪೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫಸ್ಟ್ ನ್ಯೂರೋ ಸ್ಪೆಶಾಲಿಟಿ ಆಸ್ಪತ್ರೆ ಪಡೀಲ್ ನ 100 ಮೀಟರ್ ವ್ಯಾಪ್ತಿಯ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಲಾಗಿದ್ದು, ಈ ಪ್ರದೇಶದಿಂದ 5 ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ಬಫರ್ ಝೋನ್ ಎಂದು ಘೋಷಿಸಿ ಆದೇಶ ಹೊರಡಿಸಲಾಗಿದೆ. ಫಸ್ಟ್ ನ್ಯೂರೊ ಸ್ಪೆಶಾಲಿಟಿ ಆಸ್ಪತ್ರೆಯನ್ನು ಸುಪರ್ ವೈಸ್ಡ್ ಐಸೋಲೇಶನ್ ಸೆಂಟರ್ ಎಂದು ಘೋಷಿಸಲಾಗಿದ್ದು, ಡಾ. ರಾಜೇಶ್ ಶೆಟ್ಟಿ ಇವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ.
ಬಂಟ್ವಾಳ ಕಸಬಾ ನಿವಾಸಿ ಆರೋಗ್ಯ ಯಥಾ ಸ್ಥಿತಿಯಲ್ಲಿರುತ್ತದೆ. ಇವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ವೆಂಟಿಲೇಟರ್ ಅಳವಡಿಸಲಾಗಿದ್ದು, ಅಲ್ಲಿಯೇ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ತಿಳಸಿದ್ದಾರೆ.
ಇವತ್ತು ಉಸಿರಾಟದ ತೊಂದರೆ ಇರುವ 14 ಪ್ರಕರಣಗಳು ದಾಖಲಾಗಿವೆ. ಇವುಗಳ ಪೈಕಿ 8 ವೆನ್ಲಾಕ್ ಗೆ ಶಿಫಾರಸು ಮಾಡಲಾಗಿದೆ. 39 ಮಂದಿಯನ್ನು ನಿಗಾದಲ್ಲಿ ಇರಿಸಲಾಗಿದೆ. 376 ಮಂದಿಯ ಪರೀಕ್ಷಾ ಫಲಿತಾಂಶ ಬರಲು ಬಾಕಿ ಇದೆ. 214 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ಬಂದಿದ್ದು, ಅವುಗಳ ಪೈಕಿ 1 ಪಾಸಿಟಿವ್ ಬಂದಿತ್ತು. 95 ಮಂದಿಯ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳಿಸಲಾಗಿದೆ. ಮಂಗಳೂರಿನ ಎನ್.ಐ.ಟಿ.ಕೆಯಲ್ಲಿ 50 ಮಂದಿ ಕ್ವಾರಂಟೈನ್ ನಲ್ಲಿದ್ದರೆ, 10 ಮಂದಿ ಇಎಸ್ ಐನಲ್ಲಿದ್ದಾರೆ. ಒಟ್ಟು ವಿವರ ಹೀಗಿದೆ. 17 ಪಾಸಿಟಿವ್, ಇವುಗಳ ಪೈಕಿ 2 ಸಾವು, 12 ಗುಣಮುಖ, 3 ಚಿಕಿತ್ಸೆಯಲ್ಲಿ.