ಪ್ರಮುಖ ಸುದ್ದಿಗಳು

ಮಂಗನಕಾಯಿಲೆ ತಡೆ ಲಸಿಕೆ ಸಾಮರ್ಥ್ಯ ವೃದ್ಧಿ ಸಂಶೋಧನೆಗೆ ಸಲಹೆ

ವಿಶ್ವದಲ್ಲಿ ಕೊರೋನಾ ಅಟ್ಟಹಾಸದ ನಡುವೆಯೇ ರಾಜ್ಯದ ಮಲೆನಾಡು ಭಾಗದಲ್ಲಿ ಹಾಗೂ ಕೇರಳ, ತಮಿಳುನಾಡಿನ ಕೆಲ ಪ್ರದೇಶಗಳಲ್ಲಿ ಮಂಗನ ಕಾಯಿಲೆ ವ್ಯಾಪಕವಾಗಿ ಹರಡಿದ್ದು, ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಲು ಸರ್ಕಾರ ಗಮನ ಹರಿಸಬೇಕು ಎಂದು ಶ್ರೀ ರಾಮಚಂದ್ರಾಪುರ ಮಠಾಧೀಶ ಶ್ರೀರಾಘವೇಶ್ವರಭಾರತೀ ಆಗ್ರಹಿದ್ದಾರೆ.

ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ, ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಮತ್ತು ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ, ಕೊಪ್ಪ ಭಾಗಗಳಲ್ಲಿ ವ್ಯಾಪಕವಾಗಿ ಹರಡಿರುವ ಸೋಂಕು ಈಗಾಗಲೇ 250ಕ್ಕೂ ಹೆಚ್ಚು ಮಂದಿಗೆ ಹರಡಿದ್ದು, ಮೂವರು ಮೃತಪಟ್ಟಿದ್ದಾರೆ. ಆರು ದಶಕಗಳಿಂದ ಈ ಭಾಗವನ್ನು ಬಾಧಿಸುತ್ತಿರುವ ಈ ವೈರಸ್ ಕಾಯಿಲೆ ಇತರ ಪ್ರದೇಶಗಳಿಗೂ ಹಬ್ಬುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಹೇಳಿದ್ದಾರೆ.

ಕೆಎಫ್‍ಡಿ ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡುವುದಾಗಿ ಕಳೆದ ವರ್ಷ ಘೋಷಿಸಿತ್ತು. ಆದರೆ ಕಳೆದ ವರ್ಷ ನೀಡಿದ ಚಿಕಿತ್ಸೆಯ ಬಿಲ್ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಹಲವು ಖಾಸಗಿ ಆಸ್ಪತ್ರೆಗಳು ಸೋಂಕಿತರಿಗೆ ಚಿಕಿತ್ಸೆ ನೀಡಲು ನಿರಾಕರಿಸುತ್ತಿವೆ ಎನ್ನಲಾಗುತ್ತಿದೆ. ಪರಿಸ್ಥಿತಿಯ ತೀವ್ರತೆ ಹಿನ್ನೆಲೆಯಲ್ಲಿ ಸರ್ಕಾರ ತಕ್ಷಣ ಕಾರ್ಯಪ್ರವೃತ್ತವಾಗಬೇಕು ಎಂದು ಒತ್ತಾಯಿಸಿದ್ದಾರೆ.
ನೆರೆ ರಾಜ್ಯಗಳಲ್ಲಿ ಕೂಡಾ ಕೆಎಫ್‍ಡಿ ಸೋಂಕು ಸಮಸ್ಯೆ ಇದ್ದು, ಸಮಸ್ಯೆ ಇರುವ ಎಲ್ಲ ರಾಜ್ಯಗಳು ಒಗ್ಗೂಡಿ ಚರ್ಚಿಸಿ ಉನ್ನತ ಸಂಶೋಧನೆಗೆ ಒತ್ತು ನೀಡಬೇಕು. ಸಮಸ್ಯಾತ್ಮಕ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಸರ್ಕಾರದಿಂದ ಉಚಿತ ಲಸಿಕೆ ಹಾಕುವ ಕಾರ್ಯಕ್ರಮ ನಡೆದರೂ, ಅದು ಪರಿಣಾಮಕಾರಿಯಾಗುತ್ತಿಲ್ಲ ಎಂಬ ಮಾತುಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ. ಕಳೆದ ವರ್ಷ ಲಸಿಕೆ ಪಡೆದವರಲ್ಲೂ ಬಹಳಷ್ಟು ಮಂದಿಗೆ ಈ ವರ್ಷ ಸೋಂಕು ತಗುಲಿದ ನಿದರ್ಶನಗಳಿವೆ. ಈ ಹಿನ್ನೆಲೆಯಲ್ಲಿ ಲಸಿಕೆ ಸಾಮಥ್ರ್ಯ ವೃದ್ಧಿಗೆ ಸರ್ಕಾರ ಗಮನ ಹರಿಸಬೇಕು ಎಂದು ಸಲಹೆ ಮಾಡಿದ್ದಾರೆ.

ವರ್ಷದಿಂದ ವರ್ಷಕ್ಕೆ ಸಮಸ್ಯೆಯ ತೀವ್ರತೆ ಹೆಚ್ಚುತ್ತಿದ್ದರೂ, ಯಾವ ಸರ್ಕಾರಿ ಅಥವಾ ಖಾಸಗಿ ಸಂಘ ಸಂಸ್ಥೆಗಳು ಶಾಶ್ವತ ಪರಿಹಾರದ ನಿಟ್ಟಿನಲ್ಲಿ ಸಂಶೋಧನೆ ನಡೆಸಿಲ್ಲ. ಸಮಸ್ಯೆ ತೀವ್ರವಾಗಿರುವ ಪ್ರದೇಶದಲ್ಲಿ ಕಳೆದ ವರ್ಷ ಸುಮಾರು ಮೂರು ಸಾವಿರ ಮಂದಿಗೆ ಶ್ರೀಮಠದ ವತಿಯಿಂದ ಉಚಿತವಾಗಿ ಔಷಧಿ ವಿತರಿಸಲಾಗಿತ್ತು. ಸಮಸ್ಯಾತ್ಮಕ ಪ್ರದೇಶಗಳ ಜನರ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗವ್ಯ ಚಿಕಿತ್ಸೆ ಬಹಳಷ್ಟು ಪರಿಣಾಮಕಾರಿಯೂ ಆಗಿತ್ತು. ಸಿದ್ದಾಪುರ ಬಳಿಯ ಗೋಸ್ವರ್ಗದಲ್ಲಿ ನಿರ್ಮಾಣ ಹಂತದಲ್ಲಿರುವ ಗವ್ಯ ಸಂಶೋಧನಾ ಕೇಂದ್ರದಲ್ಲಿ ಈ ಬಗ್ಗೆ ಆಳವಾದ ಸಂಶೋಧನೆ ನಡೆಸಲು ಶ್ರೀಮಠ ಸಿದ್ಧವಿದ್ದು, ಇದಕ್ಕೆ ಅಗತ್ಯ ಸಂಪನ್ಮೂಲ ಹಾಗೂ ತಂತ್ರಜ್ಞಾನ ನೆರವು ನೀಡಬೇಕು ಎಂದು ಮನವಿ ಮಾಡಿದ್ದಾರೆ

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ