ಬಂಟ್ವಾಳದಲ್ಲಿ ಮತ್ತೋರ್ವ ಮಹಿಳೆಗೆ ಕೊರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಎದುರಿಸಲು ಆಡಳಿತ ತಯಾರಾಗುತ್ತಿದೆ. ಭಾನುವಾರ ಮಹಿಳೆ ಮೃತಪಟ್ಟ ಬಳಿಕ ಬಂಟ್ವಾಳದ ಅವರ ಮನೆಯ ಸುಮಾರು 100 ಮೀ ವ್ಯಾಪ್ತಿಯನ್ನು ಕಂಟೈನ್ಮೆಂಟ್ ವಲಯ ಎಂದು ಗುರುತಿಸಿ ಸೀಲ್ ಡೌನ್ ಮಾಡಲಾಗಿತ್ತು. ಸೋಮವಾರದಿಂದ ಇದು ಜಾರಿಗೆ ಬಂದಿದ್ದು, 28 ದಿನಗಳ ಕಾಲ ಈ ನಿರ್ಬಂಧವನ್ನು ಮಾಡುವುದಾಗಿ ತಿಳಿಸಲಾಗಿತ್ತು. ಮಂಗಳವಾರ ಮತ್ತೊಂದು ಪ್ರಕರಣ ದೃಢಪಟ್ಟ ಹಿನ್ನೆಲೆಯಲ್ಲಿ ಮತ್ತೊಂದು ದಿನ ಇದು ವಿಸ್ತರಣೆ ಆಗಲಿದೆ ಎಂದು ಇದಕ್ಕೆ ಸಂಬಂಧಿಸಿದ ಮೇಲುಸ್ತುವಾರಿಯನ್ನು ನೋಡುತ್ತಿರುವ ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್. ತಿಳಿಸಿದ್ದಾರೆ. ಈ ಕುರಿತು ಮಂಗಳವಾರ ಸಭೆಯೊಂದನ್ನು ನಡೆಸಲಾಗಿದ್ದು, ಪುರಸಭೆ, ಪೊಲೀಸ್, ಆರೋಗ್ಯ ಇಲಾಖೆಗಳ ಸಹಿತ ತಂಡವೊಂದನ್ನು ರೂಪಿಸಲಾಗಿದ್ದು, ನಿರ್ಬಂಧಿತ ಮನೆಯವರಿಗೆ ಈ ಕುರಿತು ಮಾಹಿತಿಗಳನ್ನು ಸದ್ಯದಲ್ಲೇ ನೀಡಲಾಗುತ್ತದೆ ಎಂದವರು ತಿಳಿಸಿದ್ದಾರೆ.
ಪುರಸಭೆ ಕಂಟ್ರೋಲ್ ರೂಮ್ ಗೆ ಕರೆ: ಈಗಾಗಲೇ ಪುರಸಭೆಯ ಕಂಟ್ರೋಲ್ ರೂಂ ಗೆ ಕರೆಗಳು ಬರುತ್ತಿವೆ. ಕಂಟ್ರೋಲ್ ರೂಮ್ ನಿಂದ 24 ತಾಸು ಸೇವೆ ನೀಡಲಾಗುತ್ತಿದೆ ಈಗಾಗಲೇ ಕಂಟೈನ್ಮೆಂಟ್ ವಲಯದ 180 ಮನೆಗಳಿಗೆ ಅಗತ್ಯವಿರುವ ವಸ್ತುಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ತಿಳಿಸಿದ್ದಾರೆ. ಪುರಸಭೆ ಕಂಟ್ರೋಲ್ ರೂಂ ನಂಬರ್ ಹೀಗಿದೆ – 08255233130