ನಿಮ್ಮ ಧ್ವನಿ

ನೆರೆ ನೀರು ಬಂದಾಗ ಅಸಹಾಯಕರಾಗಿ ನೋಡುತ್ತಿದ್ದ ಕಾಲ ಇತ್ತು, ಇಂದು ಕೊರೊನಾ ವೈರಸ್…!!

  • ಸುರೇಶ್ ಬಾಳಿಗಾ

ಬದುಕಿನಲ್ಲಿ ತಿದ್ದುಪಡಿ ಮಾಡಿಕೊಳ್ಳಲು ನಮಗೆ ನಾವೇ ಒಂದು ಅವಕಾಶ ಕೊಡೋಣ- ಇದು ಜಯಂತ ಕಾಯ್ಕಿಣಿ ಮಾತು. ಇದನ್ನು ನಾವು ಅಳವಡಿಸಿಕೊಳ್ಳದಿದ್ದರೆ ಪರಿಸ್ಥಿತಿ ಕಠಿಣ ಎನ್ನುತ್ತಾರೆ ಲೇಖಕ ಸುರೇಶ್ ಬಾಳಿಗಾ

ನೇತ್ರಾವತಿ ತೀರದ ನನ್ನ ಹುಟ್ಟೂರು ಬಂಟವಾಳ.

ಮಳೆಗಾಲದಲ್ಲಿ ನದಿ ಉಕ್ಕಿ ಹರಿದು ಪೇಟೆಯನ್ನೆಲ್ಲಾ ಸುತ್ತುವರಿದು ಹಲವು ಗಂಟೆಗಳ ಕಾಲ ಊರು ದ್ವೀಪವಾಗಿ ಬಿಡುತ್ತದೆ. ಎಲ್ಲಾ ಮಾರ್ಗಗಳು ನೆರೆನೀರಿನಿಂದ ಆವೃತವಾಗಿರುತ್ತವೆ.  ಜೌಗು ಪ್ರದೇಶದವರೆಲ್ಲರೂ ತಮ್ಮ ಅಮೂಲ್ಯ ಮತ್ತು ಅಗತ್ಯಸಾಮಗ್ರಿಗಳನ್ನು  ಸಂರಕ್ಷಿಸುತ್ತಾ ಸುರಕ್ಷಿತ ಪ್ರದೇಶವನ್ನು ಸೇರಿಕೊಂಡು ಬಿಡುತ್ತಾರೆ. ಕಾಳಜಿ ಕೇಂದ್ರಗಳು ಹುಟ್ಟಿಕೊಂಡು ಗಂಜಿ, ಚಾ ದ ವ್ಯವಸ್ಥೆ ಮಾಡಲಾಗುತ್ತದೆ. ತಗ್ಗುಪ್ರದೇಶದ ಅಂಗಡಿಯವರು ಸಾಮಾನು ಸರಂಜಾಮುಗಳನ್ನು ಸಾಗಿಸಿ ಖಾಲಿಮಾಡಲು ತೊಡಗುವರು. ರಾತ್ರಿವೇಳೆ ನೀರು ಬಂದರಂತು ಪಜೀತಿ. ಇಡೀ ಊರಿಗೇ ಜಾಗರಣೆ. ಯುವಕರ ತಂಡ ಸಹಾಯಕ್ಕಾಗಿ ಟೊಂಕ ಕಟ್ಟಿ ನಿಂತಿರುತ್ತದೆ. ಎಮ್ಮೆ, ಹಸುಕರುಗಳನ್ನು  ಹಗ್ಗ ಕಟ್ಟಿ ಅಪರಿಚಿತರು ಎಳೆದೊಯ್ಯುವಾಗ  ಬೆದರುವ ಅವುಗಳ ಆಕ್ರಂದನ ಮನಕರಗುವಂತಿರುತ್ತದೆ. ದೂರದ ಊರಲ್ಲಿರುವ ಮಾಲಕರ ಬೀಗ ಹಾಕಿರುವ ಅಂಗಡಿಗಳನ್ನು ತೆರೆಯಲಾಗದೆ ನೀರು ಒಳಸೇರುವುದನ್ನು  ಅಸಹಾಯಕರಾಗಿ ನಿಂತು ನೋಡಬೇಕಾದ ಪರಿಸ್ಥಿತಿ. ಕೆಲವೊಮ್ಮೆ ಬೀಗ ಒಡೆದು ಸಾಗಿಸುವುದುಂಟು. ನಡೆಯಲಾಗದವರನ್ನು, ಹಿರಿಯಜೀವಿಗಳನ್ನು ಹೊತ್ತು ಸಾಗಿಸಿ ಇತರ ಸಂಬಂಧಿಗಳ ಮನೆಗೆ ಸಾವಕಾಶವಾಗಿ ತಲುಪಿಸಲಾಗುತ್ತದೆ.

1923, 1974 ಈ ಎರಡು ವರುಷಗಳಲ್ಲಿ ಭಾರಿ ಪ್ರವಾಹ ಬಂದು ಬ್ರಹತ್ ನಷ್ಟ ಉಂಟಾಗಿತ್ತು. ಆ ನಂತರ ಮಳೆಗಾಲದಲ್ಲಿ ಬಂಡಸಾಲೆಯವರು ಅನಗತ್ಯ ದಾಸ್ತಾನು ಇಡುವ ದುಸ್ಸಾಹಸ ಮಾಡುತ್ತಿರಲಿಲ್ಲ. ಇತ್ತೀಚೆಗಿನ ದಿನಗಳಲ್ಲಿ ಮಳೆ ಕಡಿಮೆಯಾಗಿ ನೆರೆ ಅಪರೂಪ. ಅಲ್ಲದೆ ನದಿಗೆ ಅಡ್ಡಲಾಗಿ ಪವರ್ ಪ್ರಾಜೆಕ್ಟನ ಆಣೆಕಟ್ಟು ಕಟ್ಟಲಾಗಿದೆ. ವಿಪರೀತ ಮಳೆಯಾಗಿ ಒಳಹರಿವು  ಅಪಾಯದ ಮಟ್ಟ ಮೀರಿದರೆ ಮಾತ್ರ ನೀರನ್ನು ಹೊರಬಿಡಲಾಗುವುದು. ಹಾಗಾಗಿ ಇತ್ತೀಚಿನ ದಿನಗಳಲ್ಲಿ ಭಾಗಶಃ ಮುಳುಗಡೆ ಯಾಗುತ್ತದೆ.

ಸರಿಯಾಗಿ ನೆನಪಿದೆ ನನಗೆ 1974ರ ನೆರೆಯ ಕಿತಾಪತಿ. ಅಂಗಳಕ್ಕೆ ನೀರು ನುಗ್ಗಿದಾಗ ಮನೆಯ ಎಲ್ಲಾ ಸಾಮಾನುಗಳನ್ನು ಅಟ್ಟಕ್ಕೆ ಏರಿಸಿ ಓಣಿ ಬಿಟ್ಟು ರಾಜಮಾರ್ಗದ ಅಜ್ಜನೊಬ್ಬನ ಮನೆಯಲ್ಲಿ ಸೇರಿಕೊಂಡೆವು. ಅಲ್ಲಿ ಅಡಿಗೆಮನೆಯಲ್ಲಿ ಕೂತು ಅಜ್ಜಿ ಮಾಡಿದ ದಾಳಿತೋವೆ ಮತ್ತು ಉಪ್ಪಿಗೆ ಹಾಕಿದ ಹಲಸಿನ ತೊಳೆಯ ಉಪ್ಕರಿಯ ಮರೆಯಲಾಗದು. ಅಲ್ಲಿಯೂ ನೀರು ಬಂದಾಗ ಕಾಶೀಮಠದ ಆವರಣದಲ್ಲಿ ಮಲಗುವ ವ್ಯವಸ್ಥೆ ಮಾಡಲಾಗಿತ್ತು.ನಾನು ಮಾತ್ರ ನಿದ್ರಿಸದೆ ಜನರ ಓಡಾಟವನ್ನು ಗಮನಿಸುತ್ತಾ ಮಾತುಗಳನ್ನು ಕೇಳುತ್ತಾ ಗ್ಯಾಸಲೈಟ್ ಬಳಿ ಕೂತಿದ್ದ ನೆನಪು. ಮರುದಿನ ಇಳಿದ ನೀರು ಇಡೀ ಊರನ್ನೇ ಗಲೀಜು ಮಾಡಿ ಹೋಗಿತ್ತು. ಮನೆಯಲ್ಲಂತು ಮಣ್ಣು, ಕಸ ಮಡ್ಡಿ ಎಲ್ಲಾ ಸೇರಿಕೊಂಡು ಅಕ್ಕಿಯ ಡಬರಿ, ಈಳಿಗೆಮಣೆ, ಪಾತ್ರೆ ಪಗಡಿಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಎದುರುಮನೆಯಲ್ಲಿ ದೊಡ್ಡ ಹೆಬ್ಬಾವು ಸೇರಿಕೊಂಡು ಬಿಟ್ಟಿತ್ತು. ಊರ ಅಂಗಡಿಗಳಲ್ಲಿ ಅಕ್ಕಿ,ಗೋಧಿ, ಧಾನ್ಯಗಳ ಗೋಣಿಗಳು  ನೀರು ಕುಡಿದು ಉಬ್ಬಿ ನಾರತೊಡಗಿದವು. ಅಪಾರ ನಷ್ಟ ಉಂಟಾಗಿತ್ತು. ದೊಡ್ಡಪ್ಪನ ಕೊಟ್ಟಿಗೆ ಕುಸಿದುಹೋಗಿತ್ತು. ಕೆಲವರ ಜಾನುವಾರುಗಳು ಕೊಚ್ಚಿಕೊಂಡು ಹೋಗಿದ್ದವು.ಮಣ್ಣಿನ ಗೋಡೆಗಳು ಕುಸಿದು ಬಿದ್ದು ಮನೆ ಮಠಗಳನ್ನು ಕಳೆದುಕೊಂಡವರಿಗೆ ಅನೇಕ ದಿನ ತಾತ್ಕಾಲಿಕ ವಸತಿ ಕಲ್ಪಿಸಲಾಗಿತ್ತು.  ಮನೆಯಲ್ಲಿ ಆ ಥಂಡಿ ಮತ್ತು ಮಣ್ಣಿನ ಕೆಟ್ಟ ವಾಸನೆ ಮಾಯವಾಗಲು ತಿಂಗಳುಗಳೇ ಹಿಡಿದವು. ಬಾವಿಗಳನ್ನು ಸ್ವಚ್ಛ ಮಾಡಲಾಯಿತು. ಕೊನೆಗೂ ಎಲ್ಲಾ ಕಷ್ಟಗಳನ್ನು ಕೊಡವಿ ಇಡೀ ಊರು ಮತ್ತೊಮ್ಮೆ ಎದ್ದು ನಿಂತಿತು.

ಇಂದು ಮತ್ತೊಮ್ಮೆ ಸುದ್ದಿಯಾಗಿದೆ ಬಂಟವಾಳ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಕೊರೋನಾ ಬಲಿಗಾಗಿ. ಇಡೀ ಊರೇ ಬೆರಗಾಗಿದೆ. ಇಡೀ ಬಂಟವಾಳ ಪೇಟೆಯನ್ನು ಸೀಲ್ ಡೌನ್ ಮಾಡಲಾಗಿದೆ. ಕುಟುಂಬದವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ನೆರೆಹೊರೆಯವರ ಗಂಟಲುದ್ರವದ ಸ್ಯಾಂಪಲ್ ತೆಗೆಯಲಾಗಿದೆ. ಪಾಸಿಟಿವ್ ಬರದಿದ್ದರೆ ಸಾಕು ಎಂದು ಎಲ್ಲರೂ ವೆಂಕಟರಮಣನ ಮೊರೆ ಹೊಕ್ಕಿದ್ದಾರೆ. ಲವಲವಿಕೆಯ ಪೇಟೆ ಬಡವಾಗಿದೆ. ಎಲ್ಲರೂ ಮುಚ್ಚಿದ ಬಾಗಿಲ ಹಿಂದೆ ಆತಂಕಿತರಾಗಿ ನೆರೆಮನೆಯಲ್ಲಿ ಬಂದಿರುವ ಮಾರಿ ತಮ್ಮಲ್ಲಿ ಬಾರದಿರುವುದೆ ಎಂಬ ಭೀತಿಯಲ್ಲಿದ್ದಾರೆ. ಎಷ್ಟು ಎಚ್ಚರಿಸಿದರೂ ಜ್ವರ, ಕೆಮ್ಮು ಶೀತ ಕಾಡಿದಾಗ ನಮ್ಮನ್ನು ಸಂಪರ್ಕಿಸಿ ಎಂಬ ಜಿಲ್ಲಾಡಳಿತದ ಮನವಿ ವ್ಯರ್ಥವಾಗಿ ಹೋಗುತ್ತಿದೆ. ಅಂತರ ಕಾಯ್ದುಕೊಳ್ಳಲು ಜನತೆ ವಿಫಲರಾಗಿದ್ದಾರೆ. ಅಂಗಡಿಗಳಲ್ಲಿ ಸಾಲು ನಿಲ್ಲಲು ಈಗೋ ಅಡ್ಡಿಯಾಗುತ್ತದೆ.

ಇನ್ನಾದರೂ ಎಚ್ಚರಗೊಳ್ಳಿ. ಅಂತರ ಕಾಯ್ದುಕೊಳ್ಳಿ, ಅನಗತ್ಯವಾಗಿ ಅಡ್ಡಾಡದಿರಿ. ಸರಳವಾಗಿ ಬದುಕಲು ಪ್ರಯತ್ನಿಸಿ. ಜಯಂತ್ ಕಾಯ್ಕಿಣಿಯವರು ಹಾಡಿನಲ್ಲಿ ಬರೆದಂತೆ ನಮಗೆ ನಾವೇ ಒಂದು ಅವಕಾಶ ಕೊಡೋಣ ಬದುಕಿನಲ್ಲಿ ತಿದ್ದುಪಡಿ ಮಾಡಿಕೊಳ್ಳಲು…

(ಬರೆದವರು ಕವಿ, ಲೇಖಕರು. ಬಿ.ಸಿ.ರೋಡಿನ ಬಾಳಿಗಾ ಸ್ಟೋರ್ಸ್ ಮಾಲೀಕರು)

 

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts