ಬಂಟ್ವಾಳನ್ಯೂಸ್, ಸಂಪಾದಕ: ಹರೀಶ ಮಾಂಬಾಡಿ
ಕೋವಿಡ್ 19ರ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಜನರ ಮಟ್ಟಿಗೆ ಗುರುವಾರ ಏ.16ರಂದು ಶುಭಸುದ್ದಿಯಷ್ಟೇ ಅಲ್ಲ, ಸಿಹಿಸುದ್ದಿಯೂ ಹೌದು. ಜಿಲ್ಲಾಡಳಿತ, ಪೊಲೀಸ್, ಆರೋಗ್ಯ ಇಲಾಖೆಯ ಕಟ್ಟುನಿಟ್ಟಿನ ನಿಲುವಿಗೆ ಮನೆಯಲ್ಲೇ ಕುಳಿತು ಸ್ಪಂದಿಸಿ ಸಹಕರಿಸುತ್ತಿರುವ ಸಾರ್ವಜನಿಕರು ಕೋವಿಡ್ ವೈರಸ್ ಅನ್ನು ಜಿಲ್ಲೆಯಿಂದಲೇ ತೊಲಗಿಸಲು ಬದ್ಧರಾಗಿರುವುದೇ ಇದಕ್ಕೆ ಕಾರಣ. ಜೊತೆಗೆ ಜನಪ್ರತಿನಿಧಿಗಳು, ಸಾಮಾಜಿಕ ಕಾರ್ಯಕರ್ತರ ಅವಿರತ ದುಡಿಮೆಯೂ ಇದಕ್ಕೆ ಕಾರಣ. ಇದೇ ಸ್ಥಿತಿ ಮುಂದುವರಿದರೆ, ಲಾಕ್ ಡೌನ್ ಅವಧಿ ಮುಗಿಯುವುದರೊಳಗೆ ದ.ಕ. ಸಂಪೂರ್ಣ ಕೋವಿಡ್ ಗೆ ನೆಗೆಟಿವ್ ಆಗುವ ದಿನ ದೂರವಿಲ್ಲ.
ಇದುವರೆಗೆ ಹೋಂ ಕ್ವಾರಂಟೈನ್ ನಲ್ಲಿ ಇರುವವರ ಸಂಖ್ಯೆ ಸಾವಿರಕ್ಕೂ ಮೀರುತ್ತಿತ್ತು. ಆದರೆ ಇಂದು ದ.ಕ.ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಹೊರಡಿಸಿದ ಪ್ರಕಟಣೆಯ ಪ್ರಕಾರ, ಹೋಂ ಕ್ವಾರಂಟೈನ್ ನಲ್ಲಿ 797 ಮಂದಿಯಷ್ಟೇ ಇದ್ದಾರೆ. 5276 ಮಂದಿ 28 ದಿನಗಳ ಹೋಂ ಕ್ವಾರಂಟೈನ್ ಮುಗಿಸಿದ್ದು, ಅವರಲ್ಲಿ ಕೋವಿಡ್ ನ ಯಾವುದೇ ಸೋಂಕು ಕಂಡುಬಂದಿಲ್ಲ. ಇನ್ನು ಒಟ್ಟು 682 ಮಂದಿಯ ಗಂಟಲು ದ್ರವ ಪರೀಕ್ಷೆ ನಡೆದಿದ್ದು, ಅವರಲ್ಲಿ 623 ಮಂದಿಯ ವರದಿ ಬಂದಿದೆ. ಇವುಗಳ ಪೈಕಿ 611 ನೆಗೆಟಿವ್ ಎಂಬುದು ಮತ್ತೊಂದು ಸಮಾಧಾನಕರ ಸುದ್ದಿ. ಉಳಿದಂತೆ 12 ಮಂದಿ ಪಾಸಿಟಿವ್ ಇದ್ದರೂ ಅವರಲ್ಲಿ 9 ಮಂದಿ ಗುಣಮುಖರಾಗಿದ್ದಾರೆ. ಮೂವರಷ್ಟೇ ಚಿಕಿತ್ಸೆ ಪಡೆಯುತ್ತಿದ್ದು ಶೀಘ್ರ ಬಿಡುಗಡೆ ಹೊಂದುವ ನಿರೀಕ್ಷೆಯೂ ಇದೆ. ಏ.4ರ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ ಪ್ರಕರಣ ಪತ್ತೆಯಾಗದಿರುವುದು ಮತ್ತು ಹೋಂ ಕ್ವಾರಂಟೈನ್ ಮುಗಿಸಿದವರಲ್ಲೂ ಯಾವುದೇ ರೋಗಲಕ್ಷಣಗಳು ಕಂಡುಬಾರದೇ ಇರುವುದು ಶುಭಸುದ್ದಿ.
ಗುರುವಾರ 24 ಮಂದಿಯ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. 113 ಮಂದಿಯ ಪರೀಕ್ಷಾ ವರದಿ ಬಂದಿದ್ದು ಎಲ್ಲವೂ ನೆಗೆಟಿವ್ ಆಗಿದೆ. 11 ಮಂದಿಯನ್ನು ಗುರುವಾರ ನಿಗಾದಲ್ಲಿರಿಸಲಾಗಿದೆ. ಇನ್ನು 59 ಮಂದಿಯ ಪರೀಕ್ಷಾ ವರದಿ ಬರಲು ಬಾಕಿ ಇದೆ.