- 58 ಗ್ರಾಮ, 1 ಪುರಸಭೆ, 1 ಪಟ್ಟಣ ಪಂಚಾಯತ್ ಯೋಗಕ್ಷೇಮ ನಿರ್ವಹಿಸಿದ ಹೆಲ್ತ್ ಡಿಪಾರ್ಟ್ ಮೆಂಟ್
STAY HOME, STAY SAFE ಎಂದು ನಾವು ನೀವೆಲ್ಲ ಮನೆಯೊಳಗಿದ್ದಾಗ, ಬಿಸಿಲಲ್ಲಿ ನಡೆದುಕೊಂಡು ಬಂದು, ನಮ್ಮ ಮನೆಯ ಕದವ ತಟ್ಟಿ ನಿಮ್ಮಲ್ಲಿ ಅನಾರೋಗ್ಯಪೀಡಿತರು ಯಾರಾದರೂ ಇದ್ದಾರೆಯೇ ಎಂದು ವಿಚಾರಿಸಿ ಸಂಜೆವರೆಗೂ ನಡೆದುಕೊಂಡೇ ಹೋಗಿ, ಲೆಕ್ಕವನ್ನು ಕೊಟ್ಟು ಮನೆಗೆ ಮರಳಿ ತಮ್ಮ ತಂದೆ, ತಾಯಿ, ಪತಿ, ಮಕ್ಕಳ ಮುಖ ನೋಡುವ ಸುಮಾರು 350ಕ್ಕೂ ಅಧಿಕ ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತೆಯರು, 73 ಮಂದಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು, ಶುಶ್ರೂಷಕರು, ಎಲ್ಲರ ಆರೋಗ್ಯದ ಕುರಿತು ನಿಗಾ ಇರಿಸಿ ರಿಪೋರ್ಟ್ ಕೊಡುತ್ತಿದ್ದ ಪಿಎಚ್ ಸಿ, ಟಿಎಚ್ ಸಿಯ ವೈದ್ಯರು, ಇವರೆಲ್ಲರೊಂದಿಗೆ ಪ್ರತಿದಿನದ ಇಪ್ಪತ್ತನಾಲ್ಕು ತಾಸೂ ಅಲರ್ಟ್ ಆಗಿ ಬಂಟ್ವಾಳ ತಾಲೂಕಿನ ಆರೋಗ್ಯ ಸ್ಥಿತಿಗತಿ ಕುರಿತು ನಿಗಾ ಇರಿಸಿ, ಕೋವಿಡ್ 19 ವಿರುದ್ಧ ಹೋರಾಟದಲ್ಲಿ ಮುನ್ನಡೆಯುತ್ತಿರುವ ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು. ಮನೆಯಲ್ಲಿ ಕುಳಿತು ನಾವು ನೀವು ಸೇಫ್ ಆಗಬೇಕಿದ್ದರೆ, ಬಂಟ್ವಾಳದ ತಾಲೂಕಾಡಳಿತ, ತಾಲೂಕು ಪಂಚಾಯತ್, ಟಾಸ್ಕ್ ಫೋರ್ಸ್, ಪೊಲೀಸ್ ಇಲಾಖೆಯ ಜೊತೆ ಎಲ್ಲರ ಆರೋಗ್ಯದ ಕುರಿತು ಕಣ್ಣಲ್ಲಿ ಕಣ್ಣಿಟ್ಟು ಕಾಳಜಿ ವಹಿಸುತ್ತಿರುವ ಆರೋಗ್ಯ ಇಲಾಖೆ ಕೆಲಸ ಅನನ್ಯ. ಇವರು covid warriors.
ಇಂದು ಬಂಟ್ವಾಳ ತಾಲೂಕು ಎರಡನೇ ಹಂತದ LOCKDOWN ಗೆ ಸಜ್ಜಾಗಿದೆ. ನೀವು ಮನೆಯಲ್ಲಿರಿ, ಸೇಫ್ ಆಗಿರಿ ನಾವು ಬಂದು ನಿಮ್ಮ ಆರೋಗ್ಯ ವಿಚಾರಿಸಿದಾಗ ನಮಗೆ ಮಾಹಿತಿ ನೀಡಿ ಎನ್ನುತ್ತಾರೆ ಆರೋಗ್ಯ ಇಲಾಖೆ ಸಿಬ್ಬಂದಿ.
ಬಂಟ್ವಾಳ ತಾಲೂಕಿನ ಹಲವು ಕಡೆಗಳಲ್ಲಿ ಬೀಡುಬಿಟ್ಟಿರುವ ವಲಸೆ ಕಾರ್ಮಿಕರನ್ನು ಬುಧವಾರ ಸಂದರ್ಶಿಸಿದ ಆರೋಗ್ಯ ಇಲಾಖೆ ಅಧಿಕಾರಿಗಳಾದ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ವೈದ್ಯಾಧಿಕಾರಿ ಮತ್ತು ತಂಡ ತಪಾಸಣೆ ನಡೆಸಿತು. ಪ್ರತಿ ವಾರ ಕಾರ್ಮಿಕರ ಭೇಟಿಯನ್ನು ಇಲಾಖೆ ನಡೆಸುತ್ತಿದೆ.
ಪ್ರತಿ ಟಾಸ್ಕ್ ಫೋರ್ಸ್ ಗಳ ಮೀಟಿಂಗ್ ಗಳಲ್ಲೂ ಆರೋಗ್ಯ ಇಲಾಖೆ ಅಧಿಕಾರಿಗಳು ಭಾಗವಹಿಸುತ್ತಿದ್ದಾರೆ. 17 ಪ್ರಾಥಮಿಕ ಆರೋಗ್ಯ ಕೇಂದ್ರ ಸಹಿತ 21 ಆರೋಗ್ಯ ಕೇಂದ್ರದವರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮನೆ ಮನೆಗೆ ಭೇಟಿ ಕೊಟ್ಟು ಎಲ್ಲಿ ಜ್ವರ ಪ್ರಕರಣ ಇರುವುದನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ. ಯಾರಲ್ಲಿ ರೋಗಲಕ್ಷಣ ಕಾಣಿಸುತ್ತಿದೆಯೋ ಅವರ ಗಂಟಲು ದ್ರವ ಮಾದರಿ ಪರೀಕ್ಷೆ ಮಾಡುತ್ತಿದ್ದಾರೆ.