ಲಾಕ್ ಡೌನ್ ನಿಂದ ಗುಜರಾತ್- ಮಹಾರಾಷ್ಟ್ರ ಗಡಿಯಲ್ಲಿ ಸಿಲುಕಿ, ಕಳೆದ 22 ದಿನಗಳಿಂದ ಕಾರಿನಲ್ಲಿಯೇ ವಾಸಿಸುತ್ತಿರುವ ಪುತ್ತೂರಿನ ಯುವಕರಿಬ್ಬರಿಗೆ ಸೂಕ್ತ ವಸತಿ, ಆಹಾರ ವ್ಯವಸ್ಥೆ ಒದಗಿಸುವಂತೆ ಗುಜರಾತ್ ರಾಜ್ಯದ ವಲ್ಸಾಡ್ ಜಿಲ್ಲಾಧಿಕಾರಿಗಳಿಗೆ ದ.ಕ. ಜಿಲ್ಲಾಧಿಕಾರಿ ಸಿಂಧು ರೂಪೇಶ್ ಪತ್ರ ಬರೆದಿದ್ದಾರೆ. ಸಾಮಾಜಿಕ ಕಾರ್ಯಕರ್ತ, ದ.ಕ.ಜಿಲ್ಲಾ ವಕ್ಫ್ ಸಮಿತಿ ಸದಸ್ಯ, ಪತ್ರಕರ್ತ ರಶೀದ್ ವಿಟ್ಲ ಈ ಕುರಿತು ಜಿಲ್ಲಾಧಿಕಾರಿ ಗಮನ ಸೆಳೆದಿದ್ದರು. ಜಿಲ್ಲಾ ವಾರ್ತಾಧಿಕಾರಿ ಬಿ.ಎ.ಖಾದರ್ ಶಾ, ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಕೋರೊನಾ ನೋಡಲ್ ಅಧಿಕಾರಿ ಗಾಯತ್ರಿ ಅವರು ಪೂರಕವಾಗಿ ಸ್ಪಂದಿಸಿದ್ದರು ಎಂದು ರಶೀದ್ ವಿಟ್ಲ ತಿಳಿಸಿದ್ದಾರೆ.
ಪುತ್ತೂರಿನ ಆಶಿಕ್ ಹುಸೈನ್ ಮತ್ತು ಮಹಮ್ಮದ್ ತಾರೀಕ್ ಮರೀಲ್ ಎಂಬಿಬ್ಬರು ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಗುಜರಾತ್ ಮತ್ತು ಮಹಾರಾಷ್ಟ್ರ ಗಡಿ ಭಾಗದ ವಲ್ಸಾಡ್ ಜಿಲ್ಲೆಯ ಬಿಲಾಡ್ ತಾಲೂಕಿನ ಅಂಬರ್ ಗಾಂವ್ ಎಂಬಲ್ಲಿನ ಚೆಕ್ ಪೋಸ್ಟ್ ನಲ್ಲಿ ಬಾಕಿಯಾಗಿದ್ದರು. ಅಲ್ಲಿ ಅವರು ಕಾರಿನಲ್ಲೇ 22 ದಿನಗಳನ್ನು ಕಳೆದಿದ್ದರು. ಇವರು ಅಡಕೆ ವ್ಯಾಪಾರಿಗಳಾಗಿದ್ದು, ಚೆಕ್ ಪೋಸ್ಟ್ ನ ಸನಿಹ ಕಾರು ನಿಲ್ಲಿಸಿದ ಇವರು ಸ್ನಾನ, ಶೌಚಕ್ಕಾಗಿ ಸಮೀಪದ ಹೋಟೆಲ್ ಗೆ ಹೋಗುತ್ತಾರೆ. ಸ್ಥಳೀಯರು ಆಹಾರ, ತುರ್ತು ಅಗತ್ಯ ಔಷಧಗಳನ್ನು ನೀಡಿ ನೆರವು ನೀಡಿದ್ದಾರೆ.