ಸುಳ್ಯ ಅಜ್ಜಾವರ ನಿವಾಸಿ ಡಿಸ್ಚಾರ್ಜ್, ಹೋಂ ಕ್ವಾರಂಟೈನ್ ನಲ್ಲಿರುವವರ ಸಂಖ್ಯೆಯೂ ಕಡಿಮೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಮತ್ತೋರ್ವರನ್ನು ಡಿಸ್ಚಾರ್ಜ್ ಮಾಡಲಾಗಿದೆ. ಇದರೊಂದಿಗೆ ಒಟ್ಟು 12 ಪಾಸಿಟಿವ್ ಕೇಸ್ ಗಳಲ್ಲಿ 8 ಮಂದಿ ಗುಣಮುಖರಾದಂತಾಗಿದೆ. ಈಗ ಆಸ್ಪತ್ರೆಯಲ್ಲಿ 4 ಮಂದಿಯಷ್ಟೇ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೋಮವಾರ 26 ಮಂದಿಯ ರಿಪೋರ್ಟ್ ಬಂದಿದ್ದು, ಎಲ್ಲವೂ ನೆಗೆಟಿವ್ ಆಗಿದೆ. 18 ಮಂದಿಯ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಒಟ್ಟು 24 ಮಂದಿಯ ರಿಪೋರ್ಟ್ ಬರಲು ಬಾಕಿ ಇದೆ. ಇದರೊಂದಿಗೆ ಎಂಟು ದಿನಗಳಿಂದ ಕೊರೊನಾ ಸೋಂಕು ಪೀಡಿತರು ಪತ್ತೆಯಾಗದೇ ಇರುವುದು ಜಿಲ್ಲೆಯ ಮಟ್ಟಿಗೆ ಸಮಾಧಾನ ತಂದಿದೆ.
34 ವರ್ಷ ಪುರುಷ ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ, ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದಲ್ಲಿನ ತನ್ನ ಮನೆಗೆ ತೆರಳಿದ್ದಾರೆ. ಮಾ.28ರಂದು ಚಿಕಿತ್ಸೆಗಾಗಿ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದು, ಮಾ.31ರಂದು ಸೋಂಕು ತಗಲಿರುವುದು ಪರೀಕ್ಷಾ ವರದಿಯಿಂದ ದೃಢಪಟ್ಟಿರುತ್ತದೆ. ಚಿಕಿತ್ಸೆಯನ್ನು ನೀಡಲಾಗಿ, ಏ.11 ಮತ್ತು 12ರ ಗಂಟಲು ದ್ರವ ಪರೀಕ್ಷೆಯಲ್ಲಿ ವರದಿ ನೆಗೆಟಿವ್ ಬಂದಿದ್ದು, ಅವರನ್ನು ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಯಿತು. ಹೋಂ ಕ್ವಾರಂಟೈನ್ ನಲ್ಲಿ 1731 ಮಂದಿ ಈಗಿದ್ದಾರೆ. 4342 ಮಂದಿ ಹೋಂ ಕ್ವಾರಂಟೈನ್ ಮುಗಿಸಿದ್ದಾರೆ. ಏಳು ಮಂದಿ ನಿಗಾದಲ್ಲಿ ಇದ್ದಾರೆ.