ನಿಷೇಧಾಜ್ಞೆ ಸಂದರ್ಭ ಅದನ್ನು ಉಲ್ಲಂಘಿಸಿ, ಕಣ್ತಪ್ಪಿಸಿ ಓಡಾಡುವವರನ್ನು ಪತ್ತೆಹಚ್ಚಲು ಡ್ರೋನ್ ಕ್ಯಾಮರಾ ಬಂಟ್ವಾಳ ಉಪವಿಭಾಗ ವ್ಯಾಪ್ತಿಯ ಠಾಣೆಗಳಲ್ಲಿ ಅಳವಡಿಕೆ ಮಾಡಲಾಗುತ್ತಿದೆ. ಈಗಾಗಲೇ ಇದರ ಪ್ರಾಯೋಗಿಕ ಪರೀಕ್ಷೆಗಳು ನಡೆದಿವೆ.
ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಪ್ರತಿ ಠಾಣಾ ವ್ಯಾಪ್ತಿಯಲ್ಲೂ ಡ್ರೋನ್ ಕ್ಯಾಮರಾದ ಕಾರ್ಯಾಚರಣೆ ನಡೆಯಲಿದೆ. ವಾಹನಗಳ ಓಡಾಟ, ಜನರ ಅನಗತ್ಯ ತಿರುಗಾಟವನ್ನು ಪತ್ತೆ ಹಚ್ಚುವುದಕ್ಕೆ ಡ್ರೋನ್ ಕ್ಯಾಮರಾದ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತದೆ, ಇದರಿಂದ ನಿಷೇಧಾಜ್ಞೆಯ ಕಟ್ಟುನಿಟ್ಟಿನ ಅನುಷ್ಠಾನ ಸಾಧ್ಯವಾಗಲಿದೆ ಎಂದು ಬಂಟ್ವಾಳ ಡಿವೈಎಸ್‌ಪಿ ವೆಲಂಟೈನ್ ಡಿಸೋಜ ಅವರು ತಿಳಿಸಿದ್ದಾರೆ.
ಜನರ ಓಡಾಟ ಅಥವಾ ವಾಹನಗಳ ಓಡಾಟ ಹೆಚ್ಚಿರುವ ಕುರಿತು ಪೊಲೀಸ್ ಇಲಾಖೆಗೆ ಮಾಹಿತಿ ಬಂದಲ್ಲಿ ಅಂತಹ ಪ್ರದೇಶದಲ್ಲಿ ಡ್ರೋನ್ ಕ್ಯಾಮರಾ ಬಳಕೆ ಮಾಡಿಕೊಂಡು ಆದೇಶ ಉಲ್ಲಂಘನೆ ನಡೆಸುವವರು ಯಾರು ಎಂಬುದನ್ನು ಪತ್ತೆ ಹಚ್ಚಲಿದ್ದಾರೆ. ಅಂತಹ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ ಕಠಿನ ಕ್ರಮ ಜರಗಿಸಲಿದ್ದಾರೆ.
ಅನಗತ್ಯವಾಗಿ ಗುಂಪು ಸೇರಿ ಚರ್ಚೆ ನಡೆಸುವುದು, ಅಂಗಡಿಗಳ ಮುಂದೆ ಗುಂಪು ಸೇರುವುದು, ಒಳ ಪ್ರದೇಶಗಳಲ್ಲಿ ಕ್ರೀಡೆ ಸೇರಿದಂತೆ ಇನ್ನಿತರ ಚಟುವಟಿಕೆಗಳನ್ನು ನಡೆಸಿದರೆ ಅದು ಪೊಲೀಸ್ ಇಲಾಖೆಯ ಗಮನಕ್ಕೆ ಬರಲಿದೆ. ಸಾಮಾಜಿಕ ಅಂತರದ ಆದೇಶವನ್ನೂ ಉಲ್ಲಂಘಿಸಿದರೂ ಡ್ರೋನ್ ಕ್ಯಾಮರಾ ಅದನ್ನು ಪತ್ತೆ ಹಚ್ಚಲಿದೆ.
www.bantwalnews.com ಸಂಪಾದಕ: ಹರೀಶ ಮಾಂಬಾಡಿ.