ಮಾ.9ರಂದು ಸೌದಿ ಅರೇಬಿಯಾದಿಂದ 70 ವರ್ಷದ ಮಹಿಳೆಯೊಬ್ಬರು ಕ್ಯಾಲಿಕಟ್ ಗೆ ಬಂದಿದ್ದರು. 19ರಂದು ಅವರು ಚಿಕಿತ್ಸೆಗಾಗಿ ಮಂಗಳೂರಿಗೆ ಆಗಮಿಸಿದ್ದು, ಮಾ.24ರಂದು ಕೊರೊನಾ ಸೋಂಕು ತಗಲಿರುವುದು ದೃಢಪಟ್ಟಿತ್ತು. ಅವರಿಗೆ ಚಿಕಿತ್ಸೆ ನೀಡಲಾಗಿ ಏ.7 ಮತ್ತು 8ರಂದು ಗಂಟಲು ದ್ರವ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಭಾನುವಾರ (ಏ.12) ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಈ ಪ್ರಕರಣದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಾಖಲಾದ 12 ಕೋವಿಡ್ ಪ್ರಕರಣಗಳ ಪೈಕಿ 7 ಮಂದಿ ಆಸ್ಪತ್ರೆಯಿಂದ ಗುಣಮುಖರಾಗಿ ತಮ್ಮ ಮನೆಗಳಿಗೆ ತೆರಳಿದಂತಾಗಿದೆ.
ಭಾನುವಾರ 7 ಮಂದಿಯನ್ನು ನಿಗಾದಲ್ಲಿ ಇರಿಸಲಾಗಿದೆ. 32 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷೆ ರಿಪೋರ್ಟ್ ಹೊರಬರಲು ಬಾಕಿ ಇದೆ. 28 ಮಂದಿಯ ಪರೀಕ್ಷೆ ವರದಿ ಬಂದಿದ್ದು ಎಲ್ಲವೂ ನೆಗೆಟಿವ್ ಆಗಿದೆ. ಭಾನುವಾರ 26 ಮಂದಿಯ ಗಂಟಲು ದ್ರವ ಮಾದರಿಯನ್ನು ವೆನ್ಲಾಕ್ ಆಸ್ಪತ್ರೆಯ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲಾಗಿದೆ.
ಹೋಂ ಕ್ವಾರಂಟೈನ್ ನಲ್ಲಿ 2103 ಮಂದಿ ಈಗ ಇದ್ದಾರೆ. ಗಮನಾರ್ಹ ವಿಷಯವೇನೆಂದರೆ, ಇದುವರೆಗೆ ಹೋಂ ಕ್ವಾರಂಟೈನ್ ನಲ್ಲಿದ್ದು , 28 ದಿನಗಳ ಕಾಲ ಮನೆಯಲ್ಲೇ ಉಳಿದವರಲ್ಲಿ 3970 ಮಂದಿಯಲ್ಲಿ ಯಾವುದೇ ಸೋಂಕು ಲಕ್ಷಣ ಕಂಡುಬಾರದ ಕಾರಣ ಅವರ ಹೋಂ ಕ್ವಾರಂಟೈನ್ ಅವಧಿ ಮುಗಿದಂತಾಗಿದೆ.
ಬಂಟ್ವಾಳನ್ಯೂಸ್ ಸಂಪಾದಕ: ಹರೀಶ ಮಾಂಬಾಡಿ