ಬ್ಯಾಂಕುಗಳ ಹೆಸರು ಹೇಳಿಕೊಂಡು ಕಾಲ್ ಮಾಡಿ, ನಮ್ಮ ವೈಯಕ್ತಿಕ ಖಾತೆ ವಿವರ ಕೇಳುವುದು ನಿರಾಕರಿಸಿದರೆ ಗದರಿಸುವುದು, ಯಾರಾದರೂ ಅಮಾಯಕರಿದ್ದರೆ ನಯವಾಗಿ ಮಾತನಾಡಿ, ಅವರ ಮೊಬೈಲ್ ಗೆ ಬರುವ ಒಟಿಪಿ ಸಂಖ್ಯೆ ಕೇಳಿ ಹಣ ಲಪಟಾಯಿಸುವ ಖದೀಮರು ಇದ್ದಾರೆ. ಅವರ ಕುರಿತು ನಮ್ಮ ಓದುಗರನೇಕರು ದೂರವಾಣಿ ಕರೆಗಳ ಕುರಿತು ಮಾಹಿತಿ ಕಳೆದ ನಾಲ್ಕೈದು ದಿನಗಳಿಂದ ಒದಗಿಸುತ್ತಿದ್ದಾರೆ. ಈ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಲಕ್ಷ್ಮೀಪ್ರಸಾದ್ ಶನಿವಾರ ಪ್ರಕಟಣೆಯೊಂದನ್ನು ಹೊರಡಿಸಿದ್ದಾರೆ.
ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಈ ಸಂದರ್ಭ, ಕೆಲ ದಾನಿಗಳು ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿ ಪರಿಹಾರ ಖಾತೆಗೆ ಹಣ ಕಳುಹಿಸುತ್ತಿದ್ದಾರೆ. ಇದನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ವಂಚಕರು, ನಕಲಿ ಬ್ಯಾಂಕ್ ಖಾತೆಗಳ ವಿವರ ನೀಡಿ, ಹಣವನ್ನು ತಮ್ಮ ವೈಯಕ್ತಿಕ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುತ್ತಿರುವುದು ಹಾಗೂ ಖಾಸಗಿ ಸಂಸ್ಥೆಗಳಿಗೆ ದೇಣಿಗೆ ನೀಡಬೇಕು ಎಂದು ನಕಲಿ ಸಂಸ್ಥೆಗಳ ಹೆಸರಲ್ಲಿ ಕರೆ ಅಥವಾ ಸಾಮಾಜಿಕ ಜಾಲತಾಣಗಳ ಮೂಲಕ ಸಂಪರ್ಕಿಸುತ್ತಿರುವುದು ಕಂಡುಬಂದಿದೆ. ಸಾರ್ವಜನಿಕರು ಸರಿಯಾಗಿ ಪರಿಶೀಲಿಸದೆ ನಕಲಿ ಕರೆಗಳನ್ನು ಸ್ವೀಕರಿಸಬಾರದು. ಹಾಗೂ ಅಂಥ ನಕಲಿ ಖಾತೆಗಳಿಗೆ ದೇಣಿಗೆ ವರ್ಗಾಯಿಸಬಾರದು ಎಂದು ದ.ಕ.ಜಿಲ್ಲಾ ಎಸ್ಪಿ ಲಕ್ಷ್ಮೀಪ್ರಸಾದ್ ವಿನಂತಿಸಿದ್ದಾರೆ.
ಲಾಕ್ ಡೌನ್ ಹಿನ್ನೆಲೆಯಲ್ಲಿ ಕೇಂದ್ರ, ರಾಜ್ಯ ಸರಕಾರಗಳು ಆರ್ಥಿವಾಗಿ ಹಿಂದುಳಿದವರ ಖಾತೆಗಳಿಗೆ ಜನಧನ್ ಯೋಜನೆ ಮೂಲಕ ಹಣ ವರ್ಗಾಯಿಸುತ್ತಿದ್ದು, ಈ ನಡುವೆ ವಂಚಕರು ಸಾರ್ವಜನಿಕರಿಗೆ ವಿವಿಧ ಆಮಿಷವೊಡ್ಡಿ, ಅವರ ಬ್ಯಾಂಕ್ ಖಾತೆಗಳ ವಿವರಗಳನ್ನು ಹಾಗೂ ಗೌಪ್ಯ ಮಾಹಿತಿ ಪಡೆದು ವಂಚಿಸುತ್ತಿದ್ದು, ದ.ಕ.ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಈಗಾಗಲೇ ಪ್ರಕರಣ ದಾಖಲಾಗಿದೆ. ಸಾರ್ವಜನಿಕರು ಇಂಥ ನಕಲಿ ಕರೆಗಳ ಬಗ್ಗೆ ಜಾಗರೂಕರಾಗಿ. ತಮ್ಮ ಬ್ಯಾಂಕ್ ಅಕೌಂಟ್ ಗೆ ಸಂಬಂಧಿಸಿದ ಎಟಿಎಂ ಪಿನ್ ನಂಬರ್, ಎಟಿಎಂ 16 ಡಿಜಿಟ್ ನಂಬರ್, ಸಿವಿವಿ, ಸಿವಿಸಿ ನಂಬರ್, ಒಟಿಪಿ ನಂಬರ್, ಬ್ಯಾಂಕ್ ಅಕೌಂಟ್ ನಂಬರ್, ಐಎಫ್ ಎಸ್ ಸಿ ನಂಬರ್, ಎಂಐಸಿಆರ್ ನಂಬರ್ ಸೇರಿದಂತೆ ಗೌಪ್ಯ ಮಾಹಿತಿಯನ್ನು ಯಾರೊಂದಿಗೂ ಹಂಚಬಾರದು. ಈ ಬಗ್ಗೆ ಸಂದೇಹಗಳಿದ್ದಲ್ಲಿ ಸ್ಥಳೀಯ ಬ್ಯಾಂಕ್ ಗಳನ್ನು ಸಂಪರ್ಕಿಸಬೇಕು ಎಂದು ಎಸ್ಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೇಗೆ ವಂಚನೆ: ಬ್ಯಾಂಕಿನ ಹೆಸರು ಹೇಳಿ ಕರೆಯೊಂದು ಬರುತ್ತದೆ. ಉದಾ……ಎಂಬ ನಂಬರ್ ನಿಂದ. ನಾವು …. ಬ್ಯಾಂಕಿನಿಂದ ಕರೆ ಮಾಡುವುದು. ನಿಮ್ಮ ಅಕೌಂಟಿಗೆ ಹಣ ಬಂದಿದೆ. ಅದನ್ನು ಹಾಕಬೇಕು ಎಂದಿದ್ದರೆ, ನಿಮ್ಮ ಸರಿಯಾದ ಅಕೌಂಟ್ ನಂಬರ್, ಆಧಾರ್ ನಂಬರ್ ಕೊಡಿ ಎಂದು ಕೇಳುತ್ತಾರೆ. ನಾವು ನಿಜ ಎಂದು ನಂಬಿ ಅವರಿಗೆ ಮಾಹಿತಿ ನೀಡಿದೆವು ಎಂದಿಟ್ಟುಕೊಳ್ಳಿ. ಮುಂದೆ ನಿಮ್ಮ ಮೊಬೈಲ್ ಗೆ ಒಂದು ಮೆಸೇಜ್ ಬರುತ್ತದೆ ಅದನ್ನು ಓದಿ ಹೇಳಿ ಎನ್ನುತ್ತಾರೆ. ಅದು ಒಟಿಪಿ ಆಗಿರುತ್ತದೆ. ಅದನ್ನು ನಾವು ಹೇಳಿದರೆ ಕೆಲ ಹೊತ್ತಿನಲ್ಲಿ ನಮ್ಮ ಅಕೌಂಟ್ ನಿಂದ ಹಣ ಡಿಲೀಟ್ ಆಗಿರುತ್ತದೆ. !!