ದಕ್ಷಿಣ ಕನ್ನಡ ಜಿಲ್ಲೆ ಮತ್ತು ಬಂಟ್ವಾಳ ತಾಲೂಕಿಗೆ ಶನಿವಾರ ಶುಭ ಸುದ್ದಿ. ಕೋವಿಡ್ 19 ಪಾಸಿಟಿವ್ ಪ್ರಕರಣವಾಗಿ ದಾಖಲಾಗಿದ್ದ, ಬಂಟ್ವಾಳ ತಾಲೂಕಿನ ಸಜೀಪನಡು ಗ್ರಾಮದ ಸುಮಾರು 10 ತಿಂಗಳ ಮಗು ಸಂಪೂರ್ಣ ಗುಣಮುಖವಾಗಿ, ಶನಿವಾರ ಆಸ್ಪತ್ರೆ ಯಿಂದ ಬಿಡುಗಡೆಗೊಂಡು ಮನೆಗೆ ತೆರಳಿದೆ. ಮಗುವಿನ ತಾಯಿ ಹಾಗೂ ಅಜ್ಜಿಯ ಪರೀಕ್ಷಾ ವರದಿಗಳೂ ನೆಗೆಟಿವ್ ಆಗಿರುತ್ತದೆ. ಇವರೂ ಕೂಡಾ ಡಿಸ್ಚಾರ್ಜ್ ಆಗಿದ್ದಾರೆ.
ಇದುವರೆಗೆ ದ.ಕ. ಜಿಲ್ಲೆಯಲ್ಲಿ 12 ಕರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದವು. ಇವರಲ್ಲಿ 6 ಮಂದಿ ಗುಣಮುಖರಾಗಿ, ಬಿಡುಗಡೆಗೊಂಡಿದ್ದಾರೆ. ಅಂದರೆ ಶೇ.50 ಗುಣಮುಖರಾದಂತಾಗಿದೆ.
ಪ್ರಮುಖವಾದ ಅಂಶವೆಂದರೆ, ಈ ವಾರ ಪೂರ್ತಿ ಅಂದರೆ ಏಪ್ರಿಲ್ 5 ರಿಂದ 11 ರವರೆಗೆ ದ.ಕ. ಜಿಲ್ಲೆಯಲ್ಲಿ ಯಾವುದೇ ಹೊಸ ಕರೋನಾ ಪ್ರಕರಣಗಳು ದೃಢಪಟ್ಟಿರುವುದಿಲ್ಲ. ಇದು ಜಿಲ್ಲೆಯ ಮಟ್ಟಿಗೆ ಆಶಾದಾಯಕ ಸಂಗತಿ.
ರಾಜ್ಯದಲ್ಲೇ ವಿಶಿಷ್ಟ ಪ್ರಕರಣವಿದು:
10 ತಿಂಗಳ ಮಗುವಿನ ಕರೋನಾ ಪ್ರಕರಣವು, ರಾಜ್ಯದಲ್ಲೇ ವಿಶಿಷ್ಟ ಪ್ರಕರಣವಾಗಿತ್ತು. ಕೇವಲ ಎದೆ ಹಾಲು ಕುಡಿಯುವ ಪುಟ್ಟ ಕಂದನಿಗೆ ಕರೋನಾ ಚಿಕಿತ್ಸೆ ನೀಡುವುದು ವೈದ್ಯರಿಗೂ ಸವಾಲಾಗಿತ್ತು. ಪುಟ್ಟ ಮಗುವಿನ ಐಸೋಲೇಶನ್ ನೊಂದಿಗೆ, ಚಿಕಿತ್ಸೆ ನೀಡುವುದು ಬಹಳ ಸೂಕ್ಷ್ಮವಾಗಿತ್ತು. ವೈದ್ಯರು ಈ ಸವಾಲನ್ನು ಬಹಳ ನಾಜೂಕಾಗಿ ನಿರ್ವಹಿಸಿದ್ದು, ವೆನ್ ಲಾಕ್ ಹಾಗೂ ಖಾಸಗಿ ಆಸ್ಪತ್ರೆ ವೈದ್ಯರು ಗುಣಮಟ್ಟದ ಚಿಕಿತ್ಸೆ ನೀಡಿ, ಮಗುವನ್ನು ಗುಣಮುಖಗೊಳಿಸಿದ್ದಾರೆ. ಇದು ಜಿಲ್ಲೆಯ ವೈದ್ಯಕೀಯ ಕ್ಷೇತ್ರಕ್ಕೂ ಖ್ಯಾತಿ ತಂದಿದೆ.
ಅದೇ ರೀತಿ, ಮಗುವಿನ ಗ್ರಾಮದಲ್ಲಿ ಯಾರಿಗೂ ಕರೋನಾ ಹರಡದಿರುವುದು ಸಮಾಧಾನಕರ ವಿಷಯವಾಗಿದೆ. ಕರೋನಾ ದೃಟಪಟ್ಟ ನಂತರ ಇಡೀ ಸಜೀಪನಡು ಗ್ರಾಮವನ್ನು ಸಂಪೂರ್ಣ ಸೀಲ್ ಮಾಡಲಾಗಿತ್ತು. ಗ್ರಾಮಸ್ಥರು ಬಹಳ ಉತ್ತಮ ಸಹಕಾರ ನೀಡಿದ್ದಾರೆ. ಈ ಅವಧಿಯಲ್ಲಿ ಜಿಲ್ಲಾಡಳಿತ ಗ್ರಾಮಸ್ಥರಿಗೆ ಎಲ್ಲಾ ಅಗತ್ಯ ಸಾಮಾಗ್ರಿಗಳು, ಸೌಲಭ್ಯಗಳನ್ನು ಮನೆ ಬಾಗಿಲಿಗೆ ಒದಗಿಸಿದೆ.
ಎಲ್ಲ 46 ಪ್ರಕರಣ ನೆಗೆಟಿವ್, 34 ಹೊಸ ಪ್ರಕರಣ ಪರೀಕ್ಷೆಗೆ
ಶನಿವಾರ 46 ಮಂದಿಯ ಗಂಟಲು ದ್ರವ ಮಾದರಿಯ ಪರೀಕ್ಷೆ ಫಲಿತಾಂಶ ಬಂದಿದ್ದು, ಎಲ್ಲವೂ ನೆಗೆಟಿವ್ ಆಗಿದೆ. ಮತ್ತೆ 34 ಮಂದಿಯ ಗಂಟಲು ದ್ರವ ಮಾದರಿಯನ್ನು ಕಳುಹಿಸಲಾಗಿದೆ. ಜ್ವರ ಕ್ಲಿನಿಕ್ ಗಳಿಂದ 8 ಮಂದಿಯನ್ನು ಕೋವಿಡ್ ಶಂಕೆಯಲ್ಲಿ ನಿಗಾದಲ್ಲಿ ಇರಿಸಲಾಗಿದೆ.