www.bantwalnews.com Editor: Harish Mambady
ಕೋವಿಡ್ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕಿನ ತುಂಬೆ ಗ್ರಾಮ ಭಾಗಶಃ ಕ್ವಾರಂಟೈನ್ ನಲ್ಲಿದ್ದು, ಅದರಲ್ಲಿ ರೇಷನ್ ಅಂಗಡಿಯವರೂ ಸೇರಿರುವ ಕಾರಣ ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್. ಆರ್ ನೇತೃತ್ವದಲ್ಲಿ ಕಂದಾಯ ಇಲಾಖೆಯ ತಂಡ ಗ್ರಾಮದ ಜನರಿಗೆ ರೇಷನ್ ವಿತರಿಸುವ ಉಸ್ತುವಾರಿಯನ್ನು ಶುಕ್ರವಾರ ವಹಿಸಿಕೊಂಡಿತು.
ತುಂಬೆ ಸರಕಾರಿ ಶಾಲೆಯಲ್ಲಿ ಸುಮಾರು 350 ಮಂದಿಗೆ ರೇಷನ್ ಒದಗಿಸಲಾಯಿತು. ಕ್ವಾರಂಟೈನ್ ಪ್ರದೇಶಗಳ ಮನೆ ಮನೆಗೆ ತಲುಪಿಸುವ ಜವಾಬ್ದಾರಿಯನ್ನು ಗ್ರಾಪಂ ನಿರ್ವಹಿಸಿತು. ಉಳಿದವರಿಗೆ ಶಾಲೆಯಲ್ಲಿ ರೇಷನ್ ವಿತರಣಾ ಕಾರ್ಯ ನಡೆಯಿತು. ಬಂಟ್ವಾಳ ತಾಲೂಕು ಕಚೇರಿಯ ಪಾಣೆಮಂಗಳೂರು ಹೋಬಳಿ ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ, ಗ್ರಾಮಲೆಕ್ಕಿಗರಾದ ಪ್ರಶಾಂತ್, ನಾಗರಾಜ್, ವಿಜೇತಾ, ಗ್ರಾಮಸಹಾಯಕರಾದ ರೂಪೇಶ್ ಸದಾನಂದ, ತೂಕ ಅಳತೆ, ವಿತರಣೆ ಸಹಿತ ಲೆಕ್ಕಪತ್ರವನ್ನು ನೋಡಿಕೊಳ್ಳುವ ಕಾರ್ಯವನ್ನು ನಡೆಸಿದರು. ಒಂದೆರಡು ದಿನಗಳಲ್ಲಿ ಇಡೀ ಗ್ರಾಮಕ್ಕೆ ರೇಷನ್ ವಿತರಣೆ ಆಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.