46 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷೆ ವರದಿ ನಿರೀಕ್ಷೆಯಲ್ಲಿ
ದುಬೈನಿಂದ ಮಾ.21ರಂದು ಬಂದು ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿ, ಮಾ.27ರಂದು ಸೋಂಕು ದೃಢಪಟ್ಟ ವ್ಯಕ್ತಿ ಏ.10ರಂದು ಗುಣಮುಖರಾಗಿದ್ದಾರೆ. ಇದರೊಂದಿಗೆ ವೆನ್ಲಾಕ್ ನಿಂದ ಗುಣಮುಖರಾಗಿ ಬಿಡುಗಡೆಯಾದವರ ಸಂಖ್ಯೆ 5ಕ್ಕೇರಿದೆ. ಇದುವರೆಗೆ 402 ಮಂದಿಯ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 344 ನೆಗೆಟಿವ್ ಬಂದಿದೆ. 12 ಪಾಸಿಟಿವ್ ಬಂದಿದ್ದು, ಅವರ ಪೈಕಿ 7 ಮಂದಿಯಷ್ಟೇ ಚಿಕಿತ್ಸೆ ಪಡೆಯುತ್ತಿದ್ದು, 5 ಮಂದಿ ಗುಣಮುಖರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶುಕ್ರವಾರ 21 ಮಂದಿಯ ಗಂಟಲು ದ್ರವ ಮಾದರಿಯನ್ನು ತಪಾಸಣೆಗೆ ತೆಗೆದುಕೊಳ್ಳಲಾಗಿದೆ. ಗುರುವಾರ 25 ಮಂದಿಯ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ತೆಗೆದುಕೊಳ್ಳಲಾಗಿತ್ತು. ಒಟ್ಟು 46 ಮಂದಿಯ ಲ್ಯಾಬ್ ರಿಪೋರ್ಟ್ ಗಾಗಿ ಕಾಯಲಾಗುತ್ತಿದೆ.
ಶುಕ್ರವಾರ 9 ಮಂದಿಯನ್ನು ನಿಗಾದಲ್ಲಿ ಇರಿಸಲಾಗಿದೆ. 2945 ಮಂದಿ ಹೋಂ ಕ್ವಾರಂಟೈನ್ ನಲ್ಲಿದ್ದಾರೆ ಎಂದು ಮಾಹಿತಿ ನೀಡಲಾಗಿದೆ.
ಫೀವರ್ ಕ್ಲಿನಿಕ್ ಗಳಲ್ಲಿ ಈವರೆಗೆ 84 ಮಂದಿಯನ್ನು ತಪಾಸಿಸಲಾಗಿದೆ. ಯಾವುದೇ ಶಂಕಿತ ಕೋವಿಡ್ 19 ಸೋಂಕು ಇರುವ ಪ್ರಕರಣಗಳು ಇಲ್ಲಿ ದಾಖಲಾಗಿಲ್ಲ.
ಮಾಸ್ಕ್ ಹಾಕಿರಿ: ಇದೀಗ ಆರೋಗ್ಯ ಇಲಾಖೆ ಮಾಸ್ಕ್ ಹಾಕಲು ಸಲಹೆ ನೀಡಿದೆ. ಸಾರ್ವಜನಿಕರು ಅಪರಿಚಿತರೊಡನೆ ಸಂಪರ್ಕಿಸುವ ಸಂದರ್ಭ, ವ್ಯಾಪಾರಿ ಮಳಿಗೆಗೆ ಭೇಟಿ ನೀಡುವ ಸಂದರ್ಭ ಕಚೇರಿ ಅಥವಾ ಕಾರ್ಯನಿರತ ಸ್ಥಳಗಳಲ್ಲಿ ಮುಖಗವಸು ಬಳಸುವುದು ಸೂಕ್ತ ಎಂದು ಇಲಾಖೆ ಸಲಹೆ ನೀಡಿದೆ.