ಕರ್ಕಶ ಹಾರ್ನ್, ಕಿರುಚುವ ಬ್ರೇಕು, ಅದರುವ ಕಂಟೈನರ್ ಗಳು , ಸೈಲೆನ್ಸರ್ ಇಲ್ಲದ ಬೈಕುಗಳು , ಗಳಿಗೆಗೊಮ್ಮೆ ಗಾಳಿಯನ್ನು ಸೀಳಿಕೊಂಡು ಸೈರನ್ ಹಾಕುತ್ತ ಧಾವಿಸುವ ಆಂಬುಲೆನ್ಸ್ ಗಳು, ರೆಕಾರ್ಡ್ ಮಾಡಿದ್ದನ್ನು ಮತ್ತೆ ಮತ್ತೆ ಬೊಗಳಿ ತಲೆಚಿಟ್ಟು ಹಿಡಿಸುವ ರಿಕ್ಷಾದಲ್ಲಿ ಬಂದ ಮೈಕಾಸುರ, ಫ್ಲೈ ಓವರ್ ನ ಜಾರುಬಂಡಿಯಲ್ಲಿ ಝೂಂ ಎಂದು ಜಾರಿ ಬರುವ ವಿದೇಶಿನಿರ್ಮಿತ ಕಾರುಗಳು, ಎಲ್ಲವನ್ನೂ ನಮ್ಮ ಕಿವಿಗಳು ನಿರ್ಲಿಪ್ತವಾಗಿ ಕೇಳಿಸಿಕೊಳ್ಳುತ್ತಾ ತಮ್ಮ ಪಾಡಿಗೆ ತಾವಿರುತ್ತವೆ. ಅವೆಲ್ಲವೂ ನಮ್ಮ ಜೀವನದ ಅವಿಭಾಜ್ಯ ಆಗುಹೋಗುಗಳಾಗಿದ್ದವು . ಈಗ ಬರಿಯ ಮೌನ, ಅಸಹ್ಯ ಹಾಗು ಕೆಲವೊಮ್ಮೆ ಭಯ ಸಹ.
ಅದೆಷ್ಟು ರಾತ್ರಿ ಬಸ್ಸುಗಳು ಅಲ್ಲಲ್ಲಿ ಬ್ಯಾಗು ಲಗ್ಗೇಜುಗಳೊಂದಿಗೆ ಕಿವಿಗೆ ಇಯರ್ ಫೋನು ಸಿಕ್ಕಿಸಿ ಮಾರ್ಗದ ಬದಿಯಲ್ಲಿ ಕಾದುನಿಂತ ಟೆಕ್ಕಿಗಳನ್ನು ತೆಕ್ಕೆಯಲ್ಲಿ ಎಳೆದುಕೊಂಡು ಹಾರಿಕೊಂಡು ಹೋಗುತ್ತಿದ್ದವು.
ಮುಂಗಡ ಟಿಕೇಟು ಅಗತ್ಯವಿಲ್ಲದ ಕೆಂಪು ಬಸ್ಸುಗಳು, ಬಾಕಿಯಾದವರನ್ನು ಹತ್ತಿಸಿಕೊಂಡು ಒಯ್ಯುತ್ತಿದ್ದ ದೊಡ್ಡ ಕ್ಯಾಬಿನ್ನಿನ ಲಾರಿಗಳು. ಒಂದರದ್ದೂ ಪತ್ತೆಯೇ ಇಲ್ಲ. ನರಸಿಂಹಯ್ಯನ ಪತ್ತೇದಾರಿಯಲ್ಲಿ ಬರುವಂತೆ ನಿಶಾದೇವಿಯು ತನ್ನ ಸೆರಗನ್ನು ಹಾಸಿದ್ದಾಳೆ, ಊರಿಡಿ ನಿದ್ದೆಗೆ ಜಾರಿದೆ, ಕಾಡಿಗೆಯನ್ನು ಬಳಿದುಕೊಂಡ ಅಮವಾಸ್ಯೆಯ ಕರಾಳ ರಾತ್ರಿ ..ಆ ಸಾಲುಗಳು ನೆನಪಾಗುತ್ತವೆ.
ಎಲ್ಲಿ ಹೋದರೊ ಇವರೆಲ್ಲಾ, ದೈನಿಕ ಖರ್ಚು ಹೇಗೆ ನಿಭಾಸುತ್ತಾರೆ. ಕ್ಲಚ್, ಬ್ರೇಕುಗಳಿಗೆ ಒಗ್ಗಿಕೊಂಡಿದ್ದ ಕಾಲುಗಳಿಗೆ ಇರುವೆ ಬಂದಿರದಿರುವುದೇ. ಇವರಿಗೆ ರಾತ್ರಿ ನಿದ್ರಿಸುವ ಅಭ್ಯಾಸವಾದರೆ ಮುಂದೇನು ಗತಿ. ಮಧ್ಯರಾತ್ರಿಯಲ್ಲಿ ಚಾ ಹೀರುವ ಚಟ ನಿಲ್ಲಿಸಿದ್ದಾರೊ. ಘಟ್ಟದ ಹೋಟೇಲಿನ ಪಾನ್ ಬೀಡಾ ಭಯ್ಯಾನ ಚೈನಾಸೆಟ್ ನ ಭೋಜಪುರಿ ಸಾಂಗು ಧಮ್ ಕಳೆದುಕೊಂಡಿರಬಹುದು. ಬೆಳಗ್ಗಿನ ಆಟೋಡ್ರೈವರ್ ಗಳ ಒಡೆದ ಪ್ಯಾಕೇಟಿನ ಅಗರಬತ್ತಿಯ ಸುವಾಸನೆ ಹಾಗೇ ಉಳಿಯಬಹುದೆ. ತಿಂಗಳ ಕಂತಿಗೆ ಮಕ್ಕಳ ಪಿಗ್ಗಿ ಬ್ಯಾಂಕ್ ಒಡೆದರಾಯ್ತು , ಅವರು ಅತ್ತರೆ ?
ನಿತ್ಯ ಕರವಸೂಲಿಗೆ ಬರುತ್ತಿದ್ದ ಭಿಕ್ಷುಕರು ತಮ್ಮ ದಿನ ಖರ್ಚಿಗೆ ನೋಟುಗಳನ್ನು ಮತ್ತೆ ಚಿಲ್ಲರೆ ಮಾಡಿದರೇ, ಇವರೆಲ್ಲರಿಗೆ ಅಗ್ಗದ ಮಾಲು ಎಲ್ಲಿಂದ ಸಿಗಬಹುದು. ಛಟೀರ್ ಎಂದು ಚಾಟಿ ಬೀಸಿ ಐದರ ಪಾವಲಿ ಕೊಂಡೊಯ್ಯುವ ಕೆಂಪುಸ್ಕರ್ಟ್ ಧಾರಿಯ ದೇವರು ಬಿಸಿಲಲ್ಲಿ ಅಲೆದು ಸುಸ್ತಾಗಿ ವಿಶ್ರಾಂತಿಯಲ್ಲಿರಬಹುದು. ಬುಡುಬುಡಿಕೆಯವನ ಸ್ವಂತ ಭವಿಷ್ಯ ಹೇಗಾಗಬಹುದು. ಅಭಂಗಗಳನ್ನು ಹಾಡಿಕೊಂಡು ಬರುತ್ತಿದ್ದವ ಹಾರ್ಮೋನಿಯಂ ಬಿಚ್ಚಿ ರಿಪೇರಿ ಮಾಡಿ ಕುಳಿತಿರಬಹುದೆ. ಮೇಕಪ್ ಮಾಡಿ ಕೈ ತಟ್ಟಿ ಬರುವ. ಅರ್ಧನಾರೀಶ್ವರರೆಲ್ಲಾ ಎಲ್ಲಿ ಅಂತರ್ಃಧಾನರಾದರು. ಮೇಳದ ಲಾರಿಗಳಲ್ಲಿ ವೇಷಭೂಷಣಗಳ ಪೆಟ್ಟಿಗೆಯ ಮೇಲೆ ಅಂಗಾತ ಮಲಗಿ ಬರುವ ಬಾಲಗೋಪಾಲರು ಈಗ ಗದ್ದೆಯಲ್ಲಿ ದುಡಿಯುತ್ತಿರಬೇಕು.
ಮೊನ್ನೆಯಷ್ಟೇ ಕಾಲುಗಂಟಿಗೆಂದು ಎಳ್ಳೆಣ್ಣೆ ಕೊಂಡೋದ ಹಿರಿಯ ವೇಷಧಾರಿ ಜೋಗಿಯವರು ಆರಾಮವಾಗಿ ಇದ್ದಾರೆನೊ. ಸಂತೆಯಲ್ಲಿ ಸುಕುರುಂಡೆ ಮಾರುತ್ತಿದ್ದ ನಾಯ್ಕ ವ್ಯಾಪಾರವಿಲ್ಲದೆ ಉಳಿದ ಸಾಮಾನುಗಳನ್ನು ಮರಳಿಸಿ ಕೊಂಡೋದ ಹಣ
ಜೋಪಾನವಾಗಿ ಇಟ್ಟಿರಬಹುದೆ.
ಭಟ್ಟಿಳಿಸಲು ಕಪ್ಪು ಬೆಲ್ಲಕ್ಕಾಗಿ ಊರೆಲ್ಲಾ ಹುಡುಕಿ ಸುಸ್ತಾದ ಆಲ್ಬರ್ಟ್ ಪರ್ಬು ಮುಸ್ಸಂಜೆ ಕಳೆಯಲು ಏನು ವಿಲೇವಾರಿ ಮಾಡಿರಬಹುದು. ನಿತ್ಯವೂ ಮಟನ್ ಬೇಕೇ ಬೇಕು ಎನ್ನುವ ಕರೀಂ ಸಾಯ್ಬಾ ನಿನ್ನೆ ಕೊಂಡು ಹೋದ ಹುರುಳಿಯ ಸಾರಿನ ರುಚಿ ಹೇಗಿರಬಹುದು.
ಎಲ್ಲರೂ ತಮ್ಮ ಪಾತ್ರ ಮುಗಿಸಿ ಗ್ರೀನ್ ರೂಂನಲ್ಲಿ ಕಾಸ್ಟ್ಯೂಮ್ಗಳನ್ನು ಬಿಚ್ಚಿತೆಗೆದಿಟ್ಟು ಮನೆಸೇರಿ ವಿಶ್ರಾಂತಿಗೆ ಜಾರಿದ ಪಾತ್ರಧಾರಿಗಳಂತೆ. ಅನಿಸುತಿದೆ ಯಾಕೋ ಇಂದು (ಇವರೆಲ್ಲ) …ನನ್ನವರೆಂದು .. ಜಯಂತ್ ಕಾಯ್ಕಿಣಿಯವರ ಹಾಡಿನ ನೆನಪಾಯಿತು.
(ಲೇಖಕರು: ಕವಿ, ಬರೆಹಗಾರ)