ಕೊರೊನಾ ಹಿನ್ನೆಲೆಯಲ್ಲಿ ಗಡಿ ಬಂದ್ ಕಟ್ಟುನಿಟ್ಟು ಜಾರಿಗೆ ಒತ್ತಾಯ
ಕೊರೊನಾ ಹಿನ್ನೆಲೆಯಲ್ಲಿ ಗಡಿಗಳನ್ನು ಬಂದ್ ಮಾಡಿದರೂ ಬಂಟ್ವಾಳ ತಾಲೂಕಿನ ಕರೋಪಾಡಿ ಎಂಬಲ್ಲಿ ಎರಡು ಕಡೆ ವಾಹನಗಳು ಬರಲು ಸಾಧ್ಯವಾಗುತ್ತದೆ ಎಂಬ ದೂರಿನನ್ವಯ ಭಾನುವಾರ ಸ್ಥಳಕ್ಕಾಗಮಿಸಿ ಪರಿಶೀಲಿಸಿದ ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್, ರಸ್ತೆಗಳನ್ನು ಬಂದ್ ಮಾಡಿಸಿದರು.
ಶನಿವಾರ ಕರೋಪಾಡಿ ಗ್ರಾಮದ ಗಡಿಜಾಗೆ, ಕೋಡ್ಲ ಎಂಬಲ್ಲಿರುವ 2 ಸಂಪರ್ಕ ರಸ್ತೆಯನ್ನು ಸಂಚಾರಕ್ಕೆ ತೆರೆಯಲಾಗಿತ್ತು ಮತ್ತು ಆ ದಾರಿಯಿಂದ ಹಲವಾರು ಕೇರಳದ ವಾಹನಗಳು ಕರೋಪಾಡಿಗೆ ಬರುತ್ತಿದ್ದವು. ಗಡಿಮುಚ್ಚುವ ವಿಚಾರದಲ್ಲಿ ವಿಟ್ಲ ಪೊಲೀಸರು ಮಾತ್ರ ಹೆಣಗಾಡುತ್ತಿದ್ದಾರೆ. ಅವರಿಗೆ ಗ್ರಾಮದ ಗಡಿ ಗುರುತು ರೇಖೆ ಗೊತ್ತಿಲ್ಲ. ಗಡಿರೇಖೆಯನ್ನು ಸಾರ್ವಜನಿಕರು ಗುರುತಿಸುವುದಕ್ಕಿಂತ ಸಂಬಂಧಪಟ್ಟ ಅಧಿಕಾರಿಗಳೇ ತಿಳಿಸಿದರೆ ಉತ್ತಮ. ಈ ರಸ್ತೆಯನ್ನು ತೆರೆದಿಟ್ಟರೆ ಈ ಗ್ರಾಮದ ಗಡಿಪ್ರದೇಶವಾದ ಕಾಸರಗೋಡು ಜಿಲ್ಲೆಯಲ್ಲಿ ಈಗಾಗಲೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚು ವರದಿಯಾಗಿರುತ್ತದೆ. ಇದರಿಂದ ನಮ್ಮ ಗ್ರಾಮದ ಜನರು ಆತಂಕದಿಂದ ಇರುವಂತಹ ಸನ್ನಿವೇಶ ಎದುರಾಗಿದೆ. ಆದುದರಿಂದ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರಾದ ವಿನೋದ್ ಶೆಟ್ಟಿ ಪಟ್ಲ ತಹಸೀಲ್ದಾರ್ ಅವರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದರು.
ಕರೋಪಾಡಿಯಲ್ಲಿ ಲಾಕ್ ಡೌನ್ ಆದೇಶವಾಗುತ್ತಿದ್ದಂತೆ ಕರೋಪಾಡಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದೇವಪ್ಪ, ವಿಟ್ಲ ಎಸ್ ಐ ವಿನೋದ್ ಎಸ್. ಕೆ. ಅವರ ನೇತೃತ್ವದಲ್ಲಿ ಗಡಿಯನ್ನು ಮಣ್ಣಿ ಹಾಕಿ ಬಂದ್ ಮಾಡಿದ್ದರೂ ಪ್ರಯೋಜನ ಆಗಿರಲಿಲ್ಲ. ಕೆಲವರು ರಸ್ತೆಯನ್ನು ಬಂದ್ ಮಾಡುವುದಕ್ಕೆ ತೀವ್ರ ವಿರೋಧ ವ್ಯಕ್ತ ಪಡಿಸಿದ ಹಿನ್ನೆಲೆಯಲ್ಲಿ ರೌಡಿ ನಿಗ್ರಹ ದಳ ಹಾಗೂ ವಿಟ್ಲ ಪೊಲೀಸರು ಬಂದ್ ಮಾಡುವಲ್ಲಿ ಯಶಸ್ವಿಯಾದರು.
ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ 8 ಪ್ರಮುಖ ರಸ್ತೆಗಳು ಕರೋಪಾಡಿ ಗ್ರಾಮದ ಮೂಲಕ ಕರ್ನಾಟಕವನ್ನು ಸಂಪರ್ಕಿಸುತ್ತದೆ. ಇದರಲ್ಲಿ ಎರಡು ರಸ್ತೆಯನ್ನು ಶನಿವಾರ ತೆರವುಗೊಳಿಸಿದ್ದರಿಂದ ಕೇರಳದ ವಾಹನಗಳು ಕರೋಪಾಡಿ ಮಾರ್ಗವಾಗಿ ಕರ್ನಾಟಕ ರಾಜ್ಯದ ಮಂಗಳೂರು, ಬಂಟ್ವಾಳ, ಪುತ್ತೂರು ಇತರ ಎಲ್ಲಾ ನಗರಗಳನ್ನು ಸುಲಭವಾಗಿ ಸಂಪರ್ಕಿಸುವಂತಾಗಿತ್ತು. ಕರೋಪಾಡಿ ಗ್ರಾಮವನ್ನು ಸಂಪರ್ಕಿಸುವ ಎಲ್ಲಾ ಕೇರಳದ ರಸ್ತೆಗಳನ್ನು ಮುಚ್ಚಿಸುವುದು ಸೂಕ್ತ ಎಂದು ವಿನೋದ್ ಶೆಟ್ಟಿ ಪಟ್ಲ ಮನವಿ ಮಾಡಿದ್ದರು.