ಇಷ್ಟು ದಿನ ಕಳೆದಾಗಿದೆ. ಇನ್ನು 9 ದಿನಗಳಷ್ಟೇ ಬಾಕಿ. ಏ.14ಕ್ಕೆ ದೇಶಾದ್ಯಂತ ವಿಧಿಸಿದ ಲಾಕ್ ಡೌನ್ ಅಂತ್ಯವಾಗುವ ಕಾಲ ಸನ್ನಿಹಿತ. ಅದು ಮುಂದುವರಿಯಬಾರದು ಎಂದಿದ್ದರೆ, ಉಳಿದ ದಿನಗಳಲ್ಲಾದರೂ ಮನೆಯಲ್ಲೇ ಇರಿ. ಸೇಫ್ ಆಗಿರಿ.
ಸೋಂಕಿತರ ಸಂಖ್ಯೆ ವಿಶ್ವಾದ್ಯಂತ ಹೆಚ್ಚಳವಾಗುತ್ತಿದ್ದು, ಭಾರತದಲ್ಲೂ ಇದುವರೆಗೆ 70ರಷ್ಟು ಮರಣಗಳೇ ಆಗಿದೆ. ಸುಮಾರು 3 ಸಾವಿರಕ್ಕೂ ಅಧಿಕ ಮಂದಿ ಸೋಂಕಿತರು ಇರುವ ಕಾರಣ ಕೊರೊನಾ ಜಾಗೃತಿ ಅತ್ಯಗತ್ಯ. ಇದು ಸದ್ಯಕ್ಕೆ ಇಡೀ ವಿಶ್ವಕ್ಕೇ ನಿರ್ಣಾಯಕ ಕಾಲಘಟ್ಟ. ಕಳೆದ 24 ತಾಸುಗಳಲ್ಲಿ ವಿಶ್ವದ ಇತರೆಡೆ ಸೋಂಕಿನಿಂದ ಮೃತಪಟ್ಟವರೂ ಜಾಸ್ತಿಯಾಗಿದ್ದಾರೆ. ಭಾರತದಲ್ಲಿ ಕೊರೋನಾ ವೈರಸ್ ಗೆ ಕಳೆದ 12 ಗಂಟೆಗಳ ಅವಧಿಯಲ್ಲಿ 302 ಹೊಸ ಸೋಂಕು ಪ್ರಕರಣಗಳು ದಾಖಲಾಗಿದ್ದು, ಆ ಮೂಲಕ ಭಾರತದಲ್ಲಿ ಸೋಂಕಿತರ ಸಂಖ್ಯೆ 3374ಕ್ಕೆ ಏರಿಕೆಯಾಗಿದೆ ಎಂದು ಸುದ್ದಿಸಂಸ್ಥೆ ಎ.ಎನ್.ಐ. ವರದಿ ಮಾಡಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈ ಮಾರಕ ವೈರಸ್ ಗೆ ಮೃತರಾಗುವವರ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ ಎಂದಿದ್ದಾರೆ. ಅಲ್ಲಿನ ಸುದ್ದಿಮಾಧ್ಯಮಗಳ ಪ್ರಕಾರ, 1344 ಮಂದಿ ಶನಿವಾರವೇ ಮೃತಪಟ್ಟಿದ್ದಾರೆ. ಶನಿವಾರ ಸ್ಪೈನ್ ದೇಶದಲ್ಲಿ 809 ಮಂದಿ ಮೃತಪಟ್ಟಿರುವುದು ಕಳವಳಕಾರಿಯಾಗಿದೆ.
ಅಂದಾಜು 12 ಲಕ್ಷ ಕೊರೊನಾ ಪಾಸಿಟಿವ್ ಕೇಸುಗಳು ವಿಶ್ವದಾದ್ಯಂತ ಇದ್ದರೆ, 64 ಸಾವಿರ ಸಾವು ಸಂಭವಿಸಿದೆ ಎಂಬುದು ನಿರ್ಲಕ್ಷ್ಯ ಮಾಡುವ ವಿಚಾರವೇನಲ್ಲ.