ಬಂಟ್ವಾಳ

ಖಾಸಗಿ ವಾಹನ ಸಂಚಾರಕ್ಕೆ ಪೊಲೀಸರ ಬ್ರೇಕ್: ಕಟ್ಟುನಿಟ್ಟು ನಿಯಮ ಪಾಲನೆ ಜಾರಿ

  • ನಿನ್ನೆಯಿಂದೀಚೆಗೆ ಹಲವು ವಾಹನಗಳು ವಶಕ್ಕೆ

ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಕಳೆದ ಶನಿವಾರದಿಂದೀಚೆಗೆ ಪ್ರತಿದಿನವೂ ಸಾರ್ವಜನಿಕರ ಹಿತದೃಷ್ಟಿಯಿಂದ ನಿಯಮಗಳನ್ನು ಜಿಲ್ಲಾಡಳಿತ ತರುತ್ತಿದ್ದು, ಅದನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲು ಪೊಲೀಸ್ ಇಲಾಖೆ ಹಗಲಿರುಳು ಶ್ರಮಿಸುತ್ತಿದೆ. ಶನಿವಾರ, ಭಾನುವಾರ, ಸೋಮವಾರ ಇಡೀ ದಿನ ಅಂಗಡಿಗಳನ್ನು ಬಂದ್ ಮಾಡಿ ಯಾರೂ ಪ್ರವೇಶಿಸದಂತೆ ಕಟ್ಟಪ್ಪಣೆ ವಿಧಿಸಲಾಗಿತ್ತು. ಮಂಗಳವಾರ ಬೆಳಗ್ಗಿನಿಂದ ಮಧ್ಯಾಹ್ನ 3 ಗಂಟೆವರೆಗಷ್ಟೇ ತೆರೆಯಲಾಗುತ್ತದೆ ಎಂದು ಹೇಳಲಾಗಿತ್ತು. ಈ ಸಂದರ್ಭ ಅಂಗಡಿಗಳು ಹೌಸ್ ಫುಲ್ ಆಗುವುದನ್ನು ಗಮನಿಸಿದ ಜಿಲ್ಲಾಡಳಿತ ಮತ್ತೊಂದು ಪ್ರಕಟಣೆ ಹೊರಡಿಸಿ, ದಿನವಹಿ ಬೆಳಗ್ಗೆ 7ರಿಂದ 12ರವರೆಗೆ ಸಾರ್ವಜನಿಕರು ಅಗತ್ಯ ವಸ್ತುಗಳನ್ನು ಖರೀದಿಸಬಹುದು ಎಂದು ಹೇಳಿತು. ಗುರುವಾರ ಮತ್ತೊಂದು ಪ್ರಕಟಣೆ ಹೊರಡಿಸಿ ಖಾಸಗಿ ವಾಹನ ಸಂಚಾರವನ್ನೇ ನಿಷೇಧಿಸಿತು. ಈ ಹಿನ್ನೆಲೆಯಲ್ಲಿ ಶುಕ್ರವಾರ ಆಗಮಿಸುವ ದ್ವಿಚಕ್ರ ವಾಹನಗಳನ್ನೂ ಪೊಲೀಸರು ಪರಿಶೀಲಿಸಿದರು.

ಪುರಸಭೆ ವ್ಯಾಪ್ತಿಯಾದ ಬಿ.ಸಿ.ರೋಡಿನಲ್ಲಿ ಬೆರಳೆಣಿಕೆಯಷ್ಟು ದಿನಸಿ ಅಂಗಡಿಗಳು ತೆರೆದಿದ್ದರೂ ವಾಹನ ಸಂಚಾರಕ್ಕೆ ಅವಕಾಶ ಇಲ್ಲದ ಕಾರಣ ಬೆರಳೆಣಿಕೆಯಷ್ಟು ಜನರು ಬಿ.ಸಿ.ರೋಡ್ ಸಹಿತ ಪುರಸಭಾ ವ್ಯಾಪ್ತಿಯಲ್ಲಿ ಕಂಡುಬಂದರೆ, ಇತರ ಪ್ರದೇಶಗಳಲ್ಲೂ ಜನಜಂಗುಳಿ ಕಂಡುಬರಲಿಲ್ಲ. ಈ ಮಧ್ಯೆ ಬಂಟ್ವಾಳ ಪೊಲೀಸರು ಬೆಳಗ್ಗಿನಿಂದಲೇ ಪ್ರತಿಯೊಂದು ವಾಹನಗಳ ತಪಾಸಣೆ ಮಾಡುವ ಮೂಲಕ ಖಾಸಗಿ ವಾಹನಗಳಲ್ಲಿ ತೆರಳುವವರಿಗೆ ಸಂಚರಿಸದಂತೆ ಎಚ್ಚರಿಕೆ ನೀಡಿ, ಕೊರೊನಾ ಕುರಿತ ಜಾಗೃತಿ ಮೂಡಿಸಿದರು. ನಗರ ಠಾಣಾ ಎಸ್ಸೈ ಅವಿನಾಶ್, ಗ್ರಾಮಾಂತರ ಠಾಣಾ ಎಸ್.ಐ. ಪ್ರಸನ್ನ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು. ಗುರುವಾರ ಸಂಜೆ ತಲಪಾಡಿಯಲ್ಲಿ  6 ಗಂಟೆ ವೇಳೆ ಸುಮಾರು 8 ಯುವಕರು ನಿಷೇಧಾಜ್ಞೆ ಉಲ್ಲಂಘಿಸಿ, ಬೈಕುಗಳಲ್ಲಿದ್ದ ಪ್ರಕರಣಕ್ಕೆಸಂಬಂಧಿಸಿ ಪೊಲೀಸರು 6 ಬೈಕುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಬಂಟ್ವಾಳನ್ಯೂಸ್  ಸಂಪಾದಕ: ಹರೀಶ ಮಾಂಬಾಡಿ

 

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts