ಕೋವಿಡ್ 19ರ ಕಟ್ಟೆಚ್ಚರದ ಸಂದರ್ಭ ನಗರದಾದ್ಯಂತ ಕಸ ವಿಲೇವಾರಿಯಲ್ಲಿ ದುಡಿಯುತ್ತಿರುವ ಸುಮಾರು 44 ಮಂದಿ ಪೌರಕಾರ್ಮಿಕರಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ವೈಯಕ್ತಿಕ ನೆಲೆಯಲ್ಲಿ ಆಹಾರದ ಕಿಟ್ ವಿತರಿಸಿದರು.
ಪ್ರತಿಯೊಬ್ಬರಿಗೂ ತಲಾ 25 ಕೆ.ಜಿ. ಅಕ್ಕಿ ಮತ್ತು 1 ಸಾವಿರ ರೂ ನಗದನ್ನು ನೀಡಿದ ಶಾಸಕರು, ಬಳಿಕ ಕಾರ್ಮಿಕರ ಆರೋಗ್ಯ ರಕ್ಷಣೆ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ಆರೋಗ್ಯ ತಪಾಸಣೆಗೆ ಸೂಚಿಸಿದರು. ಈ ವೇಳೆ ಮಾತನಾಡಿದ ರಾಜೇಶ್ ನಾಯ್ಕ್, ಬಂಟ್ವಾಳದಲ್ಲಿ ದುಡಿಯುವ ಪೌರಕಾರ್ಮಿಕರು ಮನೆಯಲ್ಲಿರುವ ನಾಗರಿಕರಿಗಾಗಿ ತಮ್ಮ ಕಷ್ಟವನ್ನು ಬದಿಗೊತ್ತಿ ಶ್ರಮಿಸುತ್ತಿದ್ದಾರೆ. ಅವರ ಆರೋಗ್ಯ ರಕ್ಷಣೆ ಹಾಗೂ ಸೌಕರ್ಯದ ಜವಾಬ್ದಾರಿ ನಮ್ಮದು. ಈ ನಿಟ್ಟಿನಲ್ಲಿ ಅವರಿಗೆ ಆಹಾರದ ಕಿಟ್ ಅನ್ನು ವೈಯಕ್ತಿಕ ನೆಲೆಯಲ್ಲಿ ವಿತರಿಸಲಾಗುತ್ತಿದೆ ಎಂದು ಹೇಳಿದರು.
ಆಶಾ ಕಾರ್ಯಕರ್ತೆಯರಿಗೂ ಕಿಟ್: ಬಂಟ್ವಾಳ ತಾಲೂಕಿನಾದ್ಯಂತ ಮನೆ ಮನೆಗೆ ತೆರಳಿ ಕೊರೊನಾ ವಿರುದ್ಧ ಜಾಗೃತಿ ಮೂಡಿಸುವ ಹಾಗೂ ಆರೋಗ್ಯ ರಕ್ಷಣೆಯಲ್ಲಿ ಪ್ರಧಾನ ಪಾತ್ರ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೂ ಆಹಾರ ಕಿಟ್ ಅನ್ನು ಶುಕ್ರವಾರದಿಂದ ವಿತರಿಸಲಾಗುವುದು ಎಂದು ಶಾಸಕರು ಈ ಸಂದರ್ಭ ಪ್ರಕಟಿಸಿದರು. ಬಳಿಕ ಬಿ.ಸಿ.ರೋಡ್ ಬಸ್ ನಿಲ್ದಾಣ ಸಹಿತ ಹಲವೆಡೆ ಇದ್ದ ಭಿಕ್ಷುಕರು, ನಿರಾಶ್ರಿತರು, ನಿರ್ಗತಿಕರಿಗೆ ಊಟದ ಪೊಟ್ಟಣವನ್ನು ಶಾಸಕರು ವಿತರಿಸಿದರು. ಇದಕ್ಕೂ ಮುನ್ನ ಪುರಸಭೆಯ ಆವರಣದಲ್ಲಿ ನಡೆಯುವ ಕಸ ವಿಂಗಡಣೆ ಪ್ರಕ್ರಿಯೆಯನ್ನು ಶಾಸಕರು ಪರಿಶೀಲಿಸಿದರು.
ಬಂಟ್ವಾಳ ಸಮುದಾಯ ಆಸ್ಪತ್ರೆಯ ವೈದ್ಯೆ ಡಾ. ವಾಣಿಶ್ರೀ ಪೌರಕಾರ್ಮಿಕರ ಆರೋಗ್ಯ ತಪಾಸಣೆಯನ್ನು ನಡೆಸಿದರು. ಈ ಸಂದರ್ಭ ಬುಡಾ ಅಧ್ಯಕ್ಷ ದೇವದಾಸ ಶೆಟ್ಟಿ, ಪುರಸಭಾ ಹಿರಿಯ ಸದಸ್ಯ ಎ.ಗೋವಿಂದ ಪ್ರಭು, ಸದಸ್ಯ ಹರಿಪ್ರಸಾದ್, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು, ಪುರಸಭೆ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ, ಪರಿಸರ ಎಂಜಿನಿಯರ್ ಯಾಸ್ಮೀನ್ ಸುಲ್ತಾನಾ, ಸಮುದಾಯ ಸಂಘಟಕಿ ದಯಾವತಿ, ಎಂಜಿನಿಯರ್ ಡೊಮಿನಿಕ್ ಡಿಮೆಲ್ಲೊ, ಕಿರಿಯ ಇಂಜಿನಿಯರ್ ಸಹಾಯಕ ಇಕ್ಬಾಲ್ ಮೊದಲಾದವರು ಉಪಸ್ಥಿತರಿದ್ದರು.
| ಸಾಹಿತ್ಯದಿಂದ ಸಾಮರಸ್ಯ ಆಶಯ | ಎರಡು ದಿನ ವಿಚಾರ ಮಂಡನೆ, ಸಾಂಸ್ಕೃತಿಕ ಕಾರ್ಯಕ್ರಮ (more…)