ಕರೋನಾ ವೈರಸ್ ವಿರುದ್ಧ ನಮ್ಮ ಆರೋಗ್ಯದ ಬಗ್ಗೆಯೂ ಲೆಕ್ಕಿಸದೆ ಮನೆ ಮನೆಗೆ ತೆರಳುತ್ತಿರುವ ಸಂದರ್ಭ ದುಷ್ಕರ್ಮಿಗಳು ಹಲ್ಲೆ ನಡೆಸುತ್ತಿರುವುದು ಆತಂಕಕಾರಿ. ನಮಗೆ ರಕ್ಷಣೆ ನೀಡಿ, ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಭಾರತೀಯ ಆಶಾ ಕಾರ್ಯಕರ್ತೆಯರ ಸಂಘ (ಬಿಎಂಎಸ್ ಸಂಯೋಜಿತ) ರಾಷ್ಟ್ರೀಯ ಉಪಾಧ್ಯಕ್ಷೆ ಹಾಗೂ ರಾಜ್ಯ ಸಹಕಾರ್ಯದರ್ಶಿ ವಿಜಯಲಕ್ಷ್ಮೀ ಹೇಳಿದ್ದಾರೆ.
ರಾಜ್ಯದಲ್ಲಿ 48 ಸಾವಿರಕ್ಕೂ ಅಧಿಕ ಆಶಾ ಕಾರ್ಯಕರ್ತೆಯರು ಕೆಲಸ ಮಾಡುತ್ತಿದ್ದೇವೆ. ಕರೋನಾ ವೈರಸ್ ವಿರುದ್ಧ ನಮ್ಮ ಆರೋಗ್ಯದ ಬಗ್ಗೆ ಲೆಕ್ಕಿಸದೆ ಕೆಲಸ ಮಾಡುತ್ತಿದ್ದು, ಹಗಲು ಬಿಸಿಲಿನ ಝಳವಿದ್ದರೂ ಅದರೊಂದಿಗೆ ಮನೆ ಮನೆಗೆ ಹೆಜ್ಜೆ ಹಾಕುತ್ತಿದ್ದೇವೆ. ಬೇರೆ ಬೇರೆ ಊರು, ವಿದೇಶ, ರಾಜ್ಯಗಳಿಂದ ಬಂದವರಿಗೆ ಸೂಚನೆ ನೀಡುವ ಕಾರ್ಯವನ್ನು ಇಲಾಖೆ ನಿರ್ದೇಶನದಂತೆ ಮಾಡುತ್ತಿದ್ದೇವೆ. ಆದರೆ ಯಾವುದೇ ಭದ್ರತೆ ನಮಗಿಲ್ಲ ಎಂದಿರುವ ಅವರು, ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆಯಾಗುತ್ತಿರುವುದು ಆತಂಕಕಾರಿ. ಕೆಲವೆಡೆ ಆರೋಗ್ಯ ರಕ್ಷಣೆ ಕುರಿತು ನಮ್ಮ ಸೂಚನೆಗಳಿಗೆ ಸಹಕಾರವನ್ನೂ ನೀಡುತ್ತಿಲ್ಲ ಎಂದಿದ್ದಾರೆ. ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದವರು ಎಚ್ಚರಿಸಿದ್ದಾರೆ. ಸರ್ಕಾರ ಗಂಭೀರವಾಗಿ ತೀರ್ಮಾನ ಕೈಗೊಂಡು, ಕಾರ್ಯಕರ್ತೆಯರಿಗೆ ಭದ್ರತೆ ಒದಗಿಸಬೇಕು ಎಂದು ಸಂಘದ ರಾಜ್ಯಾಧ್ಯಕ್ಷೆ ಗಾಯತ್ರಿ, ರಾಜ್ಯ ಕಾರ್ಯದರ್ಶಿ ರೇವತಿ, ಸಹಕಾರ್ಯದರ್ಶಿ ವಿಜಯಲಕ್ಷ್ಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.