ಮಾ.31ರಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲ್ ಪ್ರಕಟಿಸಿದಂತೆ ಏ.1ರಿಂದ ಪ್ರತಿದಿನ ಬೆಳಗ್ಗೆ 7ರಿಂದ 12ರವರೆಗೆ ಅಗತ್ಯ ವಸ್ತುಗಳಿಗೆ ಸಂಬಂಧಿಸಿದ (ಹಾಲು, ತರಕಾರಿ, ದಿನಸಿ ಸಾಮಾಗ್ರಿ) ತೆರೆದಿರುತ್ತದೆ. ನಾಳೆ ಸಾರ್ವಜನಿಕರ ಓಡಾಟ ಮತ್ತು ವ್ಯಾಪಾರ ವಹಿವಾಟು ನಿರ್ಬಂಧ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ವದಂತಿ, ಹಾಗೂ ಮಾನ್ಯ ಪೊಲೀಸ್ ಆಯುಕ್ತರ ಹಿಂದಿನ ಧ್ವನಿಮುದ್ರಿಕೆ ಹಂಚಿಕೆಯಾಗುತ್ತಿರುವುದನ್ನು ಗಮನಿಸಲಾಗಿದೆ. ಮಾನ್ಯ ಜಿಲ್ಲಾಧಿಕಾರಿಗಳು ದಿನಾಂಕ 31-03-2020 ರಂದು ಹೊರಡಿಸಿರುವ ಆದೇಶವು ಊರ್ಜಿತದಲ್ಲಿದ್ದು, ಯಾವುದೇ ಬದಲಾವಣೆ ಇಲ್ಲ , ನಾಳೆ ಬೆಳಗ್ಗೆ 7ರಿಂದ ಮಧ್ಯಾಹ್ನ 12 ಗಂಟೆವರೆಗೆ ಅಗತ್ಯ ವಸ್ತುಗಳಿಗೆ ಅಂಗಡಿ ಮುಂಗಟ್ಟುಗಳು ತೆರೆದಿರುತ್ತವೆ ಎಂದು ಜಿಲ್ಲಾಡಳಿತ ತಿಳಿಸಿದೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧು ರೂಪೇಶ್ ಅವರು ಈ ಕುರಿತು ಪ್ರಕಟಣೆ ಹೊರಡಿಸಿದ್ದು ಅದರಂತೆ ಏಪ್ರಿಲ್ 14ರವರೆಗೆ ಜಿಲ್ಲೆಯಾದ್ಯಂತ ಬೆಳಗ್ಗೆ 7ರಿಂದ ಮಧ್ಯಾಹ್ನ 12ರ ಅವಧಿಯಲ್ಲಿ ದಿನಬಳಕೆಯ ದಿನಸಿ, ತರಕಾರಿ, ಹಣ್ಣುಹಂಪಲುಗಳ ಅಂಗಡಿ ಮುಂಗಟ್ಟು ಮಾತ್ರ ತೆರೆದಿರುತ್ತದೆ. ಉಳಿದ ಅಂಗಡಿ ಮುಂಗಟ್ಟುಗಳನ್ನು ತೆರೆಯುವುದನ್ನು ನಿಷೇಧಿಸಲಾಗಿದೆ.