ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾ.31ರಂದು ಬುಧವಾರ ಮತ್ತೊಂದು ಕೋವಿಡ್ 19 ಪಾಸಿಟಿವ್ ಕೇಸ್ ಪತ್ತೆಯಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಪ್ರಕಟಣೆ ತಿಳಿಸಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 8ಕ್ಕೆ ಏರಿದಂತಾಗಿದೆ.
ಗಂಟಲು ದ್ರವದ 9 ಸ್ಯಾಂಪಲ್ ಗಳಲ್ಲಿ 1 ಪಾಸಿಟಿವ್ ಪತ್ತೆಯಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಪರೀಕ್ಷೆಗೆ 17 ಸ್ಯಾಂಪಲ್ ಗಳನ್ನು ಕಳಿಸಲಾಗಿದೆ. ಅವುಗಳಲ್ಲಿ 9ರ ವರದಿ ಬಂದಿದ್ದು, 8 ನೆಗೆಟಿವ್, ಒಂದು ಪಾಸಿಟಿವ್ ಬಂದಿದೆ. ಒಟ್ಟು 5 ಮಂದಿಯನ್ನು ನಿಗಾದಲ್ಲಿ ಇರಿಸಲಾಗಿದೆ. ಈವರೆಗೆ ಹೋಂ ಕ್ವಾರಂಟೈನ್ ನಲ್ಲಿ 5875 ಮಂದಿ ಇದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸುಳ್ಯ ತಾಲೂಕು ಅಜ್ಜಾವರ ಗ್ರಾಮ ನಿವಾಸಿ ಅವರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿರುವುದು ಬುಧವಾರ ತಿಳಿದುಬಂದಿದೆ. ಇವರು ಮಾ.18ರಂದು ಏರ್ ಇಂಡಿಯಾ ಎಕ್ಸ್ ಪ್ರೆಸ್ ನಲ್ಲಿ ದುಬೈನಿಂದ ಆಗಮಿಸಿದ್ದು, ತಪಾಸಣೆ ವೇಳೆಯಲ್ಲಿ ಯಾವುದೇ ಲಕ್ಷಣಗಳು ಕಂಡುಬಂದಿರಲಿಲ್ಲ. ಆ ಸಂದರ್ಭ ಮನೆಯಲ್ಲಿ ಕ್ವಾರಂಟೈನ್ ಆಗಲು ಸೂಚಿಸಲಾಗಿತ್ತು. ತಮ್ಮ ಸ್ನೇಹಿತರೊಂದಿಗೆ ಕಾರಿನಲ್ಲಿ ಸುಳ್ಯಕ್ಕೆ ಪ್ರಯಾಣಿಸಿ ಮನೆಯಲ್ಲೇ ಕ್ವಾರಂಟೈನ್ ಆಗಿರುತ್ತಾರೆ. ಮಾ.28ರಂದು ಸುಳ್ಯ ಆಸ್ಪತ್ರೆಗೆ ದಾಖಲಾಗಿದ್ದು, 30ರಂದು ಅವರ ಗಂಟಲು ಮಾದರಿ ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. 31ರಂದು ವರದಿ ಸ್ವೀಕೃತವಾಗಿದ್ದು, ಸೋಂಕು ದೃಢಪಟ್ಟಿತು ಎಂದು ಅವರು ತಿಳಿಸಿದ್ದಾರೆ.