ಬಂಟ್ವಾಳನ್ಯೂಸ್ ಸಂಪಾದಕ: ಹರೀಶ ಮಾಂಬಾಡಿ
ಚಿತ್ರಗಳ ಕೃಪೆ: ಸದಾಶಿವ ಕೈಕಂಬ
ಕೋವಿಡ್ 19 ವೈರಾಣುಗಳು ಹರಡದಂತೆ, ದಕ್ಷಿಣ ಕನ್ನಡ ಜಿಲ್ಲಾಡಳಿತ ಸೂಚನೆ ಮೇರೆಗೆ ಶನಿವಾರ ಯಾವುದೇ ತರಕಾರಿ, ಹಣ್ಣು ಹಂಪಲು, ಮೀನು, ಮಾಂಸ, ದಿನಸಿ ಮಳಿಗೆಗಳನ್ನು ತೆರೆಯದೆ ಸಂಪೂರ್ಣ ಬಂದ್ ಅನ್ನು ಬಂಟ್ವಾಳ ತಾಲೂಕಿನಾದ್ಯಂತ ಆಚರಿಸಲಾಯಿತು.
ಬಂಟ್ವಾಳ, ಬಿ.ಸಿ.ರೋಡ್ ಸಹಿತ ಬಂಟ್ವಾಳ ತಾಲೂಕಿನ ಪ್ರಮುಖ ಪೇಟೆ, ಹಳ್ಳಿಗಳಲ್ಲಿ ಸಂಪೂರ್ಣ ಬಂದ್ ಶನಿವಾರ ಕಂಡುಬಂತು. ಹಳ್ಳಿ ಪ್ರದೇಶಗಳಲ್ಲಿ ಹಾಲಿನ ಡೇರಿಗಳಲ್ಲಿ ಕೆಲವೆಡೆ ಹಾಲು ವಿತರಣೆಯಾದರೆ, ಪಟ್ಟಣ ಪ್ರದೇಶಗಳಲ್ಲಿ ಕೆ.ಎಂ.ಎಫ್.ನಿಂದ ಸರಬರಾಜಾಗುವ ನಂದಿನಿ ಹಾಲು ಪೂರೈಕೆ ಆಗಿರಲಿಲ್ಲ. ಹಾಲಿನ ಡೀಲರ್ ಗಳೂ ಬಾರದ ಕಾರಣ ಮಕ್ಕಳಿರುವ ಮನೆಯವರು ಪರದಾಟ ಅನುಭವಿಸಬೇಕಾಯಿತು. ಉಳಿದಂತೆ ಬಿ.ಸಿ.ರೋಡಿನಲ್ಲಿ ಮೆಡಿಕಲ್ ಶಾಪ್ ತೆರೆದಿತ್ತು. ಎಲ್ಲೆಡೆ ಬಿಗು ಬಂದೋಬಸ್ತ್ ಏರ್ಪಟ್ಟಿದ್ದು, ತಾಲೂಕಾಡಳಿತ ನಿಗಾ ವಹಿಸಿದೆ. ಬಂಟ್ವಾಳ ಪೊಲೀಸರು, ತಾಲೂಕಾಡಳಿತ ಜನರ ಚಲನವಲನಗಳ ಕುರಿತು ನಿಗಾ ವಹಿಸಿದ್ದು, ಯಾರೂ ಮನೆಯಿಂದ ಹೊರಬಾರದಂತೆ ಸೂಚನೆ ನೀಡಿದೆ.