ಮಾಜಿ ಸಚಿಬಿ.ರಮಾನಾಥ ರೈ ನೇತೃತ್ವದಲ್ಲಿ ಗುರುವಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರನ್ನು ಭೇಟಿ ಮಾಡಿದ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಮುಖಂಡರ ನಿಯೋಗ, ಕೊರೋನಾ ವೈರಸ್ ಸೋಂಕು ತಡೆಗೆ ಜಾರಿಗೊಳಿಸಿರುವ ಲಾಕ್ ಡೌನ್ ಅವಧಿಯಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗದಂತೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿತು.
ಲಾಕ್ ಡೌನ್ ಜಾರಿಗೆ ಜಿಲ್ಲಾಧಿಕಾರಿ ಕೈಗೊಂಡಿರುವ ಕ್ರಮಗಳನ್ನು ಪ್ರಶಂಸಿಸಿದ ನಿಯೋಗ, ಸೋಂಕು ತಡೆಯಲು ಮತ್ತಷ್ಟು ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿತು.
ಲಾಕ್ ಡೌನ್ ಅವಧಿಯಲ್ಲಿ ಆಹಾರ ಧಾನ್ಯ, ದಿನಸಿ ಸೇರಿದಂತೆ ಅಗತ್ಯ ವಸ್ತುಗಳ ಕೊರತೆ ಉದ್ಭವಿಸದಂತೆ ತಡೆಯಬೇಕು. ಈ ಅವಧಿಯಲ್ಲಿ ವ್ಯಾಪಾರಿಗಳು ದುಬಾರಿ ದರಕ್ಕೆ ಅಗತ್ಯ ವಸ್ತುಗಳನ್ನು ಮಾರಾಟ ಮಾಡದಂತೆ ನಿರ್ಬಂಧ ಹೇರಬೇಕು. ಪಡಿತರ ವ್ಯವಸ್ಥೆಯಡಿ ಎಲ್ಲ ಕುಟುಂಬಗಳಿಗೂ ಆಹಾರ ಧಾನ್ಯ ಮತ್ತು ಇತರೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಬೇಕು ಎಂದು ನಿಯೋಗ ಆಗ್ರಹಿಸಿತು.
ಲಾಕ್ ಡೌನ್ ಅಂಗವಾಗಿ ಜಾರಿಗೊಳಿಸಿರುವ ನಿರ್ಬಂಧಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಕೊರೋನಾ ವೈರಸ್ ಸೋಂಕು ತಗುಲಿದವರು ಮತ್ತು ಶಂಕಿತ ರೋಗಿಗಳ ಚಿಕಿತ್ಸೆ ನೀಡಲು ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಸಿದ್ಧತೆ ಮಾಡಿಕೊಳ್ಳುವಲ್ಲಿ ಆಗಿರುವ ಲೋಪಗಳನ್ನು ತುರ್ತಾಗಿ ಸರಿಪಡಿಸಬೇಕು ಎಂದು ನಿಯೋಗದಲ್ಲಿದ್ದ ಮುಖಂಡರು ಆಗ್ರಹಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಹರೀಶ್ ಕುಮಾರ್, ಶಾಸಕ ಯು.ಟಿ.ಖಾದರ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಾಜಿ ಶಾಸಕರಾದ ಜೆ.ಆರ್.ಲೋಬೊ, ಬಿ.ಎ.ಮೊಹಿಯುದ್ದೀನ್ ಬಾವಾ, ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಿಥುನ್ ರೈ ನಿಯೋಗದಲ್ಲಿದ್ದರು.