ಲಾಕ್ ಡೌನ್ ಸ್ಥಿತಿಯಲ್ಲಿರಬೇಕಾದ ದೇಶದ ಜನಸಾಮಾನ್ಯರ ನೆರವಿಗೆ ಕೇಂದ್ರ ಸರಕಾರ ನೂತನ ಪಡಿತರ ಯೋಜನೆಯೊಂದನ್ನು ಜಾರಿಗೊಳಿಸಿದ್ದು, ಯೋಜನೆಯನ್ವಯ 80 ಕೋಟಿ ಪಡಿತರದಾರರಿಗೆ ಪ್ರತೀ ಕೆ.ಜಿ.ಗೆ 2 ರೂ. ದರದಲ್ಲಿ ಗೋಧಿ ಹಾಗೂ ಪ್ರತೀ ಕೆ.ಜಿ.ಗೆ 3 ರೂ. ದರದಲ್ಲಿ ಅಕ್ಕಿಯನ್ನು ನೀಡಲು ಕೇಂದ್ರ ಸರಕಾರ ತೀರ್ಮಾನಿಸಿದೆ.
ದೆಹಲಿಯಲ್ಲಿ ಸಚಿವ ಪ್ರಕಾಶ್ ಜಾವಡೇಕರ್ ಅವರು ಸುದ್ದಿಗೋಷ್ಠಿ ನಡೆಸಿ ಈ ವಿಚಾರವನ್ನು ತಿಳಿಸಿದ್ದಾರೆ
ಕಟ್ಟಡ ಕಾರ್ಮಿಕರಿಗೆ ಉಚಿತ ಊಟ, ಮೂರು ತಿಂಗಳ ಪಡಿತರವನ್ನು ಮುಂಗಡವಾಗಿಯೇ ನೀಡಲಾಗುವುದು, ಗುತ್ತಿಗೆ ಕಾರ್ಮಿಕರಿಗೆ ಕಡ್ಡಾಯ ವೇತನ, ಕಾಳಸಂತೆಯಲ್ಲಿ ದಿನಸಿ ವಸ್ತುಗಳನ್ನು ಮಾರಾಟ ಮಾಡಿದರೆ ಕಠಿಣ ಕ್ರಮ, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ 1340 ಕೋಟಿ ರೂಪಾಯಿಗಳ ನಿಧಿ ಬಿಡುಗಡೆ ನೀಡುವ ಕುರಿತು ಅವರು ಪ್ರಕಟಿಸಿದ್ದಾರೆ. ವೈದ್ಯರು, ಪತ್ರಕರ್ತರು ಮತ್ತು ಇ ಕಾಮರ್ಸ್ ಸಿಬ್ಬಂದಿಗಳ ಕಾರ್ಯಕ್ಕೆ ತಡೆ ಬೇಡ ಎಂದು ಹೇಳಿರುವ ಸಚಿವ ಜಾವಡೇಕರ್ ಅವರು, ಕೊರೋನಾ ವೈರಸ್ ನಿಯಂತ್ರಣದ ಈ ಹೋರಾಟದಲ್ಲಿ ಇವರ ಸೇವೆ ಶ್ಲಾಘನೀಯ ಎಂದು ಹೇಳಿದರು.