ಬಂಟ್ವಾಳ

ಪುರಸಭೆಯ ತ್ಯಾಜ್ಯಕ್ಕೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

  • ಕಲಾಪದಲ್ಲೂ ಪ್ರಸ್ತಾಪವಾಯ್ತು ತ್ಯಾಜ್ಯದ ವಿಚಾರ

ಬಂಟ್ವಾಳ ಪುರಸಭೆ ಸಜಿಪನಡು ಗ್ರಾಮದ ಕಂಚಿನಡ್ಕಪದವಿನ ಡಂಪಿಂಗ್ ಯಾರ್ಡ್ ನಲ್ಲಿ ಬುಧವಾರ ಹಾಕಿದ್ದ ತ್ಯಾಜ್ಯವನ್ನು ರಾತ್ರಿ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ ಎಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಜಾಹೀರಾತು

ಬಂಟ್ವಾಳ ಪುರಸಭೆ ಸಹಾಯಕ ಕಮೀಷನರ್ ಆದೇಶದನ್ವಯ ಪೊಲೀಸ್ ಸಹಾಯದೊಂದಿಗೆ ಸಜಿಪನಡು ಕಂಚಿನಡ್ಕಪದವಿನ ತನ್ನ ಸ್ವಾದೀನದಲ್ಲಿದ್ದ ಜಾಗದಲ್ಲಿ ತ್ಯಾಜ್ಯ ವಿಲೇವಾರಿಯನ್ನು ಬುಧವಾರ ಮಾಡಿದ್ದು, ಈ ಸಂದರ್ಭ ಸ್ಥಳೀಯರ ವಿರೋಧ ವ್ಯಕ್ತವಾಗಿತ್ತು. ರಾತ್ರಿ ಯಾರೋ ಕಿಡಿಗೇಡಿಗಳು ತ್ಯಾಜ್ಯದ ಮೂಟೆಗಳಿಗೆ ಬೆಂಕಿ ಹಚ್ಚಿದ್ದಾಗಿ ಪುರಸಭೆ ಬಂಟ್ವಾಳ ಗ್ರಾಮಾಂತರ ಠಾಣೆಗೆ ದೂರು ನೀಡಿದೆ.

ವಿಧಾನಸೌಧದಲ್ಲಿ ತ್ಯಾಜ್ಯ ಸದ್ದು: ಈ ಮಧ್ಯೆ ತ್ಯಾಜ್ಯ ವಿಲೇವಾರಿಯನ್ನು ಬೇರೆಡೆಗೆ ವರ್ಗಾಯಿಸುವಂತೆ ವಿಧಾನಸಭೆ ಅಧಿವೇಶನದಲ್ಲಿ ಮಂಗಳೂರು ಶಾಸಕ ಯು.ಟಿ.ಖಾದರ್ ಹೇಳಿದರೆ, ಅದೇ ಜಾಗದಲ್ಲಿ ಹಾಕದೆ ಬೇರೆಲ್ಲಿ ಹಾಕುವುದು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಪ್ರಶ್ನಿಸಿದ ಘಟನೆಯೂ ನಡೆಯಿತು.

ನನ್ನ ಕ್ಷೇತ್ರದ ಸಜಿಪನಡು ಗ್ರಾಮಕ್ಕೆ ಬಂಟ್ವಾಳ ಪುರಸಭೆಯಿಂದ ಕಸ ವಿಲೇವಾರಿ ವಾಹನ ತರುವಾಗ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಪೊಲೀಸ್ ಭದ್ರತೆಯಲ್ಲಿ ವಿಲೇವಾರಿ ಮಾಡಿದ್ದಾರೆ ಅಲ್ಲಿಗೆ ಹಾಕುವ ಕಸವನ್ನು ತಕ್ಷಣ ನಿಲ್ಲಿಸಲು ಆದೇಶ ಮಾಡಬೇಕು. ಗ್ರಾಪಂ ಸದಸ್ಯರನ್ನು ವಿಶ್ವಾಸಕ್ಕೆತೆಗೆದುಕೊಂಡು ಕಾರ್ಯ ಮಾಡಿರಿ ಎಂದು ಶಾಸಕ ಯು.ಟಿ.ಖಾದರ್ ಗುರುವಾರ ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರು.

ಈ ಸಂದರ್ಭ ಮಾತನಾಡಿದ ಬಂಟ್ವಾಳ ಶಾಸಕ ರಾಜೇಶ್ ಯು. ನಾಯ್ಕ್, ಕಂಚಿನಡ್ಕಪದವಿನ ಬಂಟ್ವಾಳ ಪುರಸಭೆಯ ಜಾಗದಲ್ಲಿ ತ್ಯಾಜ್ಯ ವಿಲೇವಾರಿಗೆ ಸದನ ಸಮಿತಿ, ಪರಿಸರ ಇಲಾಖೆ ಅನುಮತಿ ನೀಡಿದೆ, ಈ ವಿಷಯದಲ್ಲಿ  ನಾನು ಮತ್ತು ಖಾದರ್ ಅವರು ಕುಳಿತು ಮಾತನಾಡಬಹುದು ಎಂದರು. ಈ ಸಂದರ್ಭ ತಾತ್ಕಾಲಿಕವಾಗಿ ನಿಲ್ಲಿಸಿ ಎಂದು ಖಾದರ್ ಹೇಳಿದರೆ, ಕಸವನ್ನು ಎಲ್ಲಿಗೆ ಹಾಕುವುದು ಎಂದು ನಾಯ್ಕ್ ಪ್ರಶ್ನಿಸಿದರು. ಇದೇ ವೇಳೆ ಉತ್ತರಿಸಿದ ಗೃಹಸಚಿವ ಬಸವರಾಜ ಬೊಮ್ಮಾಯಿ, ಕಸ ವಿಲೇವಾರಿ ಪುರಸಭೆಗೆ ಸಂಬಂಧಿಸಿದ್ದು, ಪೊಲೀಸ್ ರಕ್ಷಣೆ ಕೇಳಿದ ಕಾರಣ ಅದನ್ನು ಒದಗಿಸಿದ್ದೇವೆ ಎಂದರು. ರಾಜೇಶ್ ನಾಯ್ಕ್ ಮತ್ತು ಯು.ಟಿ.ಖಾದರ್ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

 

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts