ಬಂಟ್ವಾಳ

ತಾಪಂ ಸಭೆಯಲ್ಲೂ ಕೊರೊನಾ, ಹಕ್ಕಿಜ್ವರದ್ದೇ ಚರ್ಚೆ, ಆತಂಕ ಬೇಡ, ಜಾಗೃತಿ ಇರಲಿ ಎಂದ ಅಧಿಕಾರಿಗಳು

ಬಂಟ್ವಾಳ: ವಿಶ್ವಾದ್ಯಂತ ಹಬ್ಬಿರುವ ಕೊರೊನಾ ಹಾಗೂ ಇದರೊಂದಿಗೆ ಹಕ್ಕಿಜ್ವರ ಹಿನ್ನೆಲೆಯಲ್ಲಿ ಕೋಳಿಮಾಂಸ ಸೇವಿಸಬಹುದೇ ಎಂಬ ಆತಂಕ, ಸಾರ್ವಜನಿಕರಲ್ಲಿ ಮೂಡುತ್ತಿರುವ ಗೊಂದಲದ ಕುರಿತು ಬುಧವಾರ ಬಂಟ್ವಾಳ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲೂ ಸದಸ್ಯರು ಆತಂಕ ವ್ಯಕ್ತಪಡಿಸಿದರು. ಈ ಸಂದರ್ಭ ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು ಮತ್ತು ಪಶುವೈದ್ಯಕೀಯ ಇಲಾಖೆಯ ತಾಲೂಕು ಸಹಾಯಕ ನಿರ್ದೇಶಕ ಡಾ. ಹೆನ್ರಿ, ಕೊರೊನಾ ಮತ್ತು ಹಕ್ಕಿಜ್ವರದ ಕುರಿತು ಆತಂಕ ಬೇಡ, ಕೋಳಿಮಾಂಸ ಸೇವನೆಗೂ ಆತಂಕವಿಲ್ಲ ಎಂದು ಹೇಳಿ ಕೆಲವು ಮುನ್ನೆಚ್ಚರಿಕಾ ಕ್ರಮಗಳ ಕುರಿತು ತಿಳಿಸಿದರು.

www.bantwalnews.com Editor: Harish Mambady

ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅಧ್ಯಕ್ಷತೆಯಲ್ಲಿ ನಾನಾ ವಿಷಯಗಳ ಕುರಿತು ಸದಸ್ಯರಾದ ಸಂಜೀವ ಪೂಜಾರಿ, ರಮೇಶ್ ಕುಡ್ಮೇರು, ಪದ್ಮಶ್ರೀ, ಧನಲಕ್ಷ್ಮೀ ಬಂಗೇರ, ಮಂಜುಳಾ ಸದಾನಂದ ಮತ್ತಿತರರು ಮಾತನಾಡಿದರು. ತಾಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾಶೆಟ್ಟಿ, ತಹಸೀಲ್ದಾರ್ ರಶ್ಮಿ ಎಸ್.ಆರ್ ಸಹಿತ ಅಧಿಕಾರಿಗಳು ನಾನಾ ಮಾಹಿತಿಗಳನ್ನು ನೀಡಿದರು. ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.

ಬಂಟ್ವಾಳ ತಾಲೂಕಿನ ಗಡಿ ಪ್ರದೇಶವಾದ ಕರೋಪಾಡಿ, ಕನ್ಯಾನ, ಪೆರುವಾಯಿ, ಬಾಕ್ರಬೈಲ್, ಕುರ್ನಾಡು ಕಡೆಗಳಲ್ಲಿ ಕೊರೊನಾ ಕುರಿತು ಜಾಗೃತಿ ಮೂಡಿಸಲಾಗುತ್ತಿದ್ದು, ನಿಗಾ ಇರಿಸಲಾಗಿದೆ. ಈ ಕುರಿತು ಈಗಾಗಲೇ ತಹಸೀಲ್ದಾರ್ ಮತ್ತು ಆರೋಗ್ಯಾಧಿಕಾರಿ ಈ ಪ್ರದೇಶಗಳಿಗೆ ತೆರಳಿ ಕೈಗೊಳ್ಳಬೇಕಾದ ಕ್ರಮಗಳನ್ನು ಇಲಾಖಾ ಸಿಬ್ಬಂದಿಗೆ ಸೂಚಿಸಿದ್ದಾರೆ ಇಒ ರಾಜಣ್ಣ ತಿಳಿಸಿದರು.

ವಿದೇಶದಿಂದ ಮರಳಿದವರೆಲ್ಲರೂ ಶಂಕಿತರಲ್ಲ. ಅವರ ಕುರಿತು ಆರೋಗ್ಯ ಇಲಾಖೆ ನಿಗಾ ಇರಿಸುತ್ತದೆಯೇ ವಿನಃ ಯಾರೂ ಕೊರೊನಾ ಶಂಕಿತರು ಎಂದೆನಿಸುವುದಿಲ್ಲ. ಬಂಟ್ವಾಳ, ವಾಮದಪದವು ಮತ್ತು ವಿಟ್ಲ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಐಸೋಲೇಶನ್ ವಾರ್ಡ್ ಇದೆ. ಇದುವರೆಗೆ ಬಂಟ್ವಾಳದಿಂದ ಕಳುಹಿಸಿದವರ ಸ್ಯಾಂಪಲ್ ಗಳಲ್ಲೂ ಕೊರೊನಾ ಕಂಡುಬಂದಿಲ್ಲ. ಊಹಾಪೋಹಗಳನ್ನು ಹರಡಿದರೆ ಕಠಿಣವಾದ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ಇದೇ ವೇಳೆ ಕೋಳಿಗಳನ್ನು ತಿನ್ನಬಹುದೇ ಬೇಡವೇ ಎಂಬ ಕುರಿತು ಚರ್ಚೆ ನಡೆಯಿತು. ಈ ಸಂದರ್ಭ ಉತ್ತರಿಸಿದ ಪಶುವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ. ಹೆನ್ರಿ, ಕೇರಳದಿಂದ ಕೋಳಿಗಳು ಸರಬರಾಜಾಗುತ್ತಿಲ್ಲ. ಕೋಳಿ ಮಾಂಸ ತಿನ್ನುವುದಕ್ಕೆ ಯಾವುದೇ ಅಡ್ಡಿ ಇಲ್ಲ. ಹಕ್ಕಿಜ್ವರದಿಂದ ಕೋಳಿಗಳು ಬಾಧಿತವಾಗಿಲ್ಲ ಎಂದರು. ಕುರ್ನಾಡು ಗ್ರಾಮದ ಕಟ್ಟೆಮಾರು ಎಂಬಲ್ಲಿ ಗುಡ್ಡೆಯೊಂದು ಜರಿದು ವರ್ಷದ ಹತ್ತಿರವಾಯಿತು. ಸಮಸ್ಯೆ ಪರಿಹಾರವಾಗಿಲ್ಲ ಎಂದು ಸದಸ್ಯ ನವೀನ್ ಪೂಜಾರಿ ದೂರಿದರು. ಉತ್ತರಿಸಿದ ತಹಸೀಲ್ದಾರ್ ರಶ್ಮಿ ಎಸ್.ಆರ್, ಈ ಕುರಿತು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಕರೋಪಾಡಿ ಗ್ರಾಮದ ಮಿತ್ತನಡ್ಕ ಶಾಲೆ ವಿದ್ಯಾರ್ಥಿಗಳಿಗೆ ವಾಂತಿ ಬೇಧಿ ಸಮಸ್ಯೆಗೆ ಕಲುಷಿತ ನೀರು ಕಾರಣ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಸದಸ್ಯ ಉಸ್ಮಾನ್ ಕರೋಪಾಡಿ ಪ್ರಶ್ನೆಗೆ ಡಾ. ದೀಪಾ ಪ್ರಭು ಉತ್ತರಿಸಿದರು. ಮೈಸೂರಿನ ಪ್ರಯೋಗಾಲಯಕ್ಕೆ ಕಳುಹಿಸಿದ ಸ್ಯಾಂಪಲ್ ವರದಿ ಇನ್ನು ಹದಿನೈದು ದಿನಗಳೊಳಗೆ ಬರುವ ನಿರೀಕ್ಷೆ ಇದೆ ಎಂದವರು ತಿಳಿಸಿದರು. ಕರೋಪಾಡಿ ಗ್ರಾಮದ ಪ.ಪಂಗಡದ ಮನೆಗಳಿಗೆ ವಿದ್ಯುತ್ ಸಂಪರ್ಕ ಇನ್ನೂ ಕಲ್ಪಿಸಲಾಗಿಲ್ಲ ಎಂದು ಸದಸ್ಯ ಉಸ್ಮಾನ್ ದೂರಿದರು. ತಾಲೂಕಿನಲ್ಲೇ ನದಿ ಇದೆ, ಆದರೆ ಹೊಯ್ಗೆ ತೆಗೆಯಲು ನಾನಾ ತಕರಾರು. ಇದಕ್ಕೆ ಪೂರಕವಾಗಿ ಗಣಿ ಅಧಿಕಾರಿಗಳೂ ಸಹಕರಿಸುತ್ತಿಲ್ಲ ಎಂದು ತಾಪಂ ಸದಸ್ಯ ಪ್ರಭಾಕರ ಪ್ರಭು ದೂರಿದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ