ಬಂಟ್ವಾಳ

ತ್ಯಾಜ್ಯ ಸಾಗಾಟಕ್ಕೆ ಅಡ್ಡಿಪಡಿಸಿದರೆ ಕಟ್ಟುನಿಟ್ಟಿನ ಕ್ರಮ – ಸಹಾಯಕ ಕಮೀಷನರ್

ಪುರಸಭಾ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಒಣಕಸವನ್ನು ಭಾನುವಾರದಿಂದಲೇ ಸಜೀಪನಡು ಗ್ರಾಮದ ಕಂಚಿನಡ್ಕ ಪದವಿನಲ್ಲಿರುವ ಪುರಸಭೆಯ ತ್ಯಾಜ್ಯ ಸಂಸ್ಕರಣ ಘಟಕದಲ್ಲಿ ವಿಲೇವಾರಿ ಮಾಡಬೇಕು, ಜತೆಗೆ ಬಾಕಿ ಉಳಿದಿರುವ ಕೆಲಸವನ್ನೂ ಶೀಘ್ರ ಪ್ರಾರಂಭಿಸಬೇಕು. ಈ ಸಂದರ್ಭ ಯಾರಾದರೂ ಅಡ್ಡಿಪಡಿಸಿದ್ದಲ್ಲಿ ಅಂಥವರ ವಿರುದ್ದ ನಿರ್ಧಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳುವಂತೆ ಮಂಗಳೂರು ಸಹಾಯಕ ಆಯುಕ್ತ, ಪುರಸಭೆಯ ಆಡಳಿತಾಕಾರಿ ಮದನ್ ಮೋಹನ್ ಸಿ. ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕಂಚಿನಡ್ಕಪದವು ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಮಾ. ೧೧ರಂದು ತ್ಯಾಜ್ಯವನ್ನು ಸಾಗಿಸಿದ ವೇಳೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಶನಿವಾರ ಬಂಟ್ವಾಳ ಪುರಸಭಾ ಸಭಾಂಗಣದಲ್ಲಿ ಅಧಿಕಾರಿಗಳು ಹಾಗೂ ಸ್ಥಳೀಯರ ಸಭೆಯಲ್ಲಿ ಮಾತನಾಡಿದರು.

ಪುರಸಭಾ ಸದಸ್ಯ ಗೋವಿಂದ ಪ್ರಭು ಮಾತನಾಡಿ, ಜಿಲ್ಲಾಡಳಿತ ಈ ಹಿಂದೆಯೂ ಕಸವನ್ನು ಕಂಚಿನಡ್ಕಪದವುಗೆ ಹೋಗುತ್ತದೆ ಎಂದು ಹೇಳಿತ್ತು. ಆದರೆ ಈವರೆಗೆ ಹೋಗಿಲ್ಲ  ಹಲವು ವರ್ಷಗಳಿಂದ ಕಂಚಿನಡ್ಕ ಪದವಿನ ಚರ್ಚೆ ನಡೆಯುತ್ತಲೇ ಇದೆ. ಈ ವಿಚಾರ ಸದನ ಸಮಿತಿಯಲ್ಲೂ ಚರ್ಚೆ ಆಗಿದೆ. ಕೌಂಪೌಂಡ್ ನಿರ್ಮಾಣ ಆಗುವವರೆಗೆ ಅಲ್ಲಿನವರು ಯಾವುದೇ ವಿರೋಧ ಮಾಡಿಲ್ಲ. ಆ ಬಳಿಕ ವಿರೋಧ ಮಾಡುವ ಉದ್ದೇಶ ಏನು ಎಂದು ಪ್ರಶ್ನಿಸಿದರು.

ಇದೇ ವೇಳೆ ಸ್ಥಳೀಯ ಮುಖಂಡರಾದ ಅಬುಬಕ್ಕರ್ ಸಜೀಪ ಮಾತನಾಡಿ, ಇನ್ನೂ ಸ್ಥಳೀಯ ಮನೆಗಳು, ಶಾಲೆ, ಮದರಸಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸದೆ ಏಕಾಏಕಿ ತೀರ್ಮಾನವನ್ನು ಕೈಗೊಳ್ಳುವುದು ಸರಿಯಲ್ಲ ಎಂದು ಆಕ್ಷೇಪಿಸಿದರು. ಕಂಚಿನಡ್ಕಪದವಿನ ಘಟಕದಲ್ಲಿ ವೈಜ್ಞಾನಿಕವಾಗಿ ತ್ಯಾಜ್ಯ ಘಟಕ ಆರಂಭಿಸುವುದಕ್ಕೆ ನಮ್ಮ ಅಭ್ಯಂತರವಿಲ್ಲ, ಆದರೆ ಅಲ್ಲಿನ ನಿವಾಸಿಗಳಿಗೆ ಹಾಗೂ ಅಂಗನವಾಡಿ ಕೇಂದ್ರಕ್ಕೆ ಪ್ರತ್ಯೇಕ ಜಮೀನು ಒದಗಿಸಬೇಕು, ಪರಿಸರ್‍ಕಕೆ ತೊಂದರೆಯಾಗದಂತೆ  ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳನ್ನು ಪಾಲಿಸಬೇಕು, ಕೊಳಚೆ ನೀರು ಭೂಮಿಗೆ ಇಂಗದಂತೆ ವ್ಯವಸ್ಥೆ ಕಲ್ಪಿಸಬೇಕು, ಮಳೆ ನೀರು ಬೀಳದಂತೆ ಶೆಲ್ಟರ್ ನಿರ್ಮಿಸಬೇಕು. ಪಂಚಾಯಿತಿಗೆ ಮಾಹಿತಿ ನೀಡದೆ ಏಕಾಏಕಿ ಲಾರಿಯಲ್ಲಿ ಕಸವನ್ನು ತಂದು ಹಾಕುವುದು ಸರಿಯಲ್ಲ ಎಂದರು. ಇದಕ್ಕೆ ತಾಪಂ ಮಾಜಿ ಅಧ್ಯಕ್ಷ ಯಶವಂತ ದೇರಾಜೆ, ಜಿಪಂ ಸದಸ್ಯ ರವೀಂದ್ರ ಕಂಬಳಿ ದನಿಗೂಡಿಸಿದರು.

ಕೆಲಸ ಆರಂಭವಾದ ಬಳಿಕ ಹಂತಹಂತವಾಗಿ ಎಲ್ಲಾ ವ್ಯವಸ್ಥೆಗಳು ನಡೆಯಲಿದೆ. ಒಣ ಕಸ ಹಾಕುವುದರಿಂದ ಯಾವುದೇ ಸಮಸ್ಯೆ ಇಲ್ಲ, ಹಸಿ ಕಸವನ್ನು ಪುರಸಭೆಯ ಹಿಂಭಾಗದಲ್ಲಿಯೇ ಗೊಬ್ಬರ ತಯಾರಿಸಲಾಗುತ್ತದೆ ಎಂದು ಸಹಾಯಕ ಕಮೀಷನರ್ ತಿಳಿಸಿದರು. ಸ್ಥಳೀಯ ನಿವಾಸಿಗಳಿಗೆ ಹಾಗೂ ಅಂಗನವಾಡಿ ಸ್ಥಳಾಂತರಿಸಲು ಇರಾ ಗ್ರಾ.ಪಂ. ವ್ಯಾಪ್ತಿಯಲ್ಲಿ ಜಮೀನು ಕಾದಿರಿಸಲಾಗಿದೆ ಎಂದು ತಹಸೀಲ್ದಾರ್ ರಶ್ಮಿ ಎಸ್.ಆರ್. ಮಾಹಿತಿ ನೀಡಿದರು.

ತಹಸೀಲ್ದಾರ್ ರಶ್ಮಿ ಎಸ್.ಎಆರ್. ಪುರಸಭಾ ಮುಖ್ಯಾಕಾರಿ ಲೀನಾ ಬ್ರಿಟ್ಟೋ, ಪ್ರೊಬೇಷನರಿ ಎಎಸ್ಪಿ ರಂಜಿತ್, ಡಿವೈಎಸ್ಪಿ ವೆಲೆಂಟೈನ್ ಡಿಸೋಜಾ, ಪುರಸಭೆ ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೋ, ಗ್ರಾಮಾಂತರ ಪೊಲೀಸ್ ಎಸೈ ಪ್ರಸನ್ನ, ಜಿ.ಪಂ.ಸದಸ್ಯ ರವೀಂದ್ರ ಕಂಬಳಿ, ಪುರಸಭಾ ಸದಸ್ಯ ಗೋವಿಂದ ಪ್ರಭು, ತಾ.ಪಂ.ಮಾಜಿ ಅಧ್ಯಕ್ಷ ಯಶವಂತ ದೇರಾಜೆ, ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ,  ಉಪಸ್ಥಿತರಿದ್ದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ