ಶಾಸಕ ರಾಜೇಶ್ ನಾಯ್ಕ್ ನೇತೃತ್ವದಲ್ಲಿ ಸಭೆ
ಕೊರೊನಾ ವೈರಾಣು ಸೋಂಕು ಕುರಿತು ಮನೆ, ಮನೆಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯ ಬಂಟ್ವಾಳ ತಾಲೂಕಿನಲ್ಲಿ ನಡೆಯಲಿ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಸೂಚಿಸಿದ್ದಾರೆ.
ಶನಿವಾರ ಬಂಟ್ವಾಳ ತಾಲೂಕು ಸಮುದಾಯ ಆಸ್ಪತ್ರೆಯಲ್ಲಿ ತಾಲೂಕಿನ ನಾನಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು, ವೈದ್ಯರ ಸಲಹೆ ಸೂಚನೆಗಳನ್ನು ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು ಮತ್ತು ಆಸ್ಪತ್ರೆ ವೈದ್ಯಾಧಿಕಾರಿ ಡಾ. ಸದಾಶಿವ ಉಪಸ್ಥಿತಿಯಲ್ಲಿ ಪಡೆದುಕೊಂಡ ಅವರು, ಇಲಾಖೆಗಳಿಗೆ ಸರಕಾರದಿಂದ ಅಗತ್ಯವಿರುವ ಎಲ್ಲ ಸೌಕರ್ಯಗಳನ್ನು ಒದಗಿಸಲು ತುರ್ತು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಈಗಾಗಲೇ ಈ ಕುರಿತು ಗ್ರಾಮಮಟ್ಟದಲ್ಲಿ ಸಮಿತಿ ರಚನೆಯಾಗಿದ್ದು, ಬಂಟ್ವಾಳದ ಆಸ್ಪತ್ರೆಗಳಲ್ಲೂ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಭಯ ಬೇಡ, ಎಚ್ಚರ ಇರಲಿ ಎಂಬ ಸೂಚನೆಗಳೊಂದಿಗೆ ಜಾಗೃತಿ ಕರಪತ್ರಗಳನ್ನು ವಿತರಿಸುವ ಕಾರ್ಯ ನಡೆಯುತ್ತಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು ತಿಳಿಸಿದರು. ಜನರಲ್ಲಿ ಭಯ ಮೂಡಿಸದಂತೆ ಜಾಗೃತಿ ನಡೆಸುವುದು ಅಗತ್ಯ. ಜಾತ್ರೆ ಮತ್ತಿತರ ಸಾರ್ವಜನಿಕರು ಸೇರುವ ಜಾಗಗಳಲ್ಲಿ ಧ್ವನಿವರ್ಧಕಗಳ ಕುರಿತು ಮಾಹಿತಿ ನೀಡುವುದು ಹಾಗೂ ಈ ಕುರಿತು ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸುವಂತೆ ಇಲಾಖೆಗಳಿಗೆ ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ಸೂಚಿಸಿದ್ದಾರೆ.
ಈ ಸಂದರ್ಭ ಇದುವರೆಗೆ ಕೈಗೊಂಡ ಕ್ರಮಗಳ ಕುರಿತು ಮಾಹಿತಿ ನೀಡಿದ ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು, ಕೊರೊನಾ ಶಂಕಿತ ವ್ಯಕ್ತಿಗಳಿದ್ದರೆ, ಸಮೀಪದ ಆಶಾ ಕಾರ್ಯಕರ್ತೆಯರಿಗೆ ಮಾಹಿತಿ ನೀಡಬಹುದು, ರೋಗಿಯೇ ಸ್ವಯಂಪ್ರೇರಿತವಾಗಿ ಬಂದು ಪರೀಕ್ಷೆ ಮಾಡಿಸಿಕೊಳ್ಳಬಹುದು. ಮಾಹಿತಿಯ ಗೌಪ್ಯತೆಯನ್ನು ಇಲಾಖೆ ಕಾಪಾಡಿಕೊಳ್ಳಬೇಕು. ಬಂಟ್ವಾಳ ತಾಲೂಕು ಸಮುದಾಯ ಆರೋಗ್ಯ ಕೇಂದ್ರ ಆಸ್ಪತ್ರೆಯಲ್ಲಿ ಜನವರಿಯಿಂದಲೇ ಕೊರೊನಾ ಹಿನ್ನೆಲೆಯಲ್ಲಿ 5 ಬೆಡ್ ಗಳನ್ನು ಮೀಸಲಿರಿಸಲಾಗಿದೆ. ಈಗಾಗಲೇ ಶಂಕಿತರೋರ್ವರು ಎರಡು ದಿನ ವಾರ್ಡ್ ನಲ್ಲಿದ್ದರು. ಆರೋಗ್ಯ ಇಲಾಖೆ ಕೊರೊನಾ ಶಂಕಿತರ ಆರೋಗ್ಯ ಚಟುವಟಿಕೆಗಳ ಕುರಿತು ನಿಗಾ ಇರಿಸುತ್ತದೆ ವಿಟ್ಲ ಮತ್ತು ವಾಮದಪದವು ಸಮುದಾಯ ಕೇಂದ್ರಗಳಲ್ಲಿ 5 ಬೆಡ್ ಗಳನ್ನು ಮಾಡಲಾಗಿದೆ ಎಂದರು.
ರೋಗಿಗಳೊಂದಿಗೆ ವ್ಯವಹರಿಸುವ ಆಸ್ಪತ್ರೆ ಸಿಬ್ಬಂದಿಗೆ ಎನ್.95 ಮಾಸ್ಕ್ ಗಳು ಅಗತ್ಯವಿದೆ. ಸಾರ್ವಜನಿಕರಿಗೆ ಇದು ಅವಶ್ಯಕತೆ ಇಲ್ಲ. ದೇಹ ಸ್ವಚ್ಛತೆಯನ್ನು ಕಾಪಾಡಿಕೊಂಡರಷ್ಟೇ ಸಾಕು. ಮೆಡಿಕಲ್ ಶಾಪ್, ಹೆಲ್ತ್ ಕೇರ್ ಗಳಲ್ಲಿ ಇವು ಲಭ್ಯವಿರುವುದಿಲ್ಲ. ಎನ್.95 ಮಾಸ್ಕ್ ಗಳನ್ನು ಎಲ್ಲರೂ ಧರಿಸಬೇಕು ಎಂಬ ಕುರಿತು ವದಂತಿಗಳು ಹರಡಿದ ಮೇಲೆ ಅವು ಎಲ್ಲೂ ದೊರಕುತ್ತಿಲ್ಲ ಎಂದು ಕೆಲವು ವೈದ್ಯರು ಮಾಹಿತಿ ನೀಡಿದರು. ಈ ಕುರಿತು ಗಮನಹರಿಸುವುದಾಗಿ ಶಾಸಕರು ತಿಳಿಸಿದರು. ಧ್ವನಿವರ್ಧಕಗಳಲ್ಲಿ ಮಾಹಿತಿ: ಜಾತ್ರೆ ಸಹಿತ ಜನ ಸೇರುವ ಪ್ರದೇಶಗಳಲ್ಲಿ ಧ್ವನಿವರ್ಧಕಗಳ ಮೂಲಕ ಕೊರೊನಾ ಹಾಗೂ ಸ್ವಚ್ಛತಾ ಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಬುಡಾ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ ಸಲಹೆ ನೀಡಿದರು.