ತುಂಬೆ ವೆಂಟೆಡ್ ಡ್ಯಾಂ ಪರಿಹಾರ, ಸರ್ವೆ ವಿಚಾರ ಕುರಿತು ರಾಜೇಶ್ ನಾಯ್ಕ್ ಪ್ರಸ್ತಾಪ
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಕುಡಿಯುವ ನೀರಿಗಾಗಿ ತುಂಬೆಯಲ್ಲಿ ನಿರ್ಮಿಸಲಾದ ಅಣೆಕಟ್ಟಿನ ಪರಿಹಾರ ಮತ್ತು ಸರ್ವೆ ಕಾರ್ಯವನ್ನು ರೈತರ ಗಮನಕ್ಕೆ ತಾರದೆ ನಡೆಸಲಾಗುತ್ತಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ಯು.ನಾಯ್ಕ್ ವಿಧಾನಸಭಾಧಿವೇಶನದಲ್ಲಿ ಸೋಮವಾರ ಪ್ರಸ್ತಾಪಿಸಿದ್ದು, ಈ ಕುರಿತು ರೈತರನ್ನು ಗಮನದಲ್ಲಿಟ್ಟುಕೊಂಡು ಸರ್ವೆ ನಡೆಸಲಾಗುವುದು ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.
ಅಣೆಕಟ್ಟಿನಿಂದ ಸುಮಾರು 300 ಎಕ್ರೆಯಷ್ಟು ಭೂಮಿ ಮುಳುಗಡೆಯಾಗಿದೆ. ಸರ್ವೇಯನ್ನು ರೈತರ ಗಮನಕ್ಕೆ ತಾರದೆ ನಡೆಸಲಾಗುತ್ತಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಗಮನ ಸೆಳೆದರು. ಕೇಂದ್ರ ಜಲ ಆಯೋಗದ ಪ್ರಕಾರ ಸರ್ವೆ ಮಾಡುವ ಕುರಿತು ಶಾಸಕರು ಪ್ರಸ್ತಾಪಿಸಿದಾಗ, ಈ ಕುರಿತು ವಿಚಾರ ಮಾಡುವುದು ಹಾಗೂ ರೈತರನ್ನು ಗಮನದಲ್ಲಿ ಇಟ್ಟುಕೊಂಡು ಈ ಸರ್ವೆಯನ್ನು ಮಾಡಲಾಗುವುದು ಎಂದು ಅಶೋಕ್ ಸ್ಪಷ್ಟಪಡಿಸಿದರು.
ತುಂಬೆ ವೆಂಟೆಡ್ ಡ್ಯಾಂನ ಹಿನ್ನೀರಿನಿಂದ ಒಟ್ಟು 66.43 ಎಕರೆ ಜಮೀನು ಮುಳುಗಡೆಯಾಗುತ್ತದೆ. ಮುಳುಗಡೆ ಆಗುವ ಜಮೀನನ್ನು ಸರಕಾರದ ಆದೇಶದ ಪ್ರಕಾರ ಜಿಲ್ಲಾಧಿಕಾರಿ ಮೂಲಕ ನೇರ ಖರೀದಿ ಮುಖಾಂತರ ಖರೀದಿ ಮಾಡಲಾಗಿದೆ. ಈ ಜಮೀನಿನ 37 ಮಂದಿ ಭೂಮಾಲೀಕರಿಗೆ 9.87 ಕೋಟಿ ರೂ ಪರಿಹಾರ ಪಾವತಿಸಲಾಗಿದೆ ಎಂದು ಸಚಿವ ಅಶೋಕ್ ಉತ್ತರಿಸಿದರು. ಪರಿಹಾರಕ್ಕೆ ಒಟ್ಟು 17 ಕೋಟಿ ರೂ ಮೊತ್ತವನ್ನು ಬಿಡುಗಡೆ ಮಾಡಲಾಗಿದೆ. ಮುಳುಗಡೆಯಾಗುವ ಒಟ್ಟು ಜಮೀನಿನ ಪೈಕಿ 54 ಮಂದಿ ಸಂತ್ರಸ್ತರಿಗೆ ಪರಿಹಾರ ಪಾವತಿಸಲು ಬಾಕಿ ಇರುತ್ತದೆ ಎಂದವರು ವಿವರಿಸಿದರು. ಮುಳುಗಡೆ ಪ್ರದೇಶಗಳಿಗೆ ಸಂಬಂಧಿಸಿದಂತೆ ನೀರಿನ ಒಸರು ಕುರಿತು ಸರ್ವೆ ಪೂರ್ಣಗೊಂಡಿದೆ. ಭೂದಾಖಲೆ ಸಹಾಯಕ ನಿರ್ದೇಶಕರು ಮತ್ತು ತಹಸೀಲ್ದಾರ್ ಅವರಿಂದ ವರದಿ ಸಿದ್ಧಪಡಿಸಲು ಕ್ರಮ ವಹಿಸಲಾಗಿದೆ ಎಂದರು. ಡ್ಯಾಂ ಸಂತ್ರಸ್ತ ರೈತರ ಹದಿನಾರು ವರ್ಷಗಳ ಹೋರಾಟಕ್ಕೆ ಬೆಂಬಲಿಸಿ ವಿಧಾನಸಭೆಯಲ್ಲಿ ಸೋಮವಾರ ಕಂದಾಯ ಸಚಿವ ಆರ್. ಅಶೋಕ್ ಮೂಲಕ ಸರಕಾರದ ಗಮನ ಸೆಳೆದಿರವ ಬಂಟ್ವಾಳ ಶಾಸಕ ಯು. ರಾಜೇಶ್ ನಾಯ್ಕ್ ಅವರನ್ನು ತುಂಬೆ ಡ್ಯಾಂ ಸಂತ್ರಸ್ತ ರೈತರು ಹೋರಾಟ ಸಮಿತಿ ಅಭಿನಂದಿಸಿದೆ. ಡ್ಯಾಮ್ ನಿಂದ ವರತೆ ಪ್ರದೇಶಕ್ಕೂ ಸೂಕ್ತ ಪರಿಹಾರ ದೊರಕಿಸುವ ಶಾಸಕರ ಪ್ರಯತ್ನಕ್ಕೆ ತುಂಬೆ ಡ್ಯಾಂ ಸಂತ್ರಸ್ತ ರೈತರ ಹೋರಾಟ ಸಮಿತಿ ಅಧ್ಯಕ್ಷ ಎo ಸುಬ್ರಹ್ಮಣ್ಯ ಭಟ್ ಕೃತಜ್ಞತೆ ಸಲ್ಲಿಸಿದ್ದಾರೆ.