ಸೂರಿಕುಮೇರುವಿನಲ್ಲಿರುವ ಸೈಂಟ್ ಜೋಸೆಫ್ ಚರ್ಚಿನಲ್ಲಿ ಆತ್ಮಹತ್ಯಾ ತಡೆ ಅಭಿಯಾನ ದಿನವನ್ನು ಆಚರಿಸಲಾಯಿತು. ಸೂರಿಕುಮೇರು ಬರಿಮಾರ್ ಧರ್ಮ ಕೇಂದ್ರದ ಪ್ರಧಾನ ಧರ್ಮಗುರುಗಳಾದ ವಂದನೀಯ ಫಾದರ್ ಗ್ರೆಗರಿ ಪಿರೇರಾ ಬಲಿಪೂಜೆ ನಡೆಸಿ, ಆತ್ಮಹತ್ಯೆ ಮಾಡುವುದನ್ನು ವಿರೋಧಿಸೋಣ, ಜೀವನವೆಂಬುದು ದೇವರು ನಮಗೆ ಕೊಟ್ಟ ಸುಂದರ ವರವಾಗಿದ್ದು, ಎಲ್ಲರೂ ದೇವರ ಮೇಲೆ ಈ ವಿಶ್ವಾಸವನ್ನಿಟ್ಟು ಕೊನೆ ಉಸಿರು ದೇವರು ಕೊಂಡು ಹೋಗುವ ತನಕ ಒಳ್ಳೆಯ ಜೀವನ ನಡೆಸುವಂತೆ ಕರೆ ನೀಡಿದರು.
ಬಲಿಪೂಜೆ ಬಳಿಕ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ ಪೀಟರ್ ಪಾವ್ಲ್ ಸಲ್ಡಾನ್ಹಾ ನಿರ್ದೇಶನದಂತೆ ವಂದನೀಯ ಫಾದರ್ ಗ್ರೆಗರಿ ಪಿರೇರಾ ಎಲ್ಲರಿಗೂ ನಾನು ಆತ್ಮಹತ್ಯೆ ಮಾಡುವುದಿಲ್ಲ ಎಂಬ ಪ್ರತಿಜ್ಞಾವಿಧಿಯನ್ನು ನೆರವೇರಿಸಿದರು.
ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಎಲಿಯಾಸ್ ಪಿರೇರಾ ಮಾತನಾಡಿ, ಆತ್ಮಹತ್ಯೆ ಮಾಡುವುದರಿಂದ ಇಡೀ ಕುಟುಂಬಕ್ಕೆ ಅವಮಾನ ಮಾತ್ರವಲ್ಲದೆ ಉಳಿದವರೆಲ್ಲರೂ ಜೀವಮಾನವಿಡೀ ಕೊರಗುವುದರಿಂದಲೇ ದಿನವನ್ನು ಕಳೆಯಬೇಕು. ಇದರಿಂದ ನಾವು ದೂರ ಇರುವಂತೆ ಕರೆನೀಡಿದರು. ಜೀವನ್ ನಿಲಯ ಕಾನ್ವೆಂಟಿನ ಶ್ರೇಷ್ಠ ಧರ್ಮ ಭಗಿನಿ ಸಹೋದರಿ ನ್ಯಾನ್ಸಿ ಮಾತನಾಡಿ, ಯುವ ಜನರಿಗೆ ಆತ್ಮಹತ್ಯೆ ಮಾಡದಂತೆ ಕರೆ ನೀಡಿದರು. ನೆರೆದ ಎಲ್ಲರೂ ಆತ್ಮಹತ್ಯೆ ವಿರುದ್ಧವಾಗಿ ಹಳದಿ ಬಣ್ಣದ ರಿಬ್ಬನ್ನನ್ನು ಬಟ್ಟೆಗೆ ಹಚ್ಚುವ ಮುಖಾಂತರ ಆತ್ಮಹತ್ಯಾ ತಡೆ ಅಭಿಯಾನ ದಿನಾಚರಣೆಯಲ್ಲಿ ಪಾಲ್ಗೊಂಡರು. ಪಾಲನಾ ಸಮಿತಿಯ ಕಾರ್ಯದರ್ಶಿ ಮೇರಿ ಡಿಸೋಜ ವಂದಿಸಿದರು. ಆಲಿಫಿಯಾ ಪಿರೇರಾ ಕಾರ್ಯಕ್ರಮ ನಿರೂಪಿಸಿದರು.