ರಾಜ್ಯದಲ್ಲಿ ಕೃಷಿ ಭೂಮಿ ಗುತ್ತಿಗೆ ಮಾದರಿ ಮಸೂದೆ ೨೦೧೬ರ ಜಾರಿಗೊಳಿಸುವ ಯಾವುದೇ ತೀರ್ಮಾನವನ್ನು ರೈತಸಂಘ ವಿರೋಧಿಸುತ್ತಿದ್ದು, ಹೊಸ ಕೃಷಿ ನೀತಿ ಜಾರಿಗೊಳಿಸಿ, ರೈತರನ್ನು ಸಂರಕ್ಷಿಸಬೇಕು ಎಂದು ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ರಾಜ್ಯ ಕಾರ್ಯದರ್ಶಿ ರವಿಕಿರಣ್ ಪುಣಚ ಹೇಳಿದ್ದಾರೆ.
ಈ ಕುರಿತು ರಾಜ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಬಂಟ್ವಾಳ ತಹಸೀಲ್ದಾರ್ ಮೂಲಕ ಅವರು ಮನವಿಯನ್ನು ಶುಕ್ರವಾರ ಸಂಜೆ ಸಲ್ಲಿಸಿದರು. ಕೃಷಿ ಭೂಮಿ ಗುತ್ತಿಗೆ ಮಾದರಿ ಮಸೂದೆಯಲ್ಲಿನ ಬಿಂಬಿಸಲ್ಪಡುವ ಬೀಳುಭೂಮಿಯಿಂದ ಕೃಷಿ ಭೂಮಿಯಾಗಿ ಪರಿವರ್ತನೆ, ಕೃಷಿಗೆ ಬಂಡವಾಳದ ಕೊರತೆ ನೀಗಿಸುವ ಯೋಚನೆ, ತುಂಡು ಭೂಮಿಯಲ್ಲಿನ ಕಡಿಮೆ ಉತ್ಪಾದಕತೆಯಿಂದ ಕೃಷಿಯನ್ನು ವಿಶಾಲದೆಡೆಗೆ ಒಯ್ದರೆ ಅಧಿಕ ಉತ್ಪಾದಕತೆ ಅವಕಾಶಗಳು, ನೀರಿನ ಸದ್ಬಳಕೆ ಮೇಲ್ನೋಟಕ್ಕೆ ಚೆನ್ನಾಗಿ ಕಾಣಿಸಿದರೂ, ರೈತರಿಂದ ಭೂಕಬಳಿಕೆಗೆ ಅವಕಾಶ ಕಲ್ಪಿಸಿದಂತೆ ಕಾಣುತ್ತಿದೆ. ದೇಶದ ಆರ್ಥಿಕತೆ, ಆಹಾರ ಸಾರ್ವಭೌಮತೆ ಕಾಪಾಡಲು ಹೊಸ ಕೃಷಿ ನೀತಿಯನ್ನು ಮುಂದುವರಿದ ವಿಜ್ಞಾನದ ಸಹಕಾರದೊಂದಿಗೆ ಮಣ್ಣು, ಹವಾಮಾನ, ಬೆಳೆಪದ್ಧತಿ, ಸಮಯ, ದಾಸ್ತಾನು ಕಡಿಮೆ ನೀರಿನಿಂದ ಹೆಚ್ಚು ಉತ್ಪಾದನೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಧಾರಣೆಗೆ ಅನುಗುಣವಾದ ಬೆಳೆಗಳ ಉತ್ಪಾದನೆಗೆ ಪರ್ಯಾಯ ಬೆಳೆಗಳ ಉತ್ಪಾದನೆಗೆ ರೈತರನ್ನು ಉತ್ತೇಜಿಸಲು ಪೂರಕ ಕ್ರಮಗಳಿಂದ ಸಾಧ್ಯವೇ ಹೊರತು, ಬಂಡವಾಳ ಹೂಡಿಕೆ ನೆಪದಲ್ಲಿ ಕಾರ್ಪೊರೇಟ್ ಸಂಸ್ಥೆಗಳಿಗೆ ದೇಶೀಯ ಕೃಷಿ, ಕೃಷಿ ಭೂಮಿಯನ್ನು ಕಬಳಿಸಲು ಅವಕಾಶವನ್ನು ಖಂಡಿತವಾಗಿಯೂ ನೀಡಬಾರದು, ನಾವು ಇದಕ್ಕೆ ಅವಕಾಶ ಕೊಡುವುದಿಲ್ಲ ಎಂದು ಪುಣಚ ಹೇಳಿದರು.
ಈ ಸಂದರ್ಭ ರೈತಸಂಘ ಜಿಲ್ಲಾಧ್ಯಕ್ಷ ಓಸ್ವಾಲ್ಡ್ ಪ್ರಕಾಶ್ ಫೆರ್ನಾಂಡೀಸ್, ಜಿಲ್ಲಾ ಉಪಾಧ್ಯಕ್ಷ ಆಲ್ವೀನ್ ಮಿನೇಜಸ್, ಬಂಟ್ವಾಳ ತಾಲೂಕು ಉಪಾಧ್ಯಕ್ಷರಾದ ಸತೀಶ್ ಚಂದ್ರ ರೈ ಕಡೇಶ್ವಾಲ್ಯ ಲೊರೆಟ್ಟೋ ವಲಯ ಘಟಕದ ಪ್ರಧಾನ ಕಾರ್ಯದರ್ಶಿ ವಿವಿಯನ್ ಪಿಂಟೋ ಉಪಸ್ಥಿತರಿದ್ದರು.
www.bantwalnews.com ಸಂಪಾದಕ: ಹರೀಶ ಮಾಂಬಾಡಿ. ದೂರವಾಣಿ 9448548127