ಬೆಂಗಳೂರಿನಲ್ಲಿ ಅಮೂಲ್ಯ ಎಂಬ ಯುವತಿ ಪಾಕಿಸ್ತಾನ ಪರ ಘೋಷಣೆ ಹಾಕಿದ ಘಟನೆಯ ಹಿಂದಿರುವ ಎಲ್ಲ ಶಕ್ತಿಗಳನ್ನು ಬಂಧಿಸಿ, ಅವರೆಲ್ಲರ ಮೇಲೆ ಸಂಘಟಿತ ಅಪರಾಧ ನಿಯಂತ್ರಣ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಹಿಂದು ಜಾಗರಣಾ ವೇದಿಕೆ ಹೇಳಿದೆ.
ಬಂಟ್ವಾಳ ಮಿನಿ ವಿಧಾನಸೌಧ ಮುಂಭಾಗ ಪ್ರತಿಭಟನೆ ನಡೆಸಿದ ಹಿಂಜಾವೇ ವಿಟ್ಲ ಮತ್ತು ಬಂಟ್ವಾಳ ತಾಲೂಕು ಘಟಕ ಬಳಿಕ ಮುಖ್ಯಮಂತ್ರಿಗಳಿಗೆ ತಾಲೂಕು ಕಚೇರಿ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಿತು. ಈ ಸಂದರ್ಭ ಮಾತನಾಡಿದ ಹಿಂದು ಜಾಗರಣಾ ವೇದಿಕೆ ಪ್ರಾಂತ ಕಾರ್ಯದರ್ಶಿ ರಾಧಾಕೃಷ್ಣ ಅಡ್ಯಂತಾಯ, ಇಂಥ ಘಟನೆಗಳನ್ನು ಆರಂಭದಲ್ಲಿಯೇ ಹತ್ತಿಕ್ಕುವುದು ರಾಜ್ಯ ಸರಕಾರದ ಜವಾಬ್ದಾರಿಯಾಗಿದೆ. ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಲ್ಲ ಅತಿತಿಗಳ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು. ಸಣ್ಣಪುಟ್ಟ ಘಟನೆಗಳಲ್ಲಿಯೂ ಹಿಂದಿನ ಸರಕಾರ ಸಾಮಾಜಿಕ ಚಳವಳಿಗಾರರ ಮೇಲೆ ಕೋಕಾ ಕಾಯ್ದೆಯನ್ನು ಹಾಕುತ್ತಿತ್ತು, ಆದರೆ ಈಗ ದೇಶದ್ರೋಹ ಕೃತ್ಯ ಎಸಗಿದವರ ಮೇಲೆ ಅದನ್ನು ಬಳಸದಿರುವುದು ವಿಪರ್ಯಾಸ. ಈ ಪ್ರತಿಭಟನೆಗಳ ಹಿಂದೆ ವಿದೇಶಿ ಶಕ್ತಿಗಳ ಕೈವಾಡ ಇರುವುದು ಕಂಡುಬರುತ್ತಿದ್ದು, ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸಬೇಕು ಎಂದು ಹೇಳಿದರು.
ಈ ಸಂದರ್ಭ ವಿಭಾಗ ಸಂಪರ್ಕ ಪ್ರಮುಖ್ ರತ್ನಾಕರ ಶೆಟ್ಟಿ ಕಲ್ಲಡ್ಕ, ಜಿಲ್ಲಾ ಸಂಪರ್ಕ ಪ್ರಮುಖ್ ನರಸಿಂಹ ಶೆಟ್ಟಿ ಮಾಣಿ, ಜಿಲ್ಲಾಧ್ಯಕ್ಷ ಜಗದೀಶ ನೆತ್ರಕೆರೆ, ಬಂಟ್ವಾಳ ಅಧ್ಯಕ್ಷ ಚಂದ್ರ ಕಲಾಯಿ, ವಿಟ್ಲ ಅಧ್ಯಕ್ಷ ಗಣೇಶ್ ಕುಲಾಲ್, ಪ್ರಮುಖರಾದ ಪದ್ಮನಾಭ ಕಟ್ಟೆ, ಯೋಗೀಶ್ ತುಂಬೆ, ರವಿ ಭಂಡಾರಿ ಕಲ್ಲಡ್ಕ, ಮಚ್ಚೇಂದ್ರ ಸಾಲ್ಯಾನ್, ಶೇಖರ ಶೆಟ್ಟಿ ಅಮ್ಟಾಡಿ ಮತ್ತಿತರರು ಉಪಸ್ಥಿತರಿದ್ದರು.
www.bantwalnews.com ಸಂಪಾದಕ: ಹರೀಶ ಮಾಂಬಾಡಿ. ದೂರವಾಣಿ 9448548127