ಕವರ್ ಸ್ಟೋರಿ

ಬಂದಿದ್ದಾರೆ localfarmers

  • ಕೃಷಿಕನಿಗೂ ಲಾಭ, ಗ್ರಾಹಕನಿಗೂ ನಷ್ಟವಿಲ್ಲ

www.bantwalnews.com ಸಂಪಾದಕ: ಹರೀಶ ಮಾಂಬಾಡಿ. ದೂರವಾಣಿ 9448548127

ಜಾಹೀರಾತು

By Harish Mambady 

ಮಾರ್ಕೆಟ್ ನಿಂದ ಖರೀದಿ ಮಾಡುವ ಬದಲು ಮನೆಬಾಗಿಲಿಗೇ ತರಕಾರಿ ದೊರಕುವ ಕಾಲ ಹೈಟೆಕ್ ಸಿಟಿಗಳಲ್ಲಿ ಬಂದು ವರ್ಷಗಳಾಯಿತು. ಈಗ ನಮ್ಮೂರಿನ ತಾಜಾ ಉತ್ಪನ್ನಗಳು, ನಮ್ಮೂರಲ್ಲೇ ದೊರಕುವ ಕಾಲ ಬಂದಿದೆ. ಅದೂ ನೇರ ರೈತರಿಂದಲೇ. ಮಧ್ಯವರ್ತಿಗಳ ಕಾಟ ಇಲ್ಲಿಲ್ಲ. ಹೇಗೆ ಹುಡುಕುವುದು ಗೊತ್ತಾ, ಇಲ್ಲಿ ನೋಡಿ.

www.localfarmers.in

ಗೂಗಲ್ ನಲ್ಲಿ ಇದನ್ನು ಟೈಪ್ ಮಾಡಿ, ಹುಡುಕಾಟ ಸುಲಭ. ನೀವು ಬಂಟ್ವಾಳ ಪರಿಸರದವರಾದರೆ, ಬಿ.ಸಿ.ರೋಡ್ ಸೋಮಯಾಜಿ ಆಸ್ಪತ್ರೆ ಸಮೀಪ ಇರುವ ಬ್ರಾಹ್ಮಣ ಪರಿಷತ್ ಕಟ್ಟಡದ ನೆಲಮಹಡಿಗೆ ತೆರಳಿದರೆ ಲೋಕಲ್ ಫಾರ್ಮರ್ಸ್ ಕಚೇರಿ ಇದೆ. ತರಕಾರಿ, ಹೂವಿನ ಗಿಡ, ತರಕಾರಿ ಗಿಡ, ದೇಸಿ ಹಸುವಿನ ಶುದ್ಧ ತುಪ್ಪ, ಶುದ್ಧ ಕೊಬ್ಬರಿ ಎಣ್ಣೆ, ಅಕ್ಕಿ, ಬೇಳೆ ಕಾಳುಗಳು, ಧವಸ ಧಾನ್ಯ, ಹೀಗೆ ಕೃಷಿಕ ಏನು ಬೆಳೆಯುತ್ತಾನೋ ಅದನ್ನು ಕೃಷಿಕನಲ್ಲದವನು ಪಡೆಯಲು ಸುಲಭವಾಗುವ ವ್ಯವಸ್ಥೆ ಇದು. ಇಂಥದ್ದನ್ನು ಮೊದಲೇ ಹಲವರು ಮಾಡಿದ್ದಾರೆ. ಆದರೆ ಬಂಟ್ವಾಳ ತಾಲೂಕಿನ ಯುವಕರ ಈ ತಂಡ ವಿನೂತನವಾದದ್ದನ್ನೇ ಮಾಡಿದೆ. ಜತೆಗೆ ಬೆಂಗಳೂರುವರೆಗೂ ಇದರ ಮಾರುಕಟ್ಟೆ ವ್ಯಾಪಿಸಿದೆ.

 

ಇವರು ಲೋಕಲ್ ಫಾರ್ಮರ್ಸ್. ಅಂದರೆ ಸ್ಥಳೀಯ ಕೃಷಿಕರು ಎಂದರ್ಥ. ಸುಮಾರು 70ರಷ್ಟು ಕೃಷಿಕರ ನೆಟ್ವರ್ಕ್ ಇಲ್ಲಿದೆ. ಮೊದಲೇ ಹೇಳಿದಂತೆ www.localfarmers.in ಕ್ಲಿಕ್ ಮಾಡಿದರೆ ಕೃಷಿಕರ ಹೆಸರು, ಅವರ ಜಾಗ, ಅಲ್ಲಿ ಬೆಳೆಯುವ ವಸ್ತುಗಳ ವಿವರಗಳು ದೊರಕುತ್ತವೆ. ನೀವು ದೇಸಿ ತುಪ್ಪ ಪಡೆದುಕೊಳ್ಳಬೇಕೇ, ನಿಮಗೆ ಇಷ್ಟವೆನಿಸಿದ ಕೃಷಿಕರನ್ನು ಆಯ್ಕೆ ಮಾಡಿ ಪಡೆಯಬಹುದು. ಹೀಗೆ ಲೋಕಲ್ ಫಾರ್ಮರ್ಸ್ ಆನ್ ಲೈನ್ ಹುಡುಕಾಟ ಹಲವು ಸಾಧ್ಯತೆಗಳನ್ನು ತೋರಿಸಿದರೆ, ವಾರದ ಎಲ್ಲ ದಿನಗಳಲ್ಲೂ ಈ ತಂಡ ಮಂಗಳೂರಿನ ಇನ್ ಫಾಸಿಸ್, ಎಂಆರ್ ಪಿಎಲ್ ಸಮೀಪ, ಬಿ.ಸಿ.ರೋಡ್ ಹೀಗೆ ನಾನಾ ಕಡೆಗಳಲ್ಲಿ ಹೊರಾಂಗಣ ಮಾರುಕಟ್ಟೆಯನ್ನೂ ಕಲ್ಪಿಸುತ್ತದೆ. ಕೃಷಿ ಮೇಳಗಳಲ್ಲಿ ಇವರ ಸ್ಟಾಲ್ ಇರುತ್ತದೆ. ಉದ್ದೇಶ ಇಷ್ಟೇ ಬೆಳೆಯುವಾತನಿಗೆ ನ್ಯಾಯೋಚಿತ ಬೆಲೆಯಲ್ಲಿ ಮಾರುಕಟ್ಟೆ ದೊರಕಬೇಕು. ಅದನ್ನು ಈ ತಂಡ ಕಲ್ಪಿಸುತ್ತದೆ.

ಹಾನಿಕಾರಕ ರಾಸಾಯನಿಕ ಮುಕ್ತ, ಕಲಬೆರಕೆ ಮುಕ್ತ, ಕೃಷಿಕರದ್ದೇ ಆದ ಕೃಷಿಕರ ಗುಂಪಿನ ಬ್ರ್ಯಾಂಡ್ ಲೋಕಲ್ ಫಾರ್ಮರ್ಸ್ ತಂಡ. ನಮ್ಮಲ್ಲಿ ಪಾರದರ್ಶಕವಾದ ಸರಬರಾಜು ವ್ಯವಸ್ಥೆ ಇದೆ. ಕೃಷಿಕರಿಗೆ ಉತ್ತಮ ಬೆಲೆ, ಪರಿಸರ ಸ್ನೇಹಿ ಕೃಷಿಗೆ ಉತ್ತೇಜನ, ಪ್ರಾದೇಶಿಕ ಮತ್ತು ಸಾಂಪ್ರದಾಯಿಕ ಉತ್ಪನ್ನಗಳಿಗೆ ಉತ್ತೇಜನ ನೀಡುವ ಹಿನ್ನೆಲೆಯಲ್ಲಿ ಹಲವು ಬಗೆಯ ಉತ್ಪನ್ನಗಳನ್ನು ಒದಗಿಸುತ್ತಿದ್ದೇವೆ. ಲಾಭಗಳಿಕೆಗಾಗಿಯೇ ಮಾಡಿದ ಬ್ಯುಸಿನೆಸ್ ಇದಲ್ಲ, ಕೃಷಿಕರಿಗೆ ನ್ಯಾಯೋಚಿತ ಬೆಲೆ ನೀಡುವ ಉದ್ದೇಶದಿಂದ ರಚನೆಯಾದ ಸಮಾನ ಮನಸ್ಕರ ತಂಡ ನಮ್ಮದು ಎನ್ನುತ್ತಾರೆ ಇದರ ರೂವಾರಿ ಯತೀಶ್ ಶೆಟ್ಟಿ

ಮೂಲತಃ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದ ಬಂಟ್ವಾಳ ತಾಲೂಕಿನ ಬೊಂಡಾಲದ ಪ್ರಗತಿಪರ ಕೃಷಿಕ ಯತೀಶ್ ಶೆಟ್ಟಿ ಇದರ ರೂವಾರಿ. ಇವರಿಗೆ ಸಾಥ್ ನೀಡಿದವರು ಸ್ನೇಹಿತರಾದ ಶ್ರೀಹರಿಪ್ರಸಾದ್, ರಂಜಿತ್. ಜೊತೆಯಾಗಿ ಲೋಕಲ್ ಫಾರ್ಮರ್ಸ್ ಅನ್ನು ಕೊಂಡೊಯ್ಯುತ್ತಿರುವವರು ರಕ್ಷಿತಾ, ಗಣೇಶ್ ಶೆಣೈ, ಈಶ್ವರ್. ಇದಕ್ಕೊಂದು app ಅನ್ನು ಸೃಷ್ಟಿಸಿ ತಂತ್ರಜ್ಞಾನದಲ್ಲಿ ಕೃಷಿಕರನ್ನು ಬೆಸೆಯುತ್ತಿರುವವರು ರಜತ್ ಶೆಟ್ಟಿ. ಬಿ.ಸಿ.ರೋಡಿನ ಸೋಮಯಾಜಿ ಆಸ್ಪತ್ರೆ ಸಮೀಪ ಇರುವ ಬ್ರಾಹ್ಮಣ ಪರಿಷತ್ ಕಟ್ಟಡದ ನೆಲಮಹಡಿಯಲ್ಲಿ ಲೋಕಲ್ ಫಾರ್ಮರ್ಸ್ ಕಚೇರಿ ಇದೆ. ವಿಶೇಷವೆಂದರೆ ಸುಮಾರು ಎರಡು ವರ್ಷಗಳ ಅವಧಿಯಲ್ಲಿ ಒಟ್ಟುಗೂಡಿದ ನಾಲ್ಕೈದು ಜನರ ತಂಡದ ಈ ಪ್ರಯತ್ನದಿಂದ 70ಕ್ಕೂ ಅಧಿಕ ಸಾವಯವ ರೈತರು ಲಾಭ ಪಡೆಯುತ್ತಿದ್ದಾರೆ. ಸಾವಿರಕ್ಕೂ ಅಧಿಕ ಗ್ರಾಹಕರು ನ್ಯಾಯೋಚಿತ ಬೆಲೆಯಲ್ಲಿ ಉತ್ಕೃಷ್ಟ ಗುಣಮಟ್ಟದ ಉತ್ಪನ್ನಗಳನ್ನು ಪಡೆದಿದ್ದಾರೆ.

ಕೃಷಿಕರು ಬೆಳೆದ ಉತ್ಪನ್ನಗಳನ್ನು ಮಳಿಗೆ ಕಚೇರಿಗೆ ತಂದು ಕೊಡುತ್ತಾರೆ. ಸಾಮಾನ್ಯವಾಗಿ ಕೊಬ್ಬರಿ ಎಣ್ಣೆಗೆ ಅಂದಾಜು 180 ರೂ ಬೆಳೆಗಾರನಿಗೆ ದೊರಕಿದರೆ, ಇಲ್ಲಿ ಅಂದಾಜು 280 ರಷ್ಟು ಬೆಳೆಗಾರನಿಗೆ ದೊರಕುತ್ತದೆ. ನಿರ್ವಹಣೆ ವೆಚ್ಚವನ್ನಷ್ಟೇ ಸೇರಿಸಿ ಗ್ರಾಹಕನಿಗೆ ಇದನ್ನು ಮಾರಾಟ ಮಾಡುತ್ತದೆ ಲೋಕಲ್ ಫಾರ್ಮರ್ಸ್ ತಂಡ. ಬೆಳೆಗಾರನಿಗೆ ಒಂದೂವರೆ ಪಟ್ಟು ಲಾಭ!!. ಖರೀದಿದಾರನಿಗೂ ಸಾವಯವ ಉತ್ಪನ್ನ ಪಡೆದ ಖುಷಿ.

ಲೋಕಲ್ ಫಾರ್ಮರ್ಸ್ ಗೆ ಬರುವ ಉತ್ಪನ್ನಗಳ ಗುಣಮಟ್ಟವನ್ನು ಖುದ್ದು ನಿರ್ವಹಣೆ ನಡೆಸುವವರ ತಂಡ ಪರಿಶೀಲಿಸುತ್ತದೆ. ಉತ್ಪನ್ನಗಳನ್ನು ಸ್ವೀಕರಿಸುವ ಮೊದಲು ಬೆಳೆಯುವ ಜಾಗ ಹಾಗೂ ಗುಣಮಟ್ಟವನ್ನು ತಜ್ಞರು ಪರಿಶೀಲಿಸಿದ ಬಳಿಕವಷ್ಟೇ ಮಾರಾಟಕ್ಕಾಗಿ ರೈತರಿಂದ ಪಡೆದುಕೊಳ್ಳಲಾಗುತ್ತದೆ.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.