24ರಿಂದ ಕಾರ್ಯಕ್ರಮಗಳು ಆರಂಭ
ಒಡ್ಡೂರು ಧರ್ಮಚಾವಡಿಯಲ್ಲಿ ಶ್ರೀ ಕೊಡಮಣಿತ್ತಾಯ ಧರ್ಮದೈವದ ಪ್ರತಿಷ್ಠೆ, ಶತಚಂಡಿಕಾಯಾಗ ಹಾಗೂ ಧರ್ಮ ನೇಮೋತ್ಸವ ಫೆ.24ರಿಂದ 29ರವರೆಗೆ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಲಿದೆ ಎಂದು ಬಂಟ್ಬಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದ್ದಾರೆ.
ಒಡ್ಡೂರಿನಲ್ಲಿರುವ ತಮ್ಮ ನಿವಾಸದಲ್ಲಿ ಶುಕ್ರವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಕುಟುಂಬಿಕರು ಆರಾಧಿಸಿಕೊಂಡು ಬಂಸಿರುವ ಕೊಡಮಣಿತ್ತಾಯ ದೈವಕ್ಕೆ ಈ ಬಾರಿ ಒಡ್ಡೂರು ಧರ್ಮಚಾವಡಿಯನ್ನು ನಿರ್ಮಿಸಲಾಗಿದ್ದು, ಫೆ.24 ರಿಂದ ಪ್ರತಿನಿತ್ಯ ಧಾರ್ಮಿಕ ವಿಧಿವಿಧಾನಗಳು ನಡೆಯಲಿದೆ. ಫೆ.28 ರ ಶುಕ್ರವಾರ ಪೂರ್ವಾಹ್ನ ಧರ್ಮ ದೈವದ ಪ್ರತಿಷ್ಠೆ ಸಹಿತ ವಿವಿಧ ಧಾರ್ಮಿಕ ಕಾರ್ಯಗಳ ಜೊತೆಯಲ್ಲಿ ಸೂರ್ಯೋದಯದಿಂದಲೇ ವಿವಿಧ ಭಜನಾ ತಂಡಗಳ ಭಜನಾ ಕಾರ್ಯ ಆರಂಭವಾಗಲಿದ್ದು, ಮಾರನೇ ದಿನದ ಸೂರ್ಯೋದಯದ ತನಕ ನಿರಂತರವಾಗಿ 23 ಭಜನಾತಂಡಗಳು ಭಾಗಿಯಾಗಲಿದೆ ಎಂದರು.
ಫೆ.29 ರಂದು ಪೂರ್ವಾಹ್ನ ಶತಚಂಡಿಕಾಯಾಗ ಆರಂಭವಾಗಿ 11 ಗಂಟೆಗೆ ಪೂರ್ಣಾಹುತಿಯಾಗಲಿದೆ. ಬಳಿಕ 11.30ಕ್ಕೆ ಕೊಡಮಣಿತ್ತಾಯ ದೈವದ ಭಂಡಾರ ಏರಿ, ಪಲ್ಲ ಪೂಜೆಯ ಬಳಿಕ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ಮ 2 ರಿಂದ ರಾತ್ರಿ 9 ಗಂಟೆಯ ತನಕ ಯಕ್ಷಗಾನ ವೈಭವ, ಪ್ರಶಂಸ ತಂಡದ ಹಾಸ್ಯ, ಜಾನಪದ ಕಾರ್ಯಕ್ರಮಗಳ ಸಹಿತ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ರಾತ್ರಿ 9 ಗಂಟೆಯಿಂದ ಶ್ರೀ ಕೊಡಮಣಿತ್ತಾಯ ದೈವಕ್ಕೆ ಧರ್ಮ ನೇಮೋತ್ಸವ ನಡೆಯಲಿದೆ ಎಂದು ರಾಜೇಶ್ ನಾಯ್ಕ್ ವಿವರಿಸಿದರು.
29ರಂದು ಮುಖ್ಯಮಂತ್ರಿ ಬಿ.ಎಸ್ . ಯಡಿಯೂರಪ್ಪ ಆಗಮಿಸಲಿದ್ದಾರೆ. ಶತಚಂಡಿಕಾಯಾಗ ಪೂರ್ಣಾಹುತಿಯ ಸಂದರ್ಭ ಉಪಮುಖ್ಯಮಂತ್ರಿಗಳು ಹತ್ತಕ್ಕೂ ಅಧಿಕ ಮಂತ್ರಿಗಳು, ಉಭಯ ಸದನಗಳ ಸಭಾಧ್ಯಕ್ಷರು, 40ಕ್ಕೂ ಅಧಿಕ ಶಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದವರು ತಿಳಿಸಿದರು.
50 ಸಾವಿರಕ್ಕೂ ಅಧಿಕ ಭಾಗಿ ನಿರೀಕ್ಷೆ
ಧರ್ಮ ನೇಮೋತ್ಸವದ ದಿನದ ಕಾರ್ಯಕ್ರಮಕ್ಕೆ ತಾಲೂಕು ಸಹಿತ ಜಿಲ್ಲೆಯ ವಿವಿಧೆಡೆಗಳಿಂದ 50 ಸಾವಿರಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆ ಇದ್ದು, ಸೂಕ್ತ ಸಿದ್ಧತೆಗಳನ್ನು ನಡೆಸಲಾಗಿದೆ. ಒಡ್ಡೂರು ಗ್ರಾಮದ ಆಸುಪಾಸಿನ ಊರುಗಳಿಂದ ಹಾಗೂ ಬಂಟ್ವಾಳ ತಾಲೂಕಿನಿಂದ ಸುಮಾರು 3 ಸಾವಿರಕ್ಕೂ ಅಧಿಕ ಸ್ವಯಂ ಸೇವಕರನ್ನು ನಿಯೋಜಿಸಲಾಗಿದ್ದು ಅನ್ನ ಸಂತರ್ಪಣೆಯ ಕಾರ್ಯಗಳು ಫೆ.24 ರಿಂದಲೇ ಆರಂಭವಾಗಲಿದೆ ಎಂದರು.
ಉಚಿತ ಬಸ್:
ಶತಚಂಡಿಕಾಯಾಗ ಹಾಗೂ ಧರ್ಮನೇಮೋತ್ಸವದ ದಿನ ಒಡ್ಡೂರು ಧರ್ಮ ಚಾವಡಿಗೆ ಆಗಮಿಸುವ ಭಕ್ತಾಧಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಬಿ.ಸಿ.ರೋಡು ರಕ್ತೇಶ್ವರಿ ದೇವಸ್ಥಾನ ಹಾಗೂ ಪೊಳಲಿ ಸಮೀಪದ ಕೈಕಂಬದಿಂದ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದರು. ಭಂಡಾರ ಮನೆಯ ನಿರ್ಮಾಣದ ಮೇಲುಸ್ತುವಾರಿ ಮುರಳೀಧರ ಶೆಟ್ಟಿ, ಬಂಟ್ವಾಳ ಬಿಜೆಪಿ ಕ್ಷೇತ್ರಾಧ್ಯಕ್ಷ ಬಿ.ದೇವದಾಸ ಶೆಟ್ಟಿ ಪೂರಕ ಮಾಹಿತಿಗಳನ್ನು ನೀಡಿದರು.
ತಾಪಂ ಸದಸ್ಯ ಪ್ರಭಾಕರ ಪ್ರಭು, ಪ್ರಮುಖರಾದ ಪುಷ್ಪರಾಜ್ ಚೌಟ, ಪುರುಷೋತ್ತಮ ಶೆಟ್ಟಿ, ಸುದರ್ಶನ ಬಜ, ಸದಾನಂದ ನಾವುರ, ನಂದರಾಮ ರೈ, ಪವನ್ ಕುಮಾರ್ ಶೆಟ್ಟಿ, ಮನೋಜ್ ಕೋಟ್ಯಾನ್, ಪ್ರಣಾಮ್ ಅಜ್ಜಿಬೆಟ್ಟು, ತೇಜಸ್ ಕರ್ಪೆ ಸಹಿತ ಪ್ರಮುಖರು ಈ ಸಂದರ್ಭ ಉಪಸ್ಥಿತರಿದ್ದರು.
www.bantwalnews.com ಸಂಪಾದಕ: ಹರೀಶ ಮಾಂಬಾಡಿ. ದೂರವಾಣಿ 9448548127