ಯಕ್ಷಗಾನ

ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರಿ, ರವಿರಾಜ ಪನೆಯಾಲ ಅವರಿಗೆ ಬೊಂಡಾಲ ಪ್ರಶಸ್ತಿ

  • 21ರಂದು ಬಂಟ್ವಾಳ ತಾಲೂಕಿನ ಬೊಂಡಾಲದಲ್ಲಿ ರಾತ್ರಿ ಪ್ರದಾನ

www.bantwalnews.com ಸಂಪಾದಕ: ಹರೀಶ ಮಾಂಬಾಡಿ. ದೂರವಾಣಿ 9448548127

ಬೊಂಡಾಲ ಜನಾರ್ದನ ಶೆಟ್ಟಿ ಮತ್ತು ರಾಮಣ್ಣ ಶೆಟ್ಟಿ ಸಂಸ್ಮರಣಾರ್ಥ ನೀಡುವ ಬೊಂಡಾಲ ಪ್ರಶಸ್ತಿಯನ್ನು ಹಿರಿಯ ಯಕ್ಷಗಾನ ಕಲಾವಿದರಾದ ರವಿರಾಜ ಪನೆಯಾಲ ಮತ್ತು ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರಿ ಅವರಿಗೆ ನೀಡಲಾಗುವುದು ಎಂದು ಬೊಂಡಾಲ ಸಚ್ಚಿದಾನಂದ ಶೆಟ್ಟಿ ತಿಳಿಸಿದ್ದಾರೆ.

ಜಾಹೀರಾತು

ಬಂಟ್ವಾಳ ತಾಲೂಕಿನ ಶಂಭೂರು ಸಮೀಪದ ಬೊಂಡಾಲದಲ್ಲಿ ನಡೆಯುವ ಕಟೀಲು ಮೇಳದ ಯಕ್ಷಗಾನ ವೇದಿಕೆಯಲ್ಲಿ ಫೆಬ್ರವರಿ 21ರಂದು ರಾತ್ರಿ 10.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.

20ರಂದು ತುಳಸೀ ಜಲಂಧರ-ಮೀನಾಕ್ಷಿ ಕಲ್ಯಾಣ ಪ್ರಸಂಗ ಮತ್ತು 21ರಂದು ಶ್ರೀದೇವಿ ಮಹಾತ್ಮೆ ಕಥಾಭಾಗಗಳನ್ನು ಕಟೀಲು ಮೇಳದವರು ಬೊಂಡಾಲದಲ್ಲಿ ಆಡಿತೋರಿಸಲಿದ್ದು, 21ರಂದು ರಾತ್ರಿ 10.30ಕ್ಕೆ ಪ್ರಶಸ್ತಿ ಪ್ರದಾನ ನಡೆಯಲಿದೆ. ಸಭಾಧ್ಯಕ್ಷತೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ವಹಿಸಲಿದ್ದು, ಕಟೀಲು ಅನುವಂಶಿಕ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಆಶೀರ್ಚನ ನೀಡಲಿರುವರು. ಮುಖ್ಯ ಅತಿಥಿಯಾಗಿ ಮಾಜಿ ಸಚಿವ ಬಿ.ರಮಾನಾಥ ರೈ, ಮಂಗಳೂರಿನ ಲೆಕ್ಕಪರಿಶೋಧಕ ಬಿ.ಶಿವಾನಂದ ಪೈ ಭಾಗವಹಿಸುವರು. ಬೊಂಡಾಲ ಸೀತಾರಾಮ ಶೆಟ್ಟಿ ಮತ್ತು ಭಾಸ್ಕರ ರೈ ಕುಕ್ಕುವಳ್ಳಿ ವೇದಿಕೆಯಲ್ಲಿ ಉಪಸ್ಥಿತರಿರುವರು ಎಂದು ಬೊಂಡಾಲ ಸಚ್ಚಿದಾನಂದ ಶೆಟ್ಟಿ ಮತ್ತು ಶಂಭೂರು ದುರ್ಗಾಪರಮೇಶ್ವರಿ ಬಯಲಾಟ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.

ಬಂಟ್ವಾಳ ತಾಲೂಕಿನಲ್ಲಿ ಜನಪ್ರಿಯ ಶಿಕ್ಷಕರಾಗಿ, ಊರಿನ ಪಟೇಲರಾಗಿ ಪ್ರಸಿದ್ಧರಾಗಿದ್ದ ಬೊಂಡಾಲ ಜನಾರ್ದನ ಶೆಟ್ಟಿ ಅವರು ಹಳೆಯ ತಲೆಮಾರಿನ ನುರಿತ ಯಕ್ಷಗಾನ ಅರ್ಥಧಾರಿಗಳು. ಕೆ.ಪಿ.ವೆಂಕಪ್ಪ ಶೆಟ್ಟಿ, ನಾರಾಯಣ ಕಿಲ್ಲೆ, ಪೊಳಲಿ ಶಾಸ್ತ್ರಿ ,ಶೇಣಿ ಗೋಪಾಲಕೃಷ್ಣ ಭಟ್ ಮೊದಲಾದ ತಾಳಮದ್ದಳೆ ದಿಗ್ಗಜರ ಸಾಲಿನಲ್ಲಿ ಅರ್ಥ ಹೇಳುತ್ತಿದ್ದ ಅವರಿಗೆ ಯಕ್ಷಗಾನದ ಸಂಜಯ ಎಂದೇ ಹೆಸರು; ಕಾರಣ ಕೃಷ್ಣ ಸಂಧಾನದ ಅವರ ಸಂಜಯನ ಪಾತ್ರಕ್ಕೆ ಆ ಕಾಲದಲ್ಲಿ ಸರಿಗಟ್ಟುವವರೇ ಇಲ್ಲವಾಗಿತ್ತು. ಅವರ ಪುತ್ರ ಬೊಂಡಾಲ ರಾಮಣ್ಣ ಶೆಟ್ಟರು ಭೂಮಾಪನ ಅಧಿಕಾರಿಯಾಗಿ, ಯಕ್ಷಗಾನದ ಸಂಘಟಕ – ವೇ಼ಷಧಾರಿಯಾಗಿ ಜನಪ್ರಿಯರು. ಪ್ರಸ್ತುತ ಕೀರ್ತಿಶೇಷರಾಗಿರುವ ಈ ಇಬ್ಬರ ಹೆಸರಿನಲ್ಲಿ ಬೊಂಡಾಲ ಚ್ಯಾರಿಟೇಬಲ್ ಟ್ರಸ್ಟ್  ನೀಡುವ ಬೊಂಡಾಲ ಪ್ರಶಸ್ತಿಗೆ 2020 ನೇ ಸಾಲಿನಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಹಿರಿಯ ವೇಷಧಾರಿ ರವಿರಾಜ ಪನೆಯಾಲ ಮತ್ತು ಹಿಮ್ಮೇಳ ವಾದಕ ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರಿ ಆಯ್ಕೆಯಾಗಿದ್ದಾರೆ. ಕಟೀಲು ಮೇಳದಲ್ಲಿ ಸೇವೆಗೈದ ಕಲಾವಿದರಿಗಾಗಿಯೇ ಕಳೆದ ಒಂಭತ್ತು ವರ್ಷಗಳಿಂದ ನೀಡಲಾಗುತ್ತಿರುವ ಬೊಂಡಾಲ ಪ್ರಶಸ್ತಿಯನ್ನು ಫೆ.21ರಂದು ಬಂಟ್ವಾಳ ಶಂಭೂರು ಗ್ರಾಮದ ಬೊಂಡಾಲದಲ್ಲಿ ಜರಗುವ ಕಟೀಲು ಮೇಳದ ಬಯಲಾಟದ ರಂಗಸ್ಥಳದಲ್ಲಿ ಪ್ರದಾನಿಸಲಾಗುವುದು.

ರವಿರಾಜ ಪನೆಯಾಲ:

ಕಾಸರಗೋಡು ತಾಲೂಕಿನ ಪನೆಯಾಲದಲ್ಲಿ ದಿ.ಎನ್. ಕೇಶವ ಭಟ್ ಮತ್ತು ಶ್ರೀಮತಿ ಸಾವಿತ್ರಿ ದಂಪತಿಗೆ 1968ರಲ್ಲಿ ಜನಿಸಿದ ರವಿರಾಜ ಭಟ್ ಪಡ್ರೆ ವಾಣಿನಗರದ ಸರಕಾರಿ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿ ಕಲಿತು ಯಕ್ಷಗಾನದತ್ತ ಹೊರಳಿದರು. ಗುರು ಸಬ್ಬಣಕೋಡಿ ರಾಮ ಭಟ್ಟರಲ್ಲಿ ನಾಟ್ಯಾಭ್ಯಾಸ ಮಾಡಿ 1989ರಲ್ಲಿ ಕಟೀಲು ಮೇಳಕ್ಕೆ ಸೇರ್ಪಡೆಗೊಂಡರು. 1997 ರಲ್ಲಿ ಮೇಳ ಬಿಟ್ಟು ಕೃಷಿಯನ್ನು ಅವಲಂಬಿಸಿದ ಅವರು ಮರಳಿ 2004ರಲ್ಲಿ ಎಡನೀರು ಮೇಳ ಸೇರಿ ತಮ್ಮ ಯಕ್ಷಗಾನ ಸೇವೆಯನ್ನು ಮುಂದುವರಿಸಿದರು.

ಆರಂಭದಲ್ಲಿ ಬಣ್ಣದ ವೇಷಗಳನ್ನೇ ಮಾಡುತ್ತಿದ್ದ ರವಿ ರಾಜರು ಬಳಿಕ ಕಿರೀಟ ಹಾಗೂ ನಾಟಕೀಯ ವೇಷಗಳನ್ನು ನಿರ್ವಹಿಸತೊಡಗಿದರು. ಅರ್ಜುನ, ದೇವೇಂದ್ರ ,ಭೀಷ್ಮ, ಕರ್ಣ, ಕಂಸ, ಜರಾಸಂಧ, ರಾವಣ, ಶುಂಭ, ಮಹಿಷಾಸುರ, ಅರುಣಾಸುರ ಮುಂತಾದ ಪಾತ್ರಗಳಲ್ಲಿ ಅವರು ಪ್ರಸಿದ್ಧರು. ತಾಳಮದ್ದಳೆ ಕೂಟಗಳಲ್ಲಿ ಅರ್ಥಧಾರಿಯಾಗಿ ಯೂ ಪನೆಯಾಲರಿಗೆ ಪರಿಶ್ರಮವಿದೆ.       ಪತ್ನಿ ದುರ್ಗಾಪರಮೇಶ್ವರಿ ಮತ್ತು ಪುತ್ರ ಚಿನ್ಮಯರನ್ನೊಳಗೊಂಡ ಪುಟ್ಟ ಸಂಸಾರ ರವಿರಾಜರದ್ದು. 2015ರಿಂದ ಕಟೀಲು ಮೇಳಕ್ಕೆ ಮತ್ತೆ ಸೇರ್ಪಡೆಗೊಂಡಿರುವ ಅವರು ತಮ್ಮ ಕಲಾ ವ್ಯವಸಾಯವನ್ನು ಮುಂದುವರಿಸುತ್ತಿದ್ದಾರೆ.

 ಮಣಿಮುಂಡ ಸುಬ್ರಮಣ್ಯ ಶಾಸ್ತ್ರಿ:

ಮೂಡಿಗೆರೆ ತಾಲೂಕಿನ ಬಣಕಲ್ ನಲ್ಲಿ ಸುಬ್ಬಣ್ಣ ಶಾಸ್ತ್ರಿ ಮತ್ತು ರಮಾದೇವಿ ದಂಪತಿಯ ಪುತ್ರನಾಗಿ ಫೆಬ್ರವರಿ 23, 1966 ರಲ್ಲಿ ಜನಿಸಿದ ಮಣಿಮುಂಡ ಸುಬ್ರಹ್ಮಣ್ಯಶಾಸ್ತ್ರಿ ಕಲಿತದ್ದು ಏಳನೇ ತರಗತಿ. 1977ರಲ್ಲಿ ಧರ್ಮಸ್ಥಳ ಯಕ್ಷಗಾನ ಕೇಂದ್ರವನ್ನು ಸೇರಿ ಗುರು ಗೋವಿಂದ ಭಟ್ಟರಿಂದ ನಾಟ್ಯ ಕಲಿತು ವೇಷಧಾರಿಯಾಗಿ ಅವರು ತಮ್ಮ ವೃತ್ತಿಜೀವನವನ್ನು ಆರಂಭಿಸಿದರು.   ಧರ್ಮಸ್ಥಳ ಮೇಳದಲ್ಲಿ ಎರಡು ವರ್ಷ ಹಾಗೂ ಸುಂಕದಕಟ್ಟೆ ಮೇಳದಲ್ಲಿ ಒಂದು ವರ್ಷ ನಿತ್ಯ ವೇಷಗಳನ್ನು ಮಾಡುತ್ತಿದ್ದ ಸುಬ್ರಹ್ಮಣ್ಯಶಾಸ್ತ್ರಿ ಮುಂದೆ ಯಕ್ಷಗಾನದ ಹಿಮ್ಮೇಳದತ್ತ ಆಕರ್ಷಿತರಾದರು. ಮರಳಿ ಧರ್ಮಸ್ಥಳ ಕೇಂದ್ರವನ್ನು ಸೇರಿದ ಅವರು ನೆಡ್ಲೆ ನರಸಿಂಹ ಭಟ್ಟರಿಂದ ಚೆಂಡೆ – ಮದ್ದಳೆವಾದನವನ್ನು ಅಭ್ಯಸಿಸಿದರು. ಆ ಮೇಲೆ ಪುತ್ತೂರು  ಹಾಗೂ ಧರ್ಮಸ್ಥಳ ಮೇಳಗಳಲ್ಲಿ ಎರಡು ವರ್ಷ ತಿರುಗಾಟ ನಡೆಸಿದರು. ಈ ಹಂತದಲ್ಲಿ ಧರ್ಮಸ್ಥಳ ಮೇಳದ ಕಡತೋಕ ಮಂಜುನಾಥ ಭಾಗವತರು ಮತ್ತು ಕೃಷ್ಣಯ್ಯ ಬಲ್ಲಾಳರ ಸಮರ್ಥ ಮಾರ್ಗದರ್ಶನ ಅವರಿಗೆ ಲಭಿಸಿತು.  ತೆಂಕುತಿಟ್ಟಿನ ವಿವಿಧ ಮೇಳಗಳಲ್ಲಿ ಸುಮಾರು ಮೂರೂವರೆ ದಶಕಗಳ ತಿರುಗಾಟದ ಅನುಭವವಿರುವ ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರಿಗಳು ಪ್ರಸ್ತುತ ಕಳೆದ 11 ವರ್ಷಗಳಿಂದ ಕಟೀಲು ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.