ರಾಜ್ಯ ಮುಜರಾಯಿ ಇಲಾಖೆ ಆಯೋಜಿಸಿರುವ ಆಯ್ದ 100 ದೇವಸ್ಥಾನಗಳಲ್ಲಿ ಸಪ್ತಪದಿ ಸಾಮೂಹಿಕ ವಿವಾಹಕ್ಕೆ ಉತ್ತಮ ಬೆಂಬಲ, ಪ್ರೋತ್ಸಾಹ ದೊರಕುತ್ತಿದೆ. ಜನರಿಂದ ಸಕಾರಾತ್ಮಕ ಪ್ರತಿಕ್ರಿಯೆ ಲಭ್ಯವಾಗಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
www.bantwalnews.com Editor: Harish Mambady
ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಮಂಗಳವಾರ ಭೇಟಿ ನೀಡಿದ ವೇಳೆ ಮುಜರಾಯಿ ಇಲಾಖೆಯ ವತಿಯಿಂದ ಮೇ 24ರಂದು ನಂದಾವರ ಕ್ಷೇತ್ರದಲ್ಲಿ ನಡೆಯಲಿರುವ ಸಾಮೂಹಿಕ ವಿವಾಹದ ಕುರಿತು ವಿವರ ಪಡೆದುಕೊಂಡ ಬಳಿಕ ಮಾತನಾಡಿದ ಅವರು, ರಾಜ್ಯ ಮುಜರಾಯಿ ಇಲಾಖೆ ಸಾಮೂಹಿಕ ವಿವಾಹ ಯೋಜನೆಗೆ ಎಲ್ಲಡೆಯಿಂದ ವ್ಯಾಪಕ ಬೆಂಬಲ ಲಭಿಸಿದೆ. ಈ ವರ್ಷ ವಧು-ವರರ ಸಂಖ್ಯೆ ಕಡಿಮೆಯಿದ್ದರೂ ಭವಿಷ್ಯದಲ್ಲಿ ಇದೊಂದು ಉತ್ತಮ ಯೋಜನೆಯಾಗಿ ಹೊರಹೊಮ್ಮಲಿದೆ.
ಸರಳವಾಗಿ ವಿವಾಹವಾಗಲು ಬಯಸುವ ಎಲ್ಲರಿಗೂ ಇಲ್ಲಿ ಅವಕಾಶವಿದ್ದು, ಏ. 26 ಮತ್ತು ಮೇ 24ರಂದು ಈ ವಿವಾಹಗಳು ನಡೆಯಲಿವೆ. ಈ ವಿವಾಹ ಸಮಾರಂಭದ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈಗಾಗಲೇ ಸಪ್ತಪದಿ ರಥವನ್ನೂ ಬಿಡುಗಡೆ ಮಾಡಲಾಗಿದೆ. ವಧು-ವರರಿಗೆ ನೋಂದಣಿಗೆ ಮಾ. 27 ಕೊನೆಯ ದಿನಾಂಕವಾಗಿದ್ದು, ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರು ಒಂದು ಕ್ಷೇತ್ರಕ್ಕೆ ಬಂದು ವಧು-ವರರನ್ನು ಆಶೀರ್ವಾದ ಮಾಡಲು ಒಪ್ಪಿಕೊಂಡಿದ್ದಾರೆ ಎಂದರು.
ಇ-ಆಡಳಿತಕ್ಕೆ ಚಿಂತನೆ:
ಮುಜರಾಯಿ ದೇವಸ್ಥಾನಗಳಲ್ಲಿ ಯಾವುದೇ ಅಭಿವೃದ್ಧಿಯ ಅನುಮೋದನೆಗೆ ಅಲೆದಾಡಬೇಕಾದ ಸ್ಥಿತಿ ಇದ್ದು, ಅಭಿವೃದ್ಧಿ ಕಾರ್ಯಕ್ಕೆ ವೇಗ ನೀಡಲು ಇ-ಆಡಳಿತ ಜಾರಿಗೆ ತರಲು ಯೋಚಿಸಲಾಗಿದೆ. ಜತೆಗೆ ದೇವಸ್ಥಾನಗಳ ಮೂಲಕ ಮಹಿಳೆಯರು, ದುರ್ಬಲರ ಶ್ರೇಯಸ್ಸಿಗೆ ಯಾವುದಾದರೂ ಕಾರ್ಯಕ್ರಮ ನಡೆಸುವ ಚಿಂತನೆ ಇದೆ ಎಂದರು.
ಸಂಪರ್ಕ ರಸ್ತೆಗೆ ಮನವಿ:
ಭಕ್ತರ ಅನುಕೂಲದ ದೃಷ್ಟಿಯಿಂದ ನಂದಾವರ ಕ್ಷೇತ್ರಕ್ಕೆ ಪಾಣೆಮಂಗಳೂರಿನಿಂದ ನೇರ ಸಂಪರ್ಕಕ್ಕೆ ರಸ್ತೆಯ ಪ್ರಸ್ತಾಪವೊಂದಿದೆ. ಈ ಹಿಂದೆ ಬಂಟ್ವಾಳ ಶಾಸಕರಾಗಿದ್ದ ಬಿ.ರಮಾನಾಥ ರೈ ಅವರು ಸುಮಾರು 6.40 ಕೋ.ರೂ.ಗಳ ಪ್ರಸ್ತಾಪವನ್ನು ಲೋಕೋಪಯೋಗಿ ಇಲಾಖೆಯಿಂದ ಪ್ರವಾಸೋದ್ಯಮ ಇಲಾಖೆಗೆ ಕಳುಹಿಸಿಕೊಟ್ಟಿದ್ದರು. ಈಗಿನ ಶಾಸಕ ರಾಜೇಶ್ ನಾಯ್ಕ್ ಅವರು 7 ಕೋ.ರೂ.ಗಳ ಪ್ರಸ್ತಾವನೆಯನ್ನು ನೀಡಿದ್ದಾರೆ. ಇದರ ಕುರಿತು ಗಮನ ಹರಿಸಲು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎ.ಸಿ.ಭಂಡಾರಿ ಮನವಿ ಮಾಡಿದರು.