ಭಕ್ತರ ಅನುಕೂಲಕ್ಕೋಸ್ಕರ ನಂದಾವರ ಕ್ಷೇತ್ರದಲ್ಲಿ ಉತ್ತಮ ಸೌಕರ್ಯಗಳನ್ನು ಒದಗಿಸಲಾಗಿದೆ. ಭಗವಂತನ ಅನುಗ್ರಹ ಎಲ್ಲರಿಗೂ ಸದಾ ಇರಲಿ ಎಂದು ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಹೇಳಿದರು.
ಭಾನುವಾರ ಬಂಟ್ವಾಳ ತಾಲೂಕಿನ ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಾಣಗೊಂಡ ಜ್ಞಾನಮಂದಿರ ಸಭಾಭವನ ಲೋಕಾರ್ಪಣಾ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
www.bantwalnews.com ಸಂಪಾದಕ: ಹರೀಶ ಮಾಂಬಾಡಿ. ದೂರವಾಣಿ: 9448548127
ಜ್ಞಾನಮಂದಿರ ಮತ್ತು ಶ್ರೀಮತಿ ವಿಜಯಲಕ್ಷ್ಮೀ ಸುಜೀರ್ ಗುತ್ತು ಸಂಜೀವ ಚೌಟ ಸಭಾಂಗಣವನ್ನು ಉದ್ಘಾಟಿಸಿದ ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿ ಮಾತನಾಡಿ, ದೇವಸ್ಥಾನಕ್ಕೆ ತಮ್ಮ ಗಳಿಕೆಯ ಪಾಲನ್ನು ಕೊಡುವ ಭಕ್ತರು ಅಭಿನಂದನಾರ್ಹರು. ವಿಶ್ವಕ್ಕೆ ಬೆಳಕು ನೀಡುವ ಆಧ್ಯಾತ್ಮ ಶಕ್ತಿಯನ್ನು ಭಾರತ ನೀಡುತ್ತಿದೆ. ಇಲ್ಲಿ ಧರ್ಮ ನಂದಾದೀಪವಾಗಿ ದೇಶವನ್ನು ಬೆಳಗುತ್ತಿದೆ ಎಂದರು.
ಯಜ್ಞ ಮಂಟಪವನ್ನು ಉದ್ಘಾಟಿಸಿದ ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರ್ಮಿಕ ಆಚರಣೆಗಳು ನಡೆಯುತ್ತಿರುವುದು ಸಂತಸದಾಯಕ ವಿಚಾರ. ಭಗವಂತನ ಸಾಮ್ರಾಜ್ಯದಲ್ಲಿ ಸಾಮರಸ್ಯದೊಂದಿಗೆ ಮುನ್ನಡೆಯಬೇಕು ಎಂದು ಹಾರೈಸಿದರು.
ಮಹಾರುದ್ರಪೀಠ, ಸ್ನಾನಘಟ್ಟವನ್ನು ಅನಾವರಣಗೊಳಿಸಿದ ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ನಾನು ಎಂಬುದನ್ನು ತ್ಯಜಿಸಿ ಎಲ್ಲವೂ ದೇವರ ಕೃಪೆ ಎಂಬ ಭಾವವನ್ನು ಪಡೆಯಬೇಕು. ಸಮಾಜದಲ್ಲಿ ಆತಂಕ ಇಲ್ಲದ ಸ್ಥಿತಿ ನಿರ್ಮಾಣವಾಗಬೇಕು. ಜನರ ನೆಮ್ಮದಿಗೋಸ್ಕರ ದೇವಸ್ಥಾನಗಳ ಅಭಿವೃದ್ಧಿಯಾಗಬೇಕು ಎಂದು ಹಾರೈಸಿದರು.
ಅರ್ಚಕರ ವಿಶ್ರಾಂತಿಗೃಹ, ನೈವೇದ್ಯ ಕೊಠಡಿ ಕಚೇರಿಯನ್ನು ವಿಧಾನಪರಿಷತ್ತು ಸದಸ್ಯ ಕೆ.ಹರೀಶ್ ಕುಮಾರ್ ಶುಭ ಹಾರೈಸಿದರು.
ಸಭಾಂಗಣವನ್ನು ಕೊಡುಗೆಯಾಗಿ ನೀಡಿದ ಮೈಟ್ ಸಂಸ್ಥೆ ಮುಖ್ಯಸ್ಥ ರಾಜೇಶ್ ಚೌಟ ಮಾತನಾಡಿ, ನಂದಾವರ ಕ್ಷೇತ್ರದೊಂದಿಗಿನ ಒಡನಾಟವನ್ನು ಸ್ಮರಿಸಿದರು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಸಿ.ಭಂಡಾರಿ ಕ್ಷೇತ್ರ ಬೆಳೆದು ಬಂದ ದಾರಿ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ದೇವಸ್ಥಾನಕ್ಕೆ ನಾನಾ ಕೊಡುಗೆಗಳನ್ನು ನೀಡಿದ ಪುಷ್ಪಾ ಎಸ್. ಹೆಗ್ಡೆ, ಪುಷ್ಪಲತಾ ಜೆ.ಆಚಾರ್ಯ, ಮೋಹನದಾಸ ಪೂಜಾರಿ ಬೊಳ್ಳಾಯಿ, ಅಣ್ಣು ನಾಯ್ಕ್ ನಗ್ರಿ ಅವರನ್ನು ಗೌರವಿಸಲಾಯಿತು.
ದ.ಕ.ಜಿ.ಪಂ. ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಮತ್ತು ಕೆ.ರವೀಂದ್ರ ಕಂಬಳಿ ಗಜಪ್ರತಿಷ್ಠೆಗೆ ಮಾಲಾರ್ಪಣೆ ಮಾಡಿದರು. ಈ ಸಂದರ್ಭ ತಾಪಂ ಸದಸ್ಯರಾದ ನಸೀಮಾ ಬೇಗಂ, ಕೆ.ಸಂಜೀವ ಪೂಜಾರಿ, ಸ್ಥಳೀಯ ಗ್ರಾಮ ಪಂಚಾಯತಿಗಳ ಅಧ್ಯಕ್ಷರಾದ ಶರೀಫ್, ವಿಶ್ವನಾಥ ಬೆಳ್ಚಾಡ, ಉಮಾವತಿ, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಹರಿಶ್ಚಂದ್ರ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕೆ.ಪ್ರಭಾಕರ ಶೆಟ್ಟಿ, ಎಸ್.ಗಂಗಾಧರ ಕೊಳಕೆ, ಡಾ.ಎಸ್.ಎಂ.ಗೋಪಾಲಕೃಷ್ಣ ಆಚಾರ್ಯ, ಮೋಹನದಾಸ ಪೂಜಾರಿ ಬೊಳ್ಳಾಯಿ, ಅಣ್ಣು ನಾಯ್ಕ್ ನಗ್ರಿ, ರಮಾ ಎಸ್. ಭಂಡಾರಿ ಉಪಸ್ಥಿತರಿದ್ದರು. ಕ್ಷೇತ್ರದ ಪ್ರಧಾನ ಅರ್ಚಕ ವೇ.ಮೂ.ಮಹೇಶ್ ಭಟ್ ಅವರು ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ನಿವೃತ್ತ ಮುಖ್ಯೋಪಾಧ್ಯಾಯ ಬಿ.ರಾಮಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು. ರಾತ್ರಿ 7 ಗಂಟೆಯ ಬಳಿಕ ಕ್ಷೇತ್ರದಲ್ಲಿ ಜಾತ್ರೋತ್ಸವ ಆರಂಭಗೊಂಡವು. ಜ.14ರವರೆಗೆ ಇಲ್ಲಿ ಜಾತ್ರೆ ನಡೆಯಲಿದ್ದು, 12ರಂದು ಮಹಾರಥೋತ್ಸವ ನಡೆಯಲಿದೆ.