ನಂದಾವರದಿಂದ ಪಾಣೆಮಂಗಳೂರು ಸಂಪರ್ಕಿಸುವ ಸೇತುವೆ ಸಹಿತ ಸಂಪರ್ಕ ರಸ್ತೆ ನಿರ್ಮಿಸಲು ಪ್ರವಾಸೋದ್ಯಮ ಇಲಾಖೆ ಮೂಲಕ ಕಳುಹಿಸಿದ ಪ್ರಸ್ತಾವನೆಯನ್ನು ಇತರ ಇಲಾಖೆಗಳ ನೆರವಿನ ಮೂಲಕ ನಿರ್ಮಿಸಲು ಆದ್ಯತೆ ನೀಡಲಾಗುವುದು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದರು.
ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಕ್ಷೇತ್ರದಲ್ಲಿ ನೂತನ ನಿರ್ಮಿತ 53 ಲಕ್ಷ ರೂ. ವೆಚ್ಚದ ನೇತ್ರಾವತಿ ನದಿ ತಡೆಗೋಡೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಹೆಚ್ಚಿನ ಎಲ್ಲ ಧಾರ್ಮಿಕ ಕ್ಷೇತ್ರಗಳ ಸಂಪರ್ಕ ರಸ್ತೆಯನ್ನು ಅಭಿವೃದ್ದಿ ಮಾಡುವಲ್ಲಿ ಶಾಸಕನಾಗಿ ಆಯ್ಕೆಯಾದ ಸಂದರ್ಭದಿಂದಲೂ ಆದ್ಯತೆ ನೀಡಿ ಕೆಲಸ ಮಾಡಿದ್ದೇನೆ. ದೇವಸ್ಥಾನಕ್ಕೆ ಬರುವ ಭಕ್ತರಿಗೆ ಇದರಿಂದ ಸಂಪರ್ಕಿಸಲು ಸುಲಭ ಆಗುವುದು ಎಂದರು.
ಶಾಸಕನಾಗಿ ಆಯ್ಕೆಯಾದ ತಕ್ಷಣದಲ್ಲಿ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಸಂಪರ್ಕ ರಸ್ತೆ ಅಭಿವೃದ್ದಿ ಪಡಿಸಿದ್ದು ನಂತರ ಶ್ರೀಕ್ಷೇತ್ರ ನಂದಾವರಕ್ಕೆ ಸಂಪರ್ಕಿಸುವ ರಸ್ತೆಯನ್ನು ಪೂರ್ಣ ಅಭಿವೃದ್ದಿ ಪಡಿಸಿದ್ದಾಗಿ ತಿಳಿಸಿದರು.
ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಸಿ.ಭಂಡಾರಿ ಪ್ರಾಸ್ತಾವಿಕ ಮಾತನಾಡಿ, ಇಲ್ಲಿನ ಅಭಿವೃದ್ದಿ ಕೆಲಸಗಳ ಬಗ್ಗೆ ಮನವಿ ಮಾಡಿ ರಸ್ತೆ ದುರಸ್ತಿಗಾಗಿ ಶಾಸಕರಲ್ಲಿ ಕೇಳಿಕೊಂಡಾಗ ಸಂಪೂರ್ಣ ರಸ್ತೆ ವಿಸ್ತರಣೆ ಅಭಿವೃದ್ದಿ ಮಾಡಿಸುವ ಮೂಲಕ ತಕ್ಷಣವೇ ಸ್ಪಂದಿಸಿ ಕೆಲಸ ಮಾಡಿದ್ದಾರೆ. ತಡೆಗೋಡೆ ಕೆಲಸಕ್ಕೆ ಅನುದಾನ ಒದಗಿಸಿದ್ದಾರೆ. ಎಲ್ಲ ರೀತಿಯ ಸಹಕಾರ ನೀಡಿದ್ದಾರೆ ಎಂದು ಅಭಿನಂದಿಸಿದರು.
ಜಿ.ಪಂ. ಸದಸ್ಯ ರವೀಂದ್ರ ಕಂಬಳಿ, ಪ್ರಮುಖರಾದ ಶ್ರೀಕಾಂತ್ ಶೆಟ್ಟಿ ಉಪಸ್ಥಿತರಿದ್ದರು. ಪ್ರಧಾನ ಅರ್ಚಕ ವೇ| ಮೂ| ಮಹೇಶ್ ಭಟ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕೆ. ಮೋಹನದಾಸ ಪೂಜಾರಿ ಬೊಳ್ಳಾಯಿ, ಅಣ್ಣು ನಾಯ್ಕ್ ನಗ್ರಿ, ಕೆ.ಪ್ರಭಾಕರ ಶೆಟ್ಟಿ ಉಪಸ್ಥಿತರಿದ್ದರು. ಎಸ್. ಗಂಗಾಧರ ಭಟ್ ಕೊಳಕೆ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.