ಬೌದ್ಧಿಕ ಆಸ್ತಿ ಹಕ್ಕು ಕುರಿತು ಒಂದು ದಿನದ ರಾಷ್ಟ್ರೀಯ ವಿಚಾರಸಂಕಿರಣ ಬಂಟ್ವಾಳ ಸರಕಾರಿ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ, ಸ್ನಾತಕೋತ್ತರ ವಾಣಿಜ್ಯ ವಿಭಾಗ, ಪ್ಯಾರಾಲೀಗಲ್ ಸೆಲ್, ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ರೋಟರಿ ಕ್ಲಬ್ ಬಂಟ್ವಾಳ ಸಹಯೋಗದಲ್ಲಿ ಬಂಟ್ವಾಳ ರೋಟರಿ ಸಭಾಂಗಣದಲ್ಲಿ ಗುರುವಾರ ನಡೆಯಿತು.
ಬಂಟ್ವಾಳ ಹೆಚ್ಚುವರಿ ಸೀನಿಯರ್ ಸಿವಿಲ್ ನ್ಯಾಯಾಧೀಶೆ ಶಿಲ್ಪಾ ಜಿ.ತಿಮ್ಮಾಪುರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಡಿಜಿಟಲ್ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿರುವ ಈ ಕಾಲಘಟ್ಟದಲ್ಲಿ ಬೌದ್ಧಿಕ ಆಸ್ತಿ ರಕ್ಷಣೆಯ ಕುರಿತು ಗಮನಹರಿಸಬೇಕಾಗಿರುವುದು ಅಗತ್ಯವಾಗಿದೆ. ಅದಕ್ಕೆ ಈ ಕಾರ್ಯಾಗಾರ ಸಹಕಾರಿಯಾಗಲಿ ಎಂದು ಹೇಳಿದರು.
ನಿಟ್ಟೆಯ ಪ್ರಾಧ್ಯಾಪಕ, ಕಾರ್ಪೊರೇಟ್ ತರಬೇತುದಾರ ಡಾ. ಸುಧೀರ್ ರಾಜ್ ಕೆ. ದಿಕ್ಸೂಚಿ ಭಾಷಣ ಮಾಡಿ, ಪ್ರಸಕ್ತ ಕಾಲಘಟ್ಟದಲ್ಲಿ ಬೋಧಕ, ಬೋಧಕೇತರ ವರ್ಗವಷ್ಟೇ ಅಲ್ಲ, ಜನಸಾಮಾನ್ಯರೂ ಬೌದ್ಧಿಕ ಆಸ್ತಿಗಳನ್ನು ಸ್ಥಾಪಿಸುವುದು ಹಾಗೂ ಸಂರಕ್ಷಿಸುವ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಿನ್ಸಿಪಾಲ್ ಡಾ. ಗಿರೀಶ ಭಟ್ ಅಜಕ್ಕಳ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಜೈನ್, ರೋಟರಿ ಕ್ಲಬ್ ಬಂಟ್ವಾಳ ಅದ್ಯಕ್ಷೆ ಶಿವಾನಿ ಬಾಳಿಗಾ, ಕಾಲೇಜು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ್ ಕುಮಾರ್ ಪಿ. ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಕಾರ್ಯಕ್ರಮ ಸಂಯೋಜಕ ಪ್ರೊ. ಹೈದರ್ ಆಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಾಗಾರದ ಉದ್ದೇಶಗಳನ್ನು ತಿಳಿಸಿದರು. ಮತ್ತೋರ್ವ ಸಂಯೋಜಕ ಬಾಲಸುಬ್ರಹ್ಮಣ್ಯ ಉಪಸ್ಥಿತರಿದ್ದರು. ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶದ ಡಾ. ಸತೀಶ್ ಗಟ್ಟಿ ಸ್ವಾಗತಿಸಿದರು. ಸುರೇಖಾ ಕಾರ್ಯಕ್ರಮ ನಿರೂಪಿಸಿದರು.