ಟೀಮ್ ಗ್ಲೆಡಿಯೇಟರ್ಸ್ ನ ಪ್ರಾಯೋಜಕತ್ವದಲ್ಲಿ ಬಂಟ್ವಾಳ ತಾಲೂಕಿನಲ್ಲಿ ಪ್ರಥಮ ಬಾರಿಗೆ ಫೆ.9ರಂದು ಬಿ.ಸಿ.ರೋಡಿನ ಬಸ್ತಿಪಡ್ಪು ಮೈದಾನದಲ್ಲಿ ಬೈಕ್ ರೇಸ್ ನಡೆಯಲಿದೆ.
ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟೀಮ್ ಗ್ಲೆಡಿಯೇಟರ್ಸ್ ನ ಪದಾಧಿಕಾರಿಗಳು, ಅಂದು ಬೆಳಗ್ಗೆ 9 ಗಂಟೆಗೆ ಕಾರ್ಯಕ್ರಮವನ್ನು ಶಾಸಕ ರಾಜೇಶ್ ನಾಯ್ಕ್ ಉದ್ಘಾಟಿಸಲಿದ್ದಾರೆ. ಸಂಜೆ ನಡೆಯುವ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಮಾಜಿ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಸಹಿತ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಅನಾರೋಗ್ಯ ಪೀಡಿತರಿಗೆ ಧನ ಸಹಾಯ, ಸಾಧಕರಾದ ಸುದರ್ಶನ್, ವಿನ್ಸೆಂಟ್ ಪಿಂಟೊ, ಉದಯ ಕುಮಾರ್ ವಗ್ಗ ಮೊದಲಾದವರಿಗೆ ಸನ್ಮಾನ ಹಾಗೂ ವಿಶೇಷ ಚೇತನರ ಚೆಸ್ ಪಂದ್ಯಾಟದಲ್ಲಿ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಯಶಸ್ವಿ ಕೆ. ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಪರಿಸರ ಜಾಗೃತಿ ಮೂಡಿಸುವ ಉದ್ದೇಶದಿಂದ ಔಷಧೀಯ ಸಸಿಗಳನ್ನು ವಿತರಿಸಲಾಗುವುದು ಎಂದು ಹೇಳಿದರು.
ಬೆಂಗಳೂರು, ಮೈಸೂರು, ಹಾಸನ, ಚಿಕ್ಕಮಂಗಳೂರು, ಮಂಗಳೂರು ಸಹಿತ ರಾಜ್ಯದ ವಿವಿಧ ಭಾಗಗಳಿಂದ ಹಾಗೂ ಕೇರಳ ರಾಜ್ಯದಿಂದ ಸುಮಾರು 50ಕ್ಕೂ ಅಧಿಕ ಸ್ಪರ್ಧಾಳು ಭಾಗವಹಿಸುವ ನಿರೀಕ್ಷೆ ಇದೆ. 2 ಸ್ಟ್ರೋಕ್, 4 ಸ್ಟ್ರೋಕ್, ಇಂಡಿಯನ್ ಓಪನ್, ಓಪನ್ ಕ್ಲಬ್ ಕ್ಲಾಸ್, ಎಕ್ಸ್ಪರ್ಟ್ ಕ್ಲಾಸ್, ನೋವೀಸ್, ಸ್ಥಳೀಯ ವಿಭಾಗ, ಬೆಸ್ಟ್ ರೈಡರ್ ಹೀಗೆ ಎಂಟು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ ಎಂದು ತಿಳಿಸಿದ ಅವರು, ಇದರಲ್ಲಿಯಲ್ಲಿ ಬಂಟ್ವಾಳ ಮತ್ತು ಬೆಳ್ತಂಗಡಿಯ ಸ್ಥಳೀಯ ಪ್ರತಿಭೆಗಳಿಗೂ ಭಾಗವಹಿಸಲು ಅವಕಾಶ ನೀಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಎಲ್ಸನ್ ಲಾಯ್ಡ್ ಮೆನೇಜಸ್ ನರಿಕೊಂಬು, ನವೀನ್ ಕುಮಾರ್ ಮೈರಾನ್ಪಾದೆ, ಉದಯ ಕುಮಾರ್ ವಗ್ಗ, ಪ್ರಸಾದ್ ಮರ್ದೋಳಿ, ವಿಜಯ ಪಾಯ್ಸ್ ಅಲ್ಲಿಪಾದೆ, ಸದಾನಂದ ಉಪಸ್ಥಿತರಿದ್ದರು.