ಬಡ ಕುಟುಂಬದ ಹೆಣ್ಣು ಮಕ್ಕಳ ಭವಿತವ್ಯಕ್ಕೆ ಆಸರೆಯಾಗುವ ನಿಟ್ಟಿನಲ್ಲಿ ವಿವಾಹಯೋಗ್ಯ 11 ಹೆಣ್ಣು ಮಕ್ಕಳಿಗೆ ಆರ್ಥಿಕ ನೆರವು ನೀಡಲು ಗ್ರಾಮ ಪಂಚಾಯತ್ ಸದಸ್ಯರೊಬ್ಬರು ಮುಂದಾಗಿ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಧರ್ಮಸ್ಥಳ ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಮಠಾಧೀಶ ಶ್ರೀ ಬ್ರಹ್ಮಾನಂದ ಸ್ವಾಮೀಜಿ ಅವರ ಶುಭಾಶೀರ್ವದೊಂದಿಗೆ, ಬಂಟ್ವಾಳ ತಾಲೂಕು ಬಡಗಕಜೆಕಾರು ಗ್ರಾಮ ಪಂಚಾಯತ್ ಸದಸ್ಯ, ಅಂಬಡೆಮಾರು ಗಂಗಾಧರ ಪೂಜಾರಿ ಮತ್ತು ಕುಟುಂಬದ ವತಿಯಿಂದ ಸೌಭಾಗ್ಯ ಸಂಭ್ರಮ ಎಂಬ ಈ ಕಾರ್ಯಕ್ರಮ ಮತ್ತು ಫೆ.೭ರಂದು ಕಜೆಕಾರು ಶ್ರೀ ಮಹಾದೇವ ದೇವೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ ಎಂದು ಸಂಘಟಕ ಗಂಗಾಧರ ಪೂಜಾರಿ ಸೋಮವಾರ ಸಂಜೆ ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗ್ರಾಪಂ ಸದಸ್ಯನಾಗಿ ಐದು ವರ್ಷಗಳಲ್ಲಿ ದೊರೆತ ೪೫ ಸಾವಿರ ರೂ ಗೌರವಧನ ಸಹಿತ ಪ್ರತಿಯೊಬ್ಬರಿಗೆ ೨೫ ಸಾವಿರ ರೂ ನೆರವು ನೀಡುವ ಉದ್ದೇಶವನ್ನು ಹೊಂದಿದ್ದೇನೆ ಎಂದವರು ತಿಳಿಸಿದರು. ಈಗಾಗಲೇ ೩೮ ಹೆಣ್ಣುಮಕ್ಕಳಿಗೆ ವೈಯಕ್ತಿಕ ನೆಲೆಯಲ್ಲಿ ನೆರವು ನೀಡಿದ್ದೇನೆ. ಈ ಕಾರ್ಯವನ್ನು ಇತರರೂ ಮಾಡಲಿ ಎಂದು ಕಾರ್ಯಕ್ರಮ ಏರ್ಪಡಿಸಿರುವುದಾಗಿ ಅವರು ಹೇಳಿದರು.
ಬೆಳಗ್ಗೆ ಧರ್ಮಸ್ಥಳ ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಮಠಾಧೀಶ ಶ್ರೀ ಬ್ರಹ್ಮಾನಂದ ಸ್ವಾಮೀಜಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಲಿರುವರು.ಗ್ರಾ.ಪಂ.ಅಧ್ಯಕ್ಷ ವಜ್ರ ಪೂಜಾರಿ ಬಾರ್ದೊಟ್ಟು ಅವರು ಅಧ್ಯಕ್ಷತೆ ವಹಿಸಲಿರುವರು. ಮಡಂತ್ಯಾರು ಚರ್ಚ್ ಧರ್ಮಗುರು ವಂ| ಫಾ| ಬೇಸಿಲ್ ವಾಸ್, ಸಂಸದ ನಳಿನ್ ಕುಮಾರ್ ಕಟೀಲು, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಶಾಸಕರಾದ ಸುನಿಲ್ ಕುಮಾರ್, ಹರೀಶ್ ಪೂಂಜ, ತಹಶೀಲ್ದಾರ್ ರಶ್ಮಿ ಎಸ್.ಆರ್., ಮಾಜಿ ಸಚಿವ ಬಿ.ರಮಾನಾಥ ರೈ, ಮಾಜಿ ಶಾಸಕರಾದ ಕೆ. ವಸಂತ ಬಂಗೇರ,ಪ್ರಭಾಕರ ಬಂಗೇರ, ಜಿ.ಪಂ.ಸದಸ್ಯರಾದ ಬಿ.ಪದ್ಮಶೇಖರ ಜೈನ್, ಎಂ.ತುಂಗಪ್ಪ ಬಂಗೇರ, ಪಿಡಿಒ ಬಾಲಕೃಷ್ಣ ಪೂಜಾರಿ ಮತ್ತಿತರ ಗಣ್ಯರು ಭಾಗವಹಿಸಲಿರುವರು.
ಕಾರ್ಯಕ್ರಮದಲ್ಲಿ ಅವಿಭಕ್ತ ಕುಟುಂಬವೊಂದಕ್ಕೆ ಗೌರವಾರ್ಪಣೆ ಮತ್ತು ಸಾಧಕರಿಗೆ ಅಭಿನಂದನೆ ಕಾರ್ಯಕ್ರಮ ನಡೆಯಲಿದ್ದು, ಕಂಬಳ ಪೋಷಕ ಕಕ್ಯಪದವು ಪರಂಗಾಲು ದಿ. ವೆಂಕಪ್ಪ ಗೌಡ ಅವರ ಕುಟುಂಬಕ್ಕೆ ಗೌರವಾರ್ಪಣೆ ಮತ್ತು ಶ್ರೀ ಕ್ಷೇ.ಧ. ಗ್ರಾ.ಯೋಜನೆಯ ೨೫ ವರ್ಷ ಪೂರೈಸಿದ ೨ ಸಂಘಕ್ಕೆ, ಸುಧಾಕರ ಶೆಣೈ ಖಂಡಿಗ ದಂಪತಿಗೆ, ಸಂಜೀವ ಶೆಟ್ಟಿ ಬೆಳ್ತಂಗಡಿ, ಶ್ರೀ ಮಹಾದೇವ ದೇವೇಶ್ವರ ಭಜನ ಮಂಡಳಿಗೆ ಅಭಿನಂದನೆ, ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ ಈಶ್ವರಮಂಗಳ ಅವರಿಗೆ ಸನ್ಮಾನ ನಡೆಯಲಿದೆ ಎಂದು ಗಂಗಾಧರ ಪೂಜಾರಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ವಸಂತ ಸಾಲಿಯಾನ್, ಪ್ರಕಾಶ್ ಪೂಜಾರಿ ಉಪಸ್ಥಿತರಿದ್ದರು.