ಪ್ರಮುಖ ಸುದ್ದಿಗಳು

ತ್ಯಾಜ್ಯ ನಿರ್ವಹಣೆಗೆ ಪರ್ಯಾಯ ಜಾಗ ಹುಡುಕಿ: ಅಧಿಕಾರಿಗಳಿಗೆ ರಾಜ್ಯ ಮುಖ್ಯ ಕಾರ್ಯದರ್ಶಿ ಸೂಚನೆ

ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ತ್ಯಾಜ್ಯಗಳನ್ನು ಸುರಿಯುವ ಪಚ್ಚನಾಡಿ ಘಟಕದಲ್ಲಿ ಸಮಸ್ಯೆಗಳು ಕಂಡುಬಂದಿರುವುದರಿಂದ ಪರ್ಯಾಯ ಸ್ಥಳ ಹುಡುಕುವಂತೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಸೂಚಿಸಿದ್ದಾರೆ.

ಪಚ್ಚನಾಡಿ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಭೇಟಿ ನೀಡಿ, ಅಧಿಕಾರಿಗಳೊಂದಿಗೆ ಸಮಾಲೋಚಿಸಿದರು. ಮುಂದಿನ ದಿನಗಳಲ್ಲಿ ಪಚ್ಚನಾಡಿ ಘಟಕದಲ್ಲಿ ತ್ಯಾಜ್ಯ ನಿರ್ವಹಣೆಗೆ ತಾಂತ್ರಿಕವಾಗಿ ಯುಕ್ತವಲ್ಲ ಎಂದು ಕಂಡುಬಂದಿದೆ. ತ್ಯಾಜ್ಯ ನಿರ್ವಹಣೆ ದೊಡ್ಡ ಸವಾಲಾಗಿದೆ. ಈ ನಿಟ್ಟಿನಲ್ಲಿ ಪರ್ಯಾಯವಾದ ಜಾಗ ಪರಿಶೀಲಿಸಬೇಕು ಎಂದು ಅವರು ತಿಳಿಸಿದರು.

ಕಲ್ಲು ಕೋರೆ ನಡೆಸಿ ಪಾಳು ಬಿದ್ದಿರುವ ಸ್ಥಳಗಳು ತ್ಯಾಜ್ಯ ನಿರ್ವಹಣೆಗೆ ಸೂಕ್ತವಾಗಿದೆ. ಈ ಬಗ್ಗೆಯೂ ಗಮನಿಸಬೇಕು. ಇಂತಹ ಸ್ಥಳ ದೂರ ಇದ್ದರೂ, ತ್ಯಾಜ್ಯ ನಿರ್ವಹಣೆಗೆ ಸೂಕ್ತವಾಗಿದೆ ಎಂದು ವಿಜಯಭಾಸ್ಕರ್ ತಿಳಿಸಿದರು.

ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರು ಮುಖ್ಯ ಕಾರ್ಯದರ್ಶಿಗಳಿಗೆ ಮಾಹಿತಿ ನೀಡಿ, ಕಳೆದ ಮಳೆಗಾಳದಲ್ಲಿ ಪಚ್ಚನಾಡಿ ತ್ಯಾಜ್ಯ ಘಟಕದಿಂದ ಸುಮಾರು 8 ಲಕ್ಷ ಮೆಟ್ರಿಕ್ ಟನ್‍ಗಳಷ್ಟು ತ್ಯಾಜ್ಯ ಕೆಳಭಾಗಕ್ಕೆ ಹೋಗಿ ಜನವಸತಿ ಪ್ರದೇಶಕ್ಕೆ ನುಗ್ಗಿದೆ. ಸಂತ್ರಸûರಿಗೆ ಈಗಾಗಲೇ ತಾತ್ಕಾಲಿಕ ಪರಿಹಾರ ಒದಗಿಸಲಾಗಿದೆ ಎಂದರು.

ಪಚ್ಚನಾಡಿ ಘಟಕದ ಪರಿಶೀಲನೆಗೆ ಉನ್ನತ ತಾಂತ್ರಿಕ ತಂಡ ಬಂದಿದೆ. ತ್ಯಾಜ್ಯ ಘಟಕದ ವಿನ್ಯಾಸವು ವಿಲೇವಾರಿಗೆ ಸೂಕ್ತವಾಗಿಲ್ಲ ಎಂದು ತಂಡ ತಿಳಿಸಿದೆ. ಅಲ್ಲದೇ, ಘಟಕದಲ್ಲಿರುವ ತ್ಯಾಜ್ಯವನ್ನು ಬಯೋಮೈನಿಂಗ್ ಮೂಲಕ ವಿಲೇವಾರಿಗೆ ಸೂಚಿಸಿದೆ ಎಂದರು.

ಈ ಸಂದರ್ಭದಲ್ಲಿ ಶಾಸಕ ಡಾ. ಭರತ್ ಶೆಟ್ಟಿ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸೆಲ್ವಮಣಿ, ಮಹಾನಗರಪಾಲಿಕೆ ಆಯುಕ್ತ ಶಾನಾಡಿ ಅಜಿತ್ ಕುಮಾರ್, ಉಪ ಆಯುಕ್ತೆ ಗಾಯತ್ರಿ ನಾಯಕ್, ಮಾಜಿ ಮೇಯರ್ ಭಾಸ್ಕರ್ ಮತ್ತಿತರರು ಇದ್ದರು.

ಮಂದಾರ ಭೇಟಿ: ಬಳಿಕ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರು ತ್ಯಾಜ್ಯದಿಂದ ಸಮಸ್ಯೆಗೀಡಾದ ಮಂದಾರ ಪ್ರದೇಶಕ್ಕೆ ಭೇಟಿ ನೀಡಿ ವೀಕ್ಷಿಸಿದರು. ಈ ಸಂದರ್ಭದಲ್ಲಿ ಸ್ಥಳೀಯರ ಅಹವಾಲು ಆಲಿಸಿದ ಅವರು, ಇಲ್ಲಿನ ನಿರ್ವಸಿತರಿಗೆ ಸೂಕ್ತ ಪರಿಹಾರ ಒದಗಿಸುವ ಸಂಬಂಧ ಜಿಲ್ಲಾಡಳಿತದೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.

ಶಾಸಕ ಡಾ. ಭರತ್ ಶೆಟ್ಟಿ ಅವರು, ಇದೊಂದು ದೊಡ್ಡ ದುರಂತವಾಗಿದ್ದು, ಸ್ಥಳೀಯರು ಸರ್ವಸ್ವವನ್ನೂ ಕಳೆದುಕೊಂಡಿದ್ದಾರೆ. ಈಗಾಗಲೇ ಮುಖ್ಯಮಂತ್ರಿಯವರೊಂದಿಗೂ ಈ ಸಂಬಂಧ ಚರ್ಚಿಸಲಾಗಿದೆ. ತ್ವರಿತವಾಗಿ ನಿರಾಶ್ರಿತರಿಗೆ ಸ್ಪಂದಿಸಬೇಕಾಗಿದೆ ಎಂದು ಮುಖ್ಯ ಕಾರ್ಯದರ್ಶಿಯವರ ಗಮನಕ್ಕೆ ತಂದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ