ಪ್ರಮುಖ ಸುದ್ದಿಗಳು

ಏ.26ರಂದು ಗೋಕರ್ಣದಲ್ಲಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಲೋಕಾರ್ಪಣೆ

  • ಪದವಿಯೊಂದಿಗೆ ದೇಶೀಯ ಶಿಕ್ಷಣದ ಅರಿವು ನೀಡುವ  ಮಹತ್ವಾಕಾಂಕ್ಷೆಯ ಯೋಜನೆ

www.bantwalnews.com Editor: Harish Mambady

ಗೋಕರ್ಣ ಸಮೀಪ ಅಶೋಕೆ ಎಂಬಲ್ಲಿ ಈ ವರ್ಷ ಏಪ್ರಿಲ್ 26ರಂದು ಶ್ರೀರಾಮಚಂದ್ರಾಪುರ ಮಠದ ವತಿಯಿಂದ ಆಚಾರ್ಯ ಚಾಣಕ್ಯನ ಹೆಸರಿನಲ್ಲಿ ತಕ್ಷಶಿಲಾ ಮಾದರಿಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಏ.26ರಂದು ಲೋಕಾರ್ಪಣೆಗೊಳ್ಳಲಿದೆ.

ಮಂಗಳೂರಿನ ಕುಂಜತ್ತಬೈಲಿನ ಮಾರುತಿ ಬಡಾವಣೆಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ,

ಆದಿಗುರು ಶ್ರೀ ಶಂಕರಾಚಾರ್ಯರಿಗೆ ಕಿರುಗಾಣಿಕೆಯಾಗಿ ವಿಶ್ವವಿದ್ಯಾಪೀಠವನ್ನು ಸಮರ್ಪಿಸುತ್ತಿದೆ. ಇಡೀ ಸಮಾಜದಲ್ಲಿ ಧರ್ಮ ಜಾಗೃತಿ ಹಾಗೂ ದೇಶದ ಸಂಸ್ಕೃತಿಯ ಪುನರುತ್ಥಾನಕ್ಕೆ ನಾಂದಿ ಹಾಡುವ ವಿಶ್ವವಿದ್ಯಾಪೀಠವೊಂದರ ಸ್ಥಾಪನೆಯ ಅಗತ್ಯತೆ- ಅನಿವಾರ್ಯತೆ ಕಂಡುಬಂದ ಹಿನ್ನೆಲೆಯಲ್ಲಿ ವಿವಿವಿ ಸ್ಥಾಪನೆಗೆ ಶ್ರೀಮಠ ಮುಂದಾಗಿದೆ ಎಂದವರು ಹೇಳಿದರು. ಎಲ್ಲ ಜಾತಿ, ಧರ್ಮೀಯರು, ಭಾರತೀಯರಷ್ಟೇ ಅಲ್ಲ, ವಿದೇಶಿಯರಿಗೂ ಇಲ್ಲಿ ಕಲಿಯಲು ಅವಕಾಶವಿದೆ. ಕಡಿಮೆ ಶುಲ್ಕ, ಅರ್ಹರಿಗೆ ಸ್ಕಾಲರ್ ಶಿಪ್ ನೀಡಲಾಗುವುದು. ಇಲ್ಲಿ ಕಲಿತ ವಿದ್ಯಾರ್ಥಿಗಳು ಉತ್ತಮ ಉದ್ಯೋಗಾವಕಾಶಗಳನ್ನು ಪಡೆದುಕೊಂಡು ದೇಶದ ಸತ್ಪ್ರಜೆಯಾಗುವುದರಲ್ಲಿ ಸಂಶಯವಿಲ್ಲ ಎಂದವರು ಹೇಳಿಒದರು.

ಸಾಂಕೇತಿಕ ಶುಲ್ಕ, ಸ್ಕಾಲರ್ ಶಿಪ್: ವಿದ್ಯಾಪೀಠ 25 ಎಕರೆ ವಿಸ್ತೀರ್ಣದ ಜಾಗದಲ್ಲಿ ಕಾರ್ಯನಿರ್ವಹಿಸಲಿದೆ. ಸುಮಾರು 200 ಕೋಟಿ ರೂ. ಅಂದಾಜು ವೆಚ್ಚ ಇದಕ್ಕಿದೆ. ಆರಂಭದಲ್ಲಿ 12 ಫ್ಯಾಕಲ್ಟಿ, 80 ಡಿಪಾರ್ಟ್ಮೆಂಟ್‌ನಲ್ಲಿ 280 ವಿಧದ ಪಠ್ಯವನ್ನು ಬೋಧಿಸುವ ಉದ್ದೇಶ ಹೊಂದಲಾಗಿದೆ. ಈ ವಿದ್ಯಾಲಯ ವಸತಿಯುತ ವ್ಯವಸ್ಥೆಯ ಅಡಿಯಲ್ಲಿ ನಡೆಯಲಿದೆ

ಶಂಕರಾಚಾರ್ಯರು ಮೂರು ಬಾರಿ ಭೇಟಿ ನೀಡಿದ ಮತ್ತು ಹಲವು ತಿಂಗಳ ಕಾಲ ವಾಸವಿದ್ದ, ಶಂಕರರ ಜ್ಞಾನಶಿಶು ಎನಿಸಿದ ಶ್ರೀ ರಾಮಚಂದ್ರಾಪುರ ಮಠದ ಮೂಲಸ್ಥಾನ, ಗೋಕರ್ಣ ಸಮೀಪದ ಅಶೋಕೆಯ ಸ್ವಚ್ಛ, ಸುಂದರ ಪರಿಸರದಲ್ಲಿ ನೂತನ ವಿಶ್ವವಿದ್ಯಾಪೀಠ ತಲೆ ಎತ್ತಲಿದೆ. ಹತ್ತು ತಿಂಗಳ ಅವಧಿಯಲ್ಲಿ ಪರಿಪೂರ್ಣ ವಿಶ್ವವಿದ್ಯಾಪೀಠವನ್ನು ಸಮಾಜಕ್ಕೆ ಸಮರ್ಪಿಸಲು ಉದ್ದೇಶಿಸಲಾಗಿದೆ.

ವಿದ್ಯಾಪೀಠದಲ್ಲಿ ಚಿಕ್ಕಮಕ್ಕಳು, ಯುವಕರು ಹಾಗೂ ಹಿರಿಯರಿಗೆ ಪ್ರತ್ಯೇಕವಾಗಿ ಶಿಕ್ಷಣ ಪಡೆಯುವ ವ್ಯವಸ್ಥೆ ಇದೆ. ಅಶೋಕೆಯಲ್ಲಿ ಸ್ಥಾಪನೆಯಾಗಲಿರುವ ವಿದ್ಯಾಪೀಠದ ಜತೆಯಲ್ಲಿ ನಾಲ್ಕು ಕಡೆಗಳಲ್ಲಿ ಮಠದ ಶಾಖೆಗಳ ಜಾಗದಲ್ಲಿ ಪ್ರಾದೇಶಿಕ ಕೇಂದ್ರ ಸ್ಥಾಪನೆಯಾಗಲಿದೆ. ವಿಶ್ವವಿದ್ಯಾಪೀಠದ ಮಹತ್ವವನ್ನು ಸಮಾಜಕ್ಕೆ ಪರಿಚಯಿಸುವ ದೃಷ್ಟಿಯಿಂದ ಈಗಾಗಲೇ ಬೆಂಗಳೂರಿನಲ್ಲಿ ಸಂವಾದ ಏರ್ಪಡಿಸಲಾಗಿದ್ದು, ಉತ್ತಮ ಸ್ಪಂದನೆ ಸಿಕ್ಕಿದೆ. ಮಂಗಳೂರಿನಲ್ಲೂ ಮುಂದಿನ ತಿಂಗಳು ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಶ್ರೀ ರಾಘವೇಶ್ವರ ಸ್ವಾಮೀಜಿ ಹೇಳಿದರು.

ವಿಶ್ವವಿದ್ಯಾಪೀಠದಲ್ಲಿ ವಿಕಾಸಗೊಂಡ ವಿದ್ಯಾರ್ಥಿ ಬಾಹ್ಯಜಗತ್ತಿನಲ್ಲಿ ಅಪ್ರಸ್ತುತನಾಗರಬಾರದು ಎಂಬ ಕಾರಣಕ್ಕೆ ಇಂಗ್ಲಿಷ್, ಹಿಂದಿ ಮೊದಲಾದ ನವಸಮಾಜ ಭಾಷೆಗಳ ಅಧ್ಯಯನಕ್ಕೂ ಅವಕಾಶ ಇರುತ್ತದೆ. ಸಮಾಜದ ಎಲ್ಲ ವರ್ಗದವರಿಗೂ ಇಲ್ಲಿ  ಅವಕಾಶವಿದ್ದು, ಅವರವರಿಗೆ ಸಲ್ಲುವ ವಿದ್ಯೆಗಳನ್ನು ಅವರು ಪಡೆದುಕೊಳ್ಳಬಹುದಾಗಿದೆ ಎಂದರು.ಅತ್ಯಾಧುನಿಕ ಸಂಪರ್ಕ ವ್ಯವಸ್ಥೆ ಮೂಲಕ ದೇಶದ ಮೂಲೆಮೂಲೆಗಳ ತಜ್ಞ ವಿದ್ವಾಂಸರಿಂದ ಪಾಠದ ವ್ಯವಸ್ಥೆ ಇಲ್ಲಿನ ವೈಶಿಷ್ಟ ಸರ್ಕಾರದ ಮಾನ್ಯತೆಯ ಅವಶ್ಯಕತೆ ಇರುವಲ್ಲಿ ಪರೀಕ್ಷೆಗಳನ್ನು ಅಧಿಕೃತ ವ್ಯವಸ್ಥೆಯಿಂದ ಪಡೆದುಕೊಳ್ಳಲು ಪರ್ಯಾಯ ಕ್ರಮ ಅನುಸರಿಸಲಾಗುತ್ತದೆ ಎಂದು ತಿಳಿಸಿದರು.

ಗೋಸತ್ಸಂಗ:

ಭಾರತೀಯ ಗೋತಳಿಗಳ ಸಂರಕ್ಷಣೆ, ಸಂವರ್ಧನೆಗೆ ಕಳೆದ ಮೂರು ದಶಕಗಳಿಂದ ಶ್ರಮಿಸುತ್ತಿರುವ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರಿಂದ ವಿಶೇಷ ಗೋ ಸತ್ಸಂಗ ಕಾರ್ಯಕ್ರಮ ಬುಧವಾರ ಸಂಜೆ ನಡೆಯಿತು.
ಮಾರುತಿ ಬಡಾವಣೆ ನಿವಾಸಿಗಳ ಸಂಘ, ಬಜರಂಗ ದಳದ ಕಾವೂರು ಪ್ರಖಂಡ, ಓಂ ಫ್ರೆಂಡ್ಸ್, ಕುಳ ಫ್ರೆಂಡ್ಸ್ ಕ್ಲಬ್, ದುರ್ಗಾದೇವಿ ಭಜನಾ ಮಂದಿರ, ಸ್ನೇಹಬಳಗ, ನಂದಿನಿ ಮಹಿಳಾ ಮಂಡಳಿ, ಸ್ತ್ರೀಶಕ್ತಿ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಈ ಬೃಹತ್ ಕಾರ್ಯಕ್ರಮ ನಡೆಯಿತು. ಶಾಸಕ ಡಾ. ವೈ. ಭರತ್ ಶೆಟ್ಟಿ, ಸ್ವಾಗತ ಸಮಿತಿ ಅಧ್ಯಕ್ಷ ಮತ್ತು ಮಹಾನಗರ ಪಾಲಿಕೆ ಸದಸ್ಯ ಶರತ್ ಕುಮಾರ್, ಕಾರ್ಯಾಧ್ಯಕ್ಷ ದಯಾನಂದ ಶೆಟ್ಟಿ ಮತ್ತು ಕಾರ್ಯದರ್ಶಿ ಉದಯಶಂಕರ ಭಟ್ ಸಹಿತ ಪ್ರಮುಖರು ಉಪಸ್ಥಿತರಿದ್ದರು.
ಭವ್ಯ ಮೆರವಣಿಗೆ: ಕುಂಜತ್ತಬೈಲ್ ಸರ್ಕಲ್‍ನಲ್ಲಿ ಸ್ವಾಮೀಜಿಯವರನ್ನು ಭವ್ಯವಾಗಿ ಸ್ವಾಗತಿಸಿ ಕಾರ್ಯಕ್ರಮ ನಡೆಯುವ ಮಾರುತಿ ಲೇಔಟ್‍ಗೆ ಮೆರವಣಿಯಲ್ಲಿ ಕರೆದೊಯ್ಯಲಾಯಿತು. ಕೇರಳ ಚೆಂಡೆ, ನಾಸಿಕ್ ಬ್ಯಾಂಡ್ ಸೆಟ್ ನೊಂದಿಗೆ ಪೂರ್ಣಕುಂಭದೊಂದಿಗೆ ತೆರೆದ ವಾಹನದಲ್ಲಿ ಸ್ವಾಮೀಜಿಯವರ ಮೆರವಣಿಗೆ ನಡೆಯಿತು.
23ರಂದು ಮಧ್ಯಾಹ್ನ ಶ್ರೀಗಳು ಆಶೀರ್ಚನ ನೀಡಿದರು. ನಾಗರಿಕರ ಪರವಾಗಿ ಗೋನಿದಿಯನ್ನು ಇದೇ ಸಂದರ್ಭದಲ್ಲಿ ಸ್ವಾಮೀಜಿಯವರಿಗೆ ಸಮರ್ಪಿಸಲಾಯಿತು. ಶ್ರೀಮಠದ ಗೋಸೇವಾ ಕೈಂಕರ್ಯಗಳಿಗೆ ಕೈಜೋಡಿಸುವ ದೃಷ್ಟಿಯಿಂದ ಕುಂಜತ್ತಬೈಲಿನ 50ಕ್ಕೂ ಹೆಚ್ಚು ಮನೆಗಳಲ್ಲಿ ಗೋಧನ ಹುಂಡಿಗಳನ್ನು ಇಡಲು ಉದ್ದೇಶಿಸಿದ್ದು, ಗೋಪ್ರೇಮಿಗಳಿಗೆ ಸ್ವಾಮೀಜಿಯವರು ಗೋಧನ ಹುಂಡಿಗಳನ್ನು ವಿತರಿಸಿದರು.
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ